“ಸಿಂಪಲ್ಲಾಗ್ ಇನ್ನೊಂದ್ ಲವ್‌ಸ್ಟೋರಿ’ ಚಿತ್ರದಲ್ಲಿ ನಾಯಕರಾಗಿ ಎಂಟ್ರಿಕೊಟ್ಟ ಪ್ರವೀಣ್ ನಾಯಕರಾಗಿರುವ “5ಜಿ’ ಚಿತ್ರ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಫೆಬ್ರವರಿಯಲ್ಲೇ ಬಿಡುಗಡೆಯಾಗಬೇಕಿತ್ತು. ಚಿತ್ರತಂಡ ಬಿಡುಗಡೆಗೆ ಎಲ್ಲಾ ತಯಾರಿ ಕೂಡಾ ಮಾಡಿಕೊಂಡಿತ್ತು. ಆದರೆ, ಚಿತ್ರ ಬಿಡುಗಡೆಯಾಗಲೇ ಇಲ್ಲ. “5ಜಿ’ ಕಥೆ ಏನಾಯ್ತು ಎಂದು ಕೇಳುವಷ್ಟರಲ್ಲಿ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಹೌದು, “5ಜಿ’ ಚಿತ್ರ ಮುಂದಿನ ವಾರ ಅಂದರೆ ಆಗಸ್ಟ್ 25 ರಂದು ಬಿಡುಗಡೆಯಾಗುತ್ತಿದೆ.
ಅಷ್ಟಕ್ಕೂ ಚಿತ್ರ ಯಾಕೆ ಇಷ್ಟೊಂದು ತಡ ಎಂದರೆ ಚಿತ್ರದಲ್ಲಿ ಮಾಡಿಕೊಂಡ ಬದಲಾವಣೆ. ಹೌದು, “5ಜಿ’ ಚಿತ್ರ ಮೂರು ಬಾರಿ ಸೆನ್ಸಾರ್ ಆಗಿದೆ ಎಂದರೆ ನಂಬಲೇಬೇಕು. ಚಿತ್ರತಂಡ ಚಿತ್ರದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡು ಮತ್ತೆ ಮತ್ತೆ ಸೆನ್ಸಾರ್ ಮಾಡಿಸಿದೆ. ಚಿತ್ರ ನೋಡಿದ ಹಿರಿಯ ಸಂಭಾಷಣೆಕಾರ ಜಿ.ಕೆ.ಭಾರವಿ ಅವರು ಒಂದಷ್ಟು ಬದಲಾವಣೆ ಮಾಡಿಕೊಂಡರೆ ಚಿತ್ರ ಚೆನ್ನಾಗಿ ಮೂಡಿಬರಬಹುದು ಹಾಗೂ ಮತ್ತಷ್ಟು ಪರಿಣಾಮಕಾರಿಯಾಗಬಹುದು ಎಂದರಂತೆ.
ಅದರಂತೆ, ಬದಲಾವಣೆ ಮಾಡಿಕೊಂಡು ಸೆನ್ಸಾರ್ ಮಾಡಿಸಿದೆ ಚಿತ್ರತಂಡ. ಇದೇ ವೇಳೆ ಚಿತ್ರತಂಡಕ್ಕೊಂದು ಐಡಿಯಾ ಬಂದಿದೆ. ಅದೇನೆಂದರೆ ಸಿನಿಮಾವನ್ನು ಯಾರಿಗೂ ತೋರಿಸದೇ ಬಿಡುಗಡೆ ಮಾಡುವ ಬದಲು, ಒಂದಷ್ಟು ಮಂದಿಗೆ ತೋರಿಸಿ ಅವರ ಅನಿಸಿಕೆಗಳನ್ನು ಪಡೆದು ಅದಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡರೆ ಇನ್ನೂ ಚೆನ್ನಾಗಿರುತ್ತದೆ ಎಂದು. ಅದೇ ಕಾರಣಕ್ಕೆ ಚಿತ್ರತಂಡದವರು, ಸುಮಾರು 70ಕ್ಕೂ ಹೆಚ್ಚು ಮಂದಿಗೆ ಸಿನಿಮಾ ತೋರಿಸಿದ್ದಾರೆ.
ಅವರು ಕೂಡಾ ಕೆಲವು ಬದಲಾವಣೆ ಸೂಚಿಸಿದ್ದಾರೆ. ಆ ಬದಲಾವಣೆಯೊಂದಿಗೆ ಮತ್ತೂಮ್ಮೆ ಸೆನ್ಸಾರ್ ಮಾಡಿಸಿದ ಚಿತ್ರತಂಡ ಈಗ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದೆ. ಅಷ್ಟಕ್ಕೂ ಇಷ್ಟೊಂದು ಬದಲಾವಣೆ ಯಾಕೆ ಎಂದರೆ ಚಿತ್ರದಲ್ಲಿರುವ ಗಂಭೀರ ವಿಷಯ ಎಂಬ ಉತ್ತರ ಚಿತ್ರತಂಡದಿಂದ ಬರುತ್ತದೆ. ಚಿತ್ರದಲ್ಲಿ ದೇಶದ ಗಂಭೀರ ವಿಚಾರವೊಂದನ್ನು ಹೇಳಿರುವುದರಿಂದ ಬೇಕಾಬಿಟ್ಟಿ ಸಿನಿಮಾ ಕೊಟ್ಟರೆ ನಾಳೆ ಆಭಾಸ ಆಗಬಹುದೆಂಬ ಕಾರಣಕ್ಕೆ ಅನುಭವಿಗಳಿಗೆ ತೋರಿಸಿ ಒಂದಷ್ಟು ಬದಲಾವಣೆ ಮಾಡಿಕೊಂಡಿದೆ ಚಿತ್ರತಂಡ.
ಈಗ ಸಿನಿಮಾ ಚೆನ್ನಾಗಿ ಮೂಡಿಬಂದಿರುವ ಖುಷಿ ಚಿತ್ರತಂಡದ್ದು. ಸುಮಾರು 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಮುಖ ಅಂಶವೆಂದರೆ ನೋಟು. ಚಿತ್ರದಲ್ಲಿ 500ರ ನೋಟು ಪ್ರಮುಖ ಪಾತ್ರ ಮಾಡಿದ್ದು, ಒಂದರ್ಥದಲ್ಲಿ ಅದೇ ಈ ಚಿತ್ರದ ಹೀರೋ ಎಂದರೆ ತಪ್ಪಲ್ಲ ಎನ್ನುವುದು ಚಿತ್ರತಂಡದ ಮಾತು. ಚಿತ್ರದಲ್ಲಿ ನಿಧಿ ಸುಬ್ಬಯ್ಯ ನಾಯಕಿಯಾಗಿದ್ದು, ಜಗದೀಶ್ ಈ ಚಿತ್ರದ ನಿರ್ಮಾಪಕರು. ಗುರುವೇಂದ್ರ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.
ತೆಲುಗಿಗೆ 5ಜಿ: ಚಿತ್ರ ಬಿಡುಗಡೆಗೆ ಮುಂಚೆಯೇ ಚಿತ್ರತಂಡ ಖುಷಿಯಾಗಿದೆ. ಅದಕ್ಕೆ ಕಾರಣ ರೀಮೇಕ್ ರೈಟ್ಸ್ ಹೋಗಿರೋದು. ಚಿತ್ರದ ತೆಲುಗು ರೀಮೇಕ್ ಹಕ್ಕನ್ನು ಜಿ.ಕೆ. ಭಾರವಿ ಅವರು ಪಡೆದುಕೊಂಡಿದ್ದಾರಂತೆ. ಈ ಮೂಲಕ ಚಿತ್ರದ ಬಗ್ಗೆ ಚಿತ್ರತಂಡದ ವಿಶ್ವಾಸ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಇತರ ಭಾಷೆಗೂ ಚಿತ್ರ ರೀಮೇಕ್ ಆಗಲಿದೆಯಂತೆ.