ಒಬ್ಬ ತನ್ನ ಕಂಪೆನಿಯಲ್ಲಿ ಬಹಳ ಶ್ರದ್ಧೆ, ಶಿಸ್ತಿನಿಂದ ಕೆಲಸ ಮಾಡಿ, ಮುಖ್ಯಸ್ಥರ ಮೆಚ್ಚಿಗೆಯ ಮಾತಿಗೂ ಪಾತ್ರವಾಗಿದ್ದ. ಆದರೆ ಆತ ಕಾಲಕ್ರಮೇಣ ಕೆಲವು ಆಲಸಿಗಳ ಸಂಘ ಸೇರಿ ಕುಡಿತದ ಚಟಕ್ಕೆ ಅಂಟಿಕೊಂಡನು. ಬರಬರುತ್ತ ಸರಿಯಾಗಿ ಕೆಲಸ ನಿರ್ವಹಿಸುವುದನ್ನು ಬಿಟ್ಟನು. ತನಗೆ ಭಡ್ತಿ ಸಿಗುವುದೆಂದು ತಮ್ಮ ಗೆಳೆಯರೊಂದಿಗೆ ಕೊಚ್ಚಿಕೊಳ್ಳುತ್ತಿದ್ದನು.
ಇದರಿಂದ ಬೇಸರಗೊಂಡ ಕಂಪೆನಿಯ ಮುಖ್ಯಸ್ಥರು ಆತನನ್ನು ತಮ್ಮ ಮನೆಗೆ ಭೋಜನಕ್ಕೆ ಆಹ್ವಾನಿಸಿದರು. ಬಹಳ ಚೆನ್ನಾಗಿ ಮಾತನಾಡಿಸಿದರು. ಅನಂತರ ಅವರು ಕುಡಿತದ ಚಟಕ್ಕೆ ಅಂಟಿಕೊಂಡವನನ್ನು ಉನ್ನತ ಹುದ್ದೆಗೆ ಶಿಫಾರಸ್ಸು ಮಾಡಬಹುದೇ? ಎಂದು ಕೇಳಿದರು. ಆತನಿಗೆ ಅವರ ಮಾತಿನ ಇಂಗಿತಾರ್ಥ ತಿಳಿಯಿತು. ಅಂದಿನಿಂದ ಆಲಸಿಗಳ ಸಂಗ ಬಿಟ್ಟ. ಕುಡಿತವನ್ನೂ ಬಿಟ್ಟ. ತನ್ನ ಕೆಲಸದ ಮೇಲೆ ನಿಗಾ ಇರಿಸತೊಡಗಿದ. ತತ್ಪರಿಣಾಮವಾಗಿ ಉನ್ನತ ಹುದ್ದೆಗೆ ಭಡ್ತಿ ಪಡೆದ.
ಮೇಲಿನ ದೃಷ್ಟಾಂತವನ್ನು ಆಧರಿಸಿ ಹೇಳಬೇಕೆಂದರೆ ಕೆಲವು ಜನರು ಕೆಲಸವನ್ನು ಮಾಡಬೇಕಲ್ಲ ಎಂದು ಮಾಡುತ್ತಾರೆ. ಕೆಲವರು ಬಹಳ ಆಸ್ಥೆಯಿಂದ, ಶ್ರದ್ಧೆಯಿಂದ ಮಾಡುತ್ತಾರೆ. ಕೆಲಸ ಕೆಡಿಸುವವರೂ ಕಾಣ ಸಿಗುತ್ತಾರೆ. ಫಲಾಪೇಕ್ಷೆ ಮಾತ್ರ ಎಲ್ಲರಲ್ಲೂ ಇದ್ದೇ ಇರುತ್ತದೆ. ಬೆಲ್ಲದ ಕಟ್ಟೆ ಕಟ್ಟಿ ಬೇವಿನ ಸಸಿ ನೆಟ್ಟರೆ ಬೇವಿನ ಮರದಲ್ಲಿ ಬಿಡುವ ಕಾಯಿ ಸಿಹಿಯಾಗುವುದಿಲ್ಲ. ಬೆಲ್ಲದ ಪ್ರಭಾವ ಅದರ ಮೇಲೆ ಒಂದಿಷ್ಟೂ ಆಗುವುದೇ ಇಲ್ಲ. ಬೇವು ಬಿತ್ತಿ ಮಾವನ್ನು ನಿರೀಕ್ಷಿಸಬಾರದು.
ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿದರೆ ಸಂತೋಷವಾಗುವುದಲ್ಲದೇ ಬರುವ ಫಲವು ಸಿಹಿಯಾಗಿಯೇ ಇರುತ್ತದೆ. ಯಾವುದೇ ಕೆಲಸ ಮಾಡುವಾಗ ಅದರಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪಾಲ್ಗೊಳ್ಳುವವರು ಎಷ್ಟೋ ಜನರಿರುತ್ತಾರೆ. ಅದರಲ್ಲಿ ಯಾರಾದರೊಬ್ಬರು ತಪ್ಪು ಮಾಡಿದರೂ ಕೆಲಸ ಹಾಳಾಗುತ್ತದೆ. ನಿರೀಕ್ಷಿಸಿದ, ಅಪೇಕ್ಷಿಸಿದ ಫಲಿತಾಂಶವೂ ಸಿಗುವುದಿಲ್ಲ. ನಾವು ಕೆಲಸದ ಮೇಲೆ ಗಮನ ಕೇಂದ್ರೀಕರಿಸಬೇಕೇ ಹೊರತು ಫಲದ ಬಗ್ಗೆ ಅಲ್ಲ. ಮನಸ್ಸು ಅಂತಿಮ ಫಲಿತಾಂಶದ ಆಲೋಚನೆಗಳ ಬಗ್ಗೆ ಅಸ್ತವ್ಯಸ್ತವಾಗಬಾರದು. ಕೆಲಸಕ್ಕೆ ಸಂಪೂರ್ಣವಾಗಿ ಕಟ್ಟು ಬಿದ್ದರೆ ಗೆಲುವು ನಿಮ್ಮದೇ ಇದು ಭಗವದ್ಗೀತೆಯ ಮಹಾನ್ ಸಂದೇಶ.