Advertisement

ನನ್ನ ಬದುಕಿನ ಮೂರು ವರುಷದ ಸಂಜೆಗಳು ಬಂಗಾರದಲ್ಲಿ ಅದ್ದಿ ತೆಗೆದವು!

07:30 AM Mar 30, 2018 | |

ಕಾಲೇಜು ಎಂದಾಕ್ಷಣ ಅದೇನೋ ಸಂತೋಷದ ಭಾವನೆ ನನಗೆ ಬರುತ್ತದೆ. ಅದ್ಯಾಕೋ ಗೊತ್ತಿಲ್ಲ. ಅಲ್ಲಿ ಭೇಟಿ ಮಾಡುವ ಹೊಸ ಗೆಳೆಯರಿಂದಲೋ, ಪ್ರತಿದಿನ ಕಲಿಸುವ ಹೊಸ ವಿಚಾರಗಳಿಂದಲೋ ಅಥವಾ ಸದಾ ನಮ್ಮ ಪ್ರೋತ್ಸಾಹಿಸುವ ಉಪನ್ಯಾಸಕರಿಂದಲೋ ಎನ್ನುವುದು ಇಂದಿಗೂ ಹೇಳಲು ಕಷ್ಟ. ಆದರೆ ಕಾಲೇಜು ಶಿಕ್ಷಣ, ಗೆಳೆಯರು, ಉಪನ್ಯಾಸಕರು, ಮೋಜು-ಮಸ್ತಿ, ಪ್ರತಿಭೆಗಳ ಅನಾವರಣ ಇವೆಲ್ಲವುಗಳ ಮಿಶ್ರಣ ಎಂದರೆ ತಪ್ಪಾಗಲಾರದು. ಪಿಯುಸಿ ಮುಗಿದ ಬಳಿಕ ನನ್ನ ಮನಸ್ಸಿನಲ್ಲಿ ಹಲವಾರು ಗೊಂದಲಗಳು, ಮುಂದೆ ಏನು ಎಂಬುದು ನನ್ನನ್ನು ಕಾಡಿದ ಬಹುದೊಡ್ಡ ಪ್ರಶ್ನೆ. ಏಕೆಂದರೆ ಹಲವರು ತಮ್ಮದೇ ರೀತಿಯಲ್ಲಿ ಸಲಹೆ ನೀಡಿರುತ್ತಾರೆ. ಕೆಲವೊಮ್ಮೆ ಎಲ್ಲವನ್ನೂ ಕೇಳಿ ತುಂಬಾ ತಳಮಳಗೊಂಡಿದ್ದೂ ಉಂಟು. ಯಾವುದನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ. ಆ ಸಂದರ್ಭದಲ್ಲಿ ಯಾರು ಏನು ಹೇಳಿದರು ಎಂಬ ಪ್ರಶ್ನೆಗಿಂತ ನಾನು ಮುಂದೇನು ಮಾಡಬೇಕು, ನನ್ನ ಗುರಿ ಏನು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಅಂತೆಯೇ ನಾನು ಮುಂದೆ ಉಪನ್ಯಾಸಕನಾಗಬೇಕೆಂಬ ಕನಸನ್ನು ಕಟ್ಟಿಕೊಂಡಿದ್ದೆ. ಅದಕ್ಕೆ ಪೂರಕವಾಗಿ ಬಿ.ಎ. ಪದವಿಯನ್ನು ಆಯ್ಕೆ ಮಾಡಲು ನಿರ್ಧರಿಸಿದೆ. ಆದರೆ ಅದು ಹೇಗೆ ಎಂಬುದು ನನ್ನನ್ನು ಕಾಡತೊಡಗಿತು. ಏಕೆಂದರೆ ಹಗಲು ಪದವಿ ಪಡೆಯುವುದು ನನಗೆ ದೂರದ ಬೆಟ್ಟದಂತಿತ್ತು. ಆರ್ಥಿಕವಾಗಿ ಬಹಳ ಹಿಂದುಳಿದ ನನಗೆ ಅದು ಕಷ್ಟಸಾಧ್ಯವಾಗಿತ್ತು.

Advertisement

ಹೀಗೆ ಯೋಚನೆಯಲ್ಲಿರುವಾಗ ನನ್ನ ಕೆಲ ಗೆಳೆಯರು ನೆನಪಿಗೆ ಬಂದರು. ಅವರು ಮುಂಜಾನೆಯಿಂದ ಮುಸ್ಸಂಜೆ ತನಕ ದುಡಿದು ನಂತರ ಸಂಧ್ಯಾ ಕಾಲೇಜು ಮಾಡುತ್ತಿದ್ದಾರೆ ಎಂದು ತಿಳಿದುಕೊಂಡೆ. ಈ ಮಾರ್ಗ ನನಗೆ ಬಹಳ ಸೂಕ್ತ ಎಂದು ಅನಿಸಿತು. ಸಂಧ್ಯಾ ಕಾಲೇಜಿನ ಬಗ್ಗೆ ಯಾವುದೇ ಐಡಿಯಾ ನನಗಿರಲಿಲ್ಲ. ಆದರೂ ಸಂತ ಎಲೋಶಿಯಸ್‌ ಕಾಲೇಜಿನ ಕ್ಯಾಂಪಸ್‌ನಲ್ಲೇ ತರಗತಿಗಳು ನಡೆಯುವುದು ಎಂದಾಗ ಬಹಳ ಸಂತೋಷವಾಯಿತು. ಜೆಸ್ವಿಟ್‌ ಧರ್ಮಗುರುಗಳ ಆಶ್ರಯದಲ್ಲೇ ಬೆಳೆದ ನನಗೆ ಮುಂದೆಯೂ ಅವರದೇ ಸಂಸ್ಥೆಯಲ್ಲಿ ನನ್ನ ಪದವಿಯನ್ನು ಪಡೆಯುವುದು ತುಂಬಾ ತೃಪ್ತಿಕರ ಅನಿಸಿತು. ಏಕೆಂದರೆ ಶಿಕ್ಷಣ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ ಮತ್ತು ಅವರ ಅತ್ಯುತ್ತಮ ಹಾಗೂ ಸುಸಜ್ಜಿತವಾದ ಶಿಕ್ಷಣ ನನ್ನ ಜೀವನದ ಮೇಲೆ ಬಹಳ ಪರಿಣಾಮ ಬೀರಿದೆ. ಹೀಗೆ ಸಂಧ್ಯಾ ಕಾಲೇಜಿಗೆ ಅಡ್ಮಿಷನ್‌ ಸಿಕ್ಕಿತು.

ಫ‌ಸ್ಟ್‌ ಇಯರ್‌ ಆದುದರಿಂದ ಹೊಸ ಸ್ನೇಹಿತರ ಪರಿಚಯ ಆಗಲು ಸ್ವಲ್ಪ ದಿನಗಳು ಬೇಕಾಯಿತು. ನಂತರ ಹೊಸಬರ ಗೆಳೆತನದಲ್ಲಿ ಹೊಸ ಅನುಭವ. ಹಗಲು ಕಾಲೇಜಿನಲ್ಲಿ ಕಲಿತ ನನಗೆ ಸಂಧ್ಯಾ ಕಾಲೇಜು ಸ್ವಲ್ಪ ಕಷ್ಟವೆನಿಸಿತು. ಆದರೆ ದಿನಕಳೆದಂತೆ ನಾನು ಬಹಳ ಬೇಗನೆ ಅದಕ್ಕೆ ಹೊಂದಿಕೊಂಡೆ.

ಹಗಲು ಕೆಲಸ ಮಾಡಿ ದಣಿದಿದ್ದರೂ ಸಂಧ್ಯಾ ಕಾಲೇಜಿಗೆ ಬಂದೊಡನೆ ಅದೇನೋ ನವೋಲ್ಲಾಸ ಹಾಗೂ ನಾನು ಎಲ್ಲವನ್ನು ಮರೆತು ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಮೊದಲಿಗೆ ಪರಿಚಯವಿಲ್ಲದ ಮುಖಗಳು ನನ್ನ ಆತ್ಮೀಯ ಗೆಳೆಯರಾದರು. ಉಪನ್ಯಾಸಕರ ಪರಿಚಯವಾಯಿತು. ಸಂಧ್ಯಾ ಕಾಲೇಜು ಸಂಜೆ ಹೊತ್ತಿನಲ್ಲಿ ನಡೆಯುವುದು ಬಿಟ್ಟರೆ ಹಗಲು ಕಾಲೇಜಿಗಿಂತ ಏನೂ ಕಡಿಮೆಯಿಲ್ಲ ಎಂಬುದು ನನಗೆ ಬಳಿಕ ಮನದಟ್ಟಾಯಿತು. ಇದಕ್ಕೆ ಕಾರಣ ಸಮಯದ ಅಭಾವವಿದ್ದರೂ ಚಟುವಟಿಕೆಗಳಿಗೆ ಕೊರತೆ ಇರಲಿಲ್ಲ. ವಿವಿಧ ಸಂಘಗಳು-ಅದರೊಳಗೆ ಹಲವಾರು ಕಾರ್ಯಕ್ರಮಗಳು. ಮುಖ್ಯವಾಗಿ ಪ್ರತಿಯೊಬ್ಬರಿಗೂ ಇಲ್ಲಿ ಭಾಗವಹಿಸುವ ಅವಕಾಶ ಇರುತ್ತಿತ್ತು. ಏಕೆಂದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಒಂದಲ್ಲ ಒಂದು ಚಟುವಟಿಕೆಯಲ್ಲಿ ನಾವು ನಮ್ಮನ್ನು ತೊಡಗಿಸಿಕೊಳ್ಳಲು ಅವಕಾಶವಿತ್ತು. ಪ್ರಬಂಧ ಸ್ಪರ್ಧೆ, ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಸಂಕಿರಣ ಹಾಗೂ ಮಾರ್ಗದರ್ಶನ, ಬೆಂಕಿ ಇಲ್ಲದೆ ಅಡುಗೆ ಸ್ಪರ್ಧೆ, ಹೂಗಳ ಅಲಂಕಾರ ಸ್ಪರ್ಧೆ, ಒಂದು ದಿನದ ಯೋಗ ಶಿಬಿರ, ಅಂತರ್‌ಕ್ಲಾಸು ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆ, ಆಟೋಟ ಸ್ಪರ್ಧೆ, ಕಾಲೇಜು ವಾರ್ಷಿಕೋತ್ಸವ, ರಕ್ತದಾನ ಶಿಬಿರ ಹಾಗೂ ಇನ್ನು ಹಲವಾರು. ಆಶ್ಚರ್ಯವೆನಿಸಿದರೂ ಅತೀ ಕಡಿಮೆ ಸಮಯದಲ್ಲೂ ಇಷ್ಟೊಂದು ಕಾರ್ಯಕ್ರಮಗಳು ನಮ್ಮ ಸಂಧ್ಯಾ ಕಾಲೇಜಿನಲ್ಲಿ ನಡೆಯುತ್ತದೆ. ಅಲ್ಲದೇ ಎಲ್ಲಾ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಬೆಳಕಿಗೆ ತರುವ ಮುಕ್ತ ಅವಕಾಶ ಕಲ್ಪಿಸುವ ಸಂಸ್ಥೆ ಸಂಧ್ಯಾ ಕಾಲೇಜು ಎಂಬುದಕ್ಕೆ ಬಹಳ ಹೆಮ್ಮೆಯಾಗುತ್ತದೆ.

2016ರಲ್ಲಿ ನಮ್ಮ ಕಾಲೇಜು 50 ವರ್ಷ ಪೂರೈಸಿತು. ಇದರ ಸವಿನೆನಪಿಗೆ ಒಂದು ರೂ. ಕ್ರಾಂತಿ ಆರಂಭಿಸಲಾಯಿತು. ಅಂದರೆ ವಾರಕ್ಕೆ ಎರಡು ಅಥವಾ ಮೂರು ಬಾರಿ ಕಾಲೇಜಿನ ವಿದ್ಯಾರ್ಥಿಗಳು ಅದಕ್ಕೆ ಮೀಸಲಾದ ಬಾಕ್ಸ್‌ ಅನ್ನು ತರಗತಿಗೆ ತರುತ್ತಾರೆ. ಇದಕ್ಕೆ ವಿದ್ಯಾರ್ಥಿಗಳು ಒಂದು ರೂ. ಅಥವಾ ತಮ್ಮಿಂದಾದಷ್ಟು ದೇಣಿಗೆಯನ್ನು ನೀಡುವುದು. ಈಗ ಅದನ್ನು ಪ್ರತಿವರ್ಷವೂ ಮುಂದುವರಿಸುವ ಯೋಜನೆ ನಿಜಕ್ಕೂ ಮಾದರಿ. ಇದರಿಂದ ಹಲವಾರು ಜನರಿಗೆ ಸಹಾಯ ಮಾಡುವ ಅವಕಾಶ ಸಂಧ್ಯಾ ಕಾಲೇಜಿಗೆ ದೊರಕಿದೆ ಎನ್ನಲು ಬಹಳ ಸಂತೋಷವಾಗುತ್ತದೆ. Out reach program ಮುಖಾಂತರ ಒಂದು ರೂ. ಕ್ರಾಂತಿಯಿಂದ ಅನಾಥ ಆಶ್ರಮಗಳಿಗೆ, ವೃದ್ಧಾಶ್ರಮಗಳಿಗೆ, ರೋಗರುಜಿನಗಳಿಂದ ಕಷ್ಟಪಡುತ್ತಿರುವ ಬಡರೋಗಿಗಳಿಗೆ ಸಹಾಯ ಮಾಡಲು ನೆರವಾಗಿದೆ ಎಂಬುದು ಬಹಳ ಹೆಮ್ಮೆಯ ವಿಷಯ. ನಮ್ಮಿಂದಾದಷ್ಟು ಸಹಾಯವನ್ನು ಇತರರಿಗೆ ಮಾಡಿದ್ದೇವೆ ಎನ್ನುವ ಆತ್ಮತೃಪ್ತಿ ಸದಾ ನಮ್ಮಲ್ಲಿ ಇರುತ್ತದೆ.

Advertisement

ಆಸ್ಟಿನ್‌ ಪೌಲ್‌
ತೃತೀಯ ಬಿ. ಎ.  ಸೈಂಟ್‌ ಅಲೋಶಿಯಸ್‌ ಈವ್ನಿಂಗ್‌ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next