ಒಬ್ಬರು ಝೆನ್ ಗುರುಗಳ ಬಳಿ ಇಪ್ಪತ್ತು ಶಿಷ್ಯರು ಹಾಗೂ ಒಬ್ಬಳು ಶಿಷ್ಯೆ ಕಲಿಯುತ್ತಿದ್ದರು. ಆಕೆಯ ಹೆಸರು ಎಷುನ್ ಎಂದು. ಹದಿಹರೆಯದ ಹುಡುಗಿ, ರೂಪವತಿ. ಕಾಷಾಯ ವಸ್ತ್ರ ಧರಿಸಿದ್ದರೂ ಆಕೆ ಅತ್ಯಂತ ಮೋಹಕವಾಗಿ ಕಾಣುತ್ತಿದ್ದಳು. ಮಠದಲ್ಲಿದ್ದ ಹಲವು ಸಂನ್ಯಾಸಿಗಳು ಆಕೆಯನ್ನು ಗುಟ್ಟಾಗಿ ಪ್ರೀತಿಸುತ್ತಿದ್ದರು. ಅಂಥವರಲ್ಲೊಬ್ಬ ಆಕೆಗೆ ಒಂದು ಪತ್ರವನ್ನೂ ಬರೆಯುವ ಧೈರ್ಯ ಮಾಡಿದ. ಪತ್ರದಲ್ಲಿ, ತಾನು ಆಕೆಯನ್ನು ಅದೆಷ್ಟು ಆಳವಾಗಿ ಪ್ರೀತಿಸುತ್ತಿದ್ದೇನೆಂದು ವಿವರವಾಗಿ ಬರೆದು, ಇಬ್ಬರೂ ಗುಟ್ಟಾಗಿ ಭೇಟಿಯಾಗೋಣ ಎಂಬ ವಿನಂತಿಯನ್ನೂ ಸೇರಿಸಿದ. ಪತ್ರವನ್ನು ಹೇಗೋ ಆಕೆಗೆ ತಲುಪಿಸಿದ್ದಾಯಿತು.
Advertisement
ಆದರೆ, ಎಷುನ್ ಕಡೆಯಿಂದ ಆ ಪತ್ರಕ್ಕೆ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಮಾರನೆ ದಿನ ಎಂದಿನಂತೆ ಗುರುಗಳಿಂದ ಪಾಠಪ್ರವಚನಗಳು ನಡೆದವು. ಅವು ಮುಗಿದ ಮೇಲೆ ಇನ್ನೇನು ಎಲ್ಲರೂ ತರಗತಿಯಿಂದ ನಿರ್ಗಮಿಸಬೇಕೆನ್ನುವಷ್ಟರಲ್ಲಿ ಎಷುನ್ ಎದ್ದಳು. ಯಾವ ಭಯ-ಉದ್ವೇಗಗಳನ್ನು ತೋರಿಸದೆ ತರಗತಿಯ ಮುಂಭಾಗಕ್ಕೆ ನಡೆದಳು. ತರಗತಿಗೆ ಮುಖಮಾಡಿ ನಿಂತಳು. ತನಗೆ ಪತ್ರ ಬರೆದವನನ್ನು ಉದ್ದೇಶಿಸಿ, “”ನೀನು ನಿಜವಾಗಿಯೂ ನನ್ನನ್ನು ಪ್ರೀತಿಸುವೆಯಾದರೆ ಬಾ ನನ್ನನ್ನು ಅಪ್ಪಿಕೋ ಈಗ” ಎಂದಳು.
ತಾಂಬಾ ಪ್ರಾಂತ್ಯದ ಒಂದು ಮಠದಲ್ಲಿ ಮೊಕುಸೆನ್ ಹಿಕಿ ಎಂಬ ಝೆನ್ ಗುರುವಿದ್ದ. ಒಮ್ಮೆ ಓರ್ವ ಹಳ್ಳಿಗ ಅವನಲ್ಲಿ ಬಂದ. “”ಸ್ವಾಮಿ, ಒಂದು ಸಮಸ್ಯೆ ಇದೆ. ನನ್ನ ಹೆಂಡತಿ ಜಿಪುಣೆ ಅಂದರೆ ಜಿಪುಣೆ. ಒಬ್ಬರಿಗೆ ಒಂದು ದುಗ್ಗಾಣಿ ಕೊಡುವುದು ಎಂದರೆ ಆಕೆಗೆ ಆಗಿಬರದ ವಿಷಯ. ಇದನ್ನು ಸರಿಪಡಿಸುವುದು ಹೇಗೆ?” ಎಂದು ಗೋಳು ಹೇಳಿಕೊಂಡ. “”ಬಾ ಹೋಗೋಣ” ಎಂದು ಗುರು ಆತನನ್ನು ಹೊರಡಿಸಿದ. ಇಬ್ಬರೂ ಹಳ್ಳಿಗನ ಮನೆಗೆ ಹೋದರು. ಗುರು, ಹಳ್ಳಿಯವನ ಹೆಂಡತಿಯನ್ನು ಕರೆದ. ತನ್ನ ಕೈಯನ್ನು ಮುಷ್ಟಿ ಹಿಡಿದು ಆಕೆಯ ಮುಖದತ್ತ ಚಾಚಿದ. “”ನನ್ನ ಕೈ ಯಾವಾಗಲೂ ಹೀಗೇ ಇದ್ದರೆ ಏನು ಹೇಳುತ್ತೀ?” ಎಂದು ಪ್ರಶ್ನಿಸಿದ.
“”ಹೇಳುವುದೇನು? ಅಂಗವೈಕಲ್ಯ” ಎನ್ನಬಹುದು ಎಂದಳಾಕೆ. ಗುರು ಈಗ ಮುಷ್ಟಿ ಬಿಡಿಸಿ ಅಂಗೈಯನ್ನು ಅಗಲವಾಗಿ ಬಿಡಿಸಿಹಿಡಿದು, “”ನನ್ನ ಕೈ ಸದಾ ಹೀಗೇ ಇದ್ದರೆ ಏನು ಹೇಳುತ್ತಿ?” ಎಂದು ಪ್ರಶ್ನಿಸಿದ. “”ಹೇಳುವುದೇನು? ಇದೂ ಒಂದು ಬಗೆಯ ಅಂಗವೈಕಲ್ಯವೇ” ಎಂದಳಾಕೆ.
“”ಅಷ್ಟು ಗೊತ್ತಿದ್ದರೆ ನೀನು ಒಳ್ಳೆಯ ಹೆಂಡತಿಯಾಗಿ ಬದುಕಬಲ್ಲೆ!” ಎಂದು ಗುರು ತನ್ನ ಮಠಕ್ಕೆ ವಾಪಸು ಹೊರಟ. ಅವನು ಹೇಳಿದ ಮಾತಿನಿಂದ ಆಕೆಗೆ ಕಣ್ಣು ತೆರೆಯಿತು.
Related Articles
ಓರ್ವ ಬೌದ್ಧ ಗುರುವಿನ ಬಳಿ ಎರಡು ಅಮೂಲ್ಯ ವಸ್ತುಗಳಿದ್ದವು. ಒಂದು ಪೆನ್ನು, ಇನ್ನೊಂದು ವೈನ್ ಬಾಟಲು. ಎರಡೂ ಬಹಳ ಬೆಲೆಯುಳ್ಳವು. ಆದರೆ, ಗುರು ಎಂಥಾ ಜಿಪುಣನಾಗಿದ್ದನೆಂದರೆ, ಆ ಪೆನ್ನನ್ನು ಆತ ಯಾರಿಗೂ ಬಳಸಲು ಕೊಟ್ಟಿರಲಿಲ್ಲ. ಸ್ವತಃ ತಾನೂ ಅದರಲ್ಲೊಮ್ಮೆಯೂ ಬರೆಯಲಿಲ್ಲ. ಹಾಗೆಯೇ ಆ ವೈನ್ ಬಾಟಲು ಕೂಡ. ಅದರ ಒಂದೇ ಒಂದು ತೊಟ್ಟನ್ನು ಕೂಡ ಆತ ಯಾರಿಗೂ ಕುಡಿಯಲು ಕೊಟ್ಟಿರಲಿಲ್ಲ; ತಾನೂ ರುಚಿನೋಡಿರಲಿಲ್ಲ. ವೈನ್ ಬಾಟಲನ್ನು ಯಾರೂ ಕದಿಯಬಾರದೆಂದು ಆತ ಅದು ಮಹಾವಿಷ ಎಂದು ಪ್ರಚಾರ ಬೇರೆ ಮಾಡಿದ್ದ. ಅದರ ಒಂದೇ ಒಂದು ತೊಟ್ಟು ನಾಲಗೆಗೆ ಬಿದ್ದರೂ ಮನುಷ್ಯ ಬದುಕಿರುವುದು ಅನುಮಾನ ಎಂದು ಮಠದ ಎಲ್ಲರಿಗೂ ಹೆದರಿಸಿದ್ದ.
Advertisement
ಗುರುವಿನ ಜಿಪುಣತನ ವಿದ್ಯಾರ್ಥಿಯೊಬ್ಬನಿಗೆ ಬೇಸರ ತರಿಸಿತ್ತು. ಹೇಗಾದರೂ ಈ ಗುರುವಿಗೆ ಬುದ್ಧಿ ಕಲಿಸಬೇಕೆಂದು ಶಿಷ್ಯನ ಮನಸ್ಸು ಹವಣಿಸುತ್ತಿತ್ತು. ಅದಕ್ಕೆ ಸರಿಯಾಗಿ ಒಮ್ಮೆ ಬೌದ್ಧ ಗುರು ಪಕ್ಕದ ಹಳ್ಳಿಗೆ ಭೇಟಿ ಕೊಡಬೇಕಾಗಿ ಬಂತು. ಅಲ್ಲಿಗೆ ಹೋಗಿ ಸಂಜೆ ಮಠಕ್ಕೆ ಹಿಂದಿರುಗುವಷ್ಟರಲ್ಲಿ ಆತನ ಶಿಷ್ಯ ಮಠದ ಒಂದು ಮೂಲೆಯಲ್ಲಿ ಕಂಬಳಿ ಹೊದ್ದು ಮಲಗಿದ್ದ.
ಗುರು ಏನಾಯಿತೆಂದು ವಿಚಾರಿಸಿದಾಗ ಶಿಷ್ಯ ಹೇಳಿದ, “”ಏನು ಮಾಡಲಿ ಗುರುಗಳೇ! ಯಾವುದೋ ಕೆಲಸಕ್ಕೆಂದು ನಿಮ್ಮ ಕೋಣೆಗೆ ಹೋಗಿದ್ದ ನಾನು ಅಲ್ಲಿ ನಿಮ್ಮ ಲೇಖನಿಯನ್ನು ಅಚಾತುರ್ಯದಿಂದ ಮುರಿದುಬಿಟ್ಟೆ. ಅದು ಎಂಥಾ ಅಮೂಲ್ಯ ಲೇಖನಿ! ನಿಮಗೆ ಅದರ ಮೇಲೆ ಜೀವ ಎಂಬುದು ನನಗೆ ಗೊತ್ತಿಲ್ಲದ ಸಂಗತಿಯೇ? ಹಾಗಾಗಿ ಘನಘೋರವಾದ ತಪ್ಪು ಮಾಡಿದ ನನಗೆ ಸಾವೇ ಸರಿಯಾದ ಶಿಕ್ಷೆ ಎಂದು ನೀವು ಇಟ್ಟಿದ್ದ ವಿಷದ ಬಾಟಲಿಯನ್ನು ಒಂದು ಹನಿಯೂ ಉಳಿಯದಂತೆ ಕುಡಿದುಬಿಟ್ಟೆ ಗುರುಗಳೇ! ಈಗ ಸಾವನ್ನು ಎದುರುನೋಡುತ್ತ ಮಲಗಿದ್ದೇನೆ”.