ಬೀದರ: ವ್ಯಕ್ತತ್ವ ವಿಕಸನಕ್ಕೆ ಆತ್ಮಜ್ಯೋತಿ, ಬ್ರಹ್ಮ ಜ್ಯೋತಿ ಮತ್ತು ಗುರುಜ್ಯೋತಿ ಮಂತ್ರಗಳು ಬುನಾದಿಯಾಗಿವೆ ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಜನಸೇವಾ ಪ್ರತಿಷ್ಠಾನದ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು. ಕತ್ತಲೆಯಲ್ಲಿದ್ದ ವ್ಯಕ್ತಿ ಇತರರಿಗೆ ಕಾಣದಿರಬಹುದು. ಆದರೆ, ತನ್ನನ್ನು ತಾನು ಕಾಣಬಹುದು. ಹಾಗೆಯೇ ನಮ್ಮೊಳಗಿನ ಆತ್ಮಬಲ ಕಾಣಲು ಈ ಮೂರು ಮಂತ್ರಗಳು ನೆರವಾಗುತ್ತವೆ.
ಮಕ್ಕಳು ಪ್ರತಿ ದಿನ ಭಗವದ್ಗೀತೆ ಓದಬೇಕು. ಶಾಂತಿ, ನೆಮ್ಮದಿ, ಧರ್ಮ, ಸತ್ಯ, ದಯೆ, ಕರುಣೆ ಮುಂತಾದ ಮೌಲ್ಯಗಳನ್ನು ಬೆಳೆಸಲು ಭಗವದ್ಗೀತೆ ನೆರವಾಗುತ್ತದೆ ಎಂದು ಹೇಳಿದರು.
ಸುನೀತಾ ವಿಲಿಯಮ್ಸ್ ಅವರು ಗಗನಯಾತ್ರೆ ಮುಗಿಸಿಕೊಂಡು ಯಶಸ್ವಿಯಾಗಿ ಮರಳಿದಾಗ ಪತ್ರಕರ್ತರು ಅವರನ್ನು ಪ್ರಶ್ನಿಸಿದ್ದರು. “ನನ್ನ ಕೈಯೊಳಗೆ ಭಗವದ್ಗೀತೆ ಇತ್ತು. ನಾನು ಗೀತೆ ಓದುತ್ತಿದ್ದೆ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದರು. ಅಂತಹ ಅದ್ಭುತ ಶಕ್ತಿ ಭಗವದ್ಗೀತೆಗೆ ಇದೆ ಎಂದು ಪೂಜ್ಯರು ಪ್ರತಿಪಾದಿಸಿದರು.
ಜನಸೇವಾ ಶಾಲೆಯಲ್ಲಿ ವ್ಯಕ್ತಿತ್ವ ನಿರ್ಮಾಣ ಕಾರ್ಯ ಸಮರ್ಥವಾಗಿ ನಡೆಯುತ್ತಿದೆ. ಈ ಶಾಲೆ ಮಕ್ಕಳು ಭಗವದ್ಗೀತೆಯಲ್ಲಿನ 6ನೇ ಅಧ್ಯಾಯದ 47 ಶ್ಲೋಕಗಳನ್ನು ಅದ್ಭುತವಾಗಿ ಪಠಿಸಿದ್ದಾರೆ ಎಂದು ಪೂಜ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಬಸವರಾಜ ಸ್ವಾಮಿ, ಆಡಳಿತ ಮಂಡಳಿ ಸದಸ್ಯ ಬಿ.ಎಸ್. ಕುದರೆ, ಆಡಳಿತಾಧಿ ಕಾರಿ ಸೌಭಾಗ್ಯವತಿ, ಪರಮಶ್ವರ ಭಟ್, ವೆಂಕಟರಮಣ ಹೆಗಡೆ ಮತ್ತಿತರ ಗಣ್ಯರು ಇದ್ದರು. ಮುಖ್ಯಗುರು ಚಂದ್ರಕಾಂತ ಗೋಗಿಕರ್ ವಂದಿಸಿದರು.