Advertisement

Udupi: ಪುನರಪಿ ಭಾರತ ವಿಶ್ವಗುರುವಾಗಲು ಪ್ರಾಚ್ಯವಿದ್ಯಾ ಸಮ್ಮೇಳನ ಸಹಕಾರಿ: ಪುತ್ತಿಗೆ ಶ್ರೀ

01:03 AM Oct 27, 2024 | Team Udayavani |

ಉಡುಪಿ: ಭಾರತೀಯ ಸಂಸ್ಕೃತಿ, ತತ್ವಜ್ಞಾನವು ಮತ್ತೊಮ್ಮೆ ಜಗತ್ತಿನ ನೇತೃತ್ವ ವಹಿಸಲಿದೆ. ಭಾರತವು ಪುನರಪಿ ವಿಶ್ವಗುರುವಾಗಲು ಪ್ರಾಚ್ಯವಿದ್ಯಾ ಸಮ್ಮೇಳನ ಸಹಕಾರಿಯಾಗಲಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

Advertisement

ಪರ್ಯಾಯ ಪುತ್ತಿಗೆ ಮಠ, ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿ ವಿ, ಭಾರತೀಯ ವಿದ್ವತ್‌ ಪರಿಷತ್‌ ಸಹಿತ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶ್ರೀಕೃಷ್ಣಮಠದಲ್ಲಿ ಶನಿವಾರ ನಡೆದ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನದ ಸಮಾರೋಪದಲ್ಲಿ ಶ್ರೀಪಾದರು ಆಶೀರ್ವಚನ ನೀಡಿದರು.
ಸರ್ವಧರ್ಮ ಸಹ ಜೀವನ, ಭಾವೈಕ್ಯತೆ ಇಲ್ಲಿರುವಷ್ಟು ಬೇರೆಲ್ಲೂ ಇಲ್ಲ. ಅನೇಕ ದೇಶಗಳಲ್ಲಿ ಏಕಧರ್ಮ ಇರುವುದರಿಂದ ವೈಚಾರಿಕ ಸ್ವಾತಂತ್ರ್ಯವೂ ಕಡಿಮೆ. ಎಲ್ಲರನ್ನು ಒಂದಾಗಿ ಕಾಣುವ ಶ್ರೇಷ್ಠತೆ ನಮ್ಮದು. ಶ್ರೀ ಕೃಷ್ಣನು ಗೀತೆಯಲ್ಲಿ ಹೇಳಿದಂತೆ “ಪರಿ ತ್ರಾಣಾಯ ಸಾಧುನಾಮ್‌ ವಿನಾಶಾಯಚ ದುಷ್ಕೃತಾಮ್‌’ನಂತೆ ಭಾರತೀಯ ತತ್ವ ಜ್ಞಾನ ಪರಂಪರೆ, ಸಾಧು ಪರಂಪರೆ ರಕ್ಷಣೆ ಯಾಗಬೇಕು. ದುಷ್ಟರಿಗೆ ಶಿಕ್ಷೆ ಆಗಬೇಕು. ಭಾರತವು ಶಿಷ್ಟರಿಗೆ ಸ್ವರ್ಗ ಇದ್ದಂತೆ ಎಂದರು.

ಭಗವದ್ಗೀತೆಯು ವಿಶ್ವ ಗ್ರಂಥವಾದರೆ ಸಂಸ್ಕೃತ ವಿಶ್ವಭಾಷೆ. ಇಂಗ್ಲಿಷ್‌ ಸಹಿತ ಎಲ್ಲ ಭಾಷೆಗಳಿಗೂ ತಾಯಿ ಸಂಸ್ಕೃತ. ಸಂಸ್ಕೃತ ಅಧ್ಯಯನ ಪರಂಪರೆ, ಪ್ರಚಾರ, ಗ್ರಂಥಗಳ ಪ್ರಕಟನೆ, ಹೊಸ ಆವಿಷ್ಕಾರ, ಸಂಶೋಧನೆ ಯುವಜನತೆಯ ಮೂಲಕ ನಡೆಯಬೇಕು. ಈ ಸಮ್ಮೇಳನದ ಮೂಲಕ ಈ ನಿಟ್ಟಿನಲ್ಲಿ ಎಲ್ಲ ವಿ.ವಿ.ಗಳ ಕುಲಪತಿಗಳು ಏಕಚಿಂತನೆ ನಡೆಸುವಂತಾಗಲಿ ಎಂದು ಆಶಿಸಿದರು.

ಹಿಂದೂ ಸ್ಟಡೀ ಸೆಂಟರ್‌ ಅಗತ್ಯ
ಸಂಸ್ಕೃತ ಭಾರತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕಾಮತ್‌ ಮಾತನಾಡಿ, ವಿ.ವಿ.ಗಳಲ್ಲಿ ಮುಸ್ಲಿಂ, ಬೌದ್ಧ, ಜೈನ ಅಧ್ಯಯನ ಪೀಠದಂತೆ ಹಿಂದೂ ಅಧ್ಯಯನ ಪೀಠವೂ ಬೇಕು. ಪ್ರಸ್ತಾವವನ್ನು ಸಲ್ಲಿಸಿದ್ದು, ಕೇಂದ್ರೀಯ ಸಂಸ್ಕೃತ ವಿ.ವಿ., ಲಾಲ್‌ಬಹಾದ್ದೂರ್‌ ಶಾಸ್ತ್ರಿ  ವಿ.ವಿ. ಗಳು ಕಾರ್ಯಪ್ರವೃತ್ತವಾಗಿವೆ. ಎಲ್ಲ ವಿ.ವಿ. ಗಳಲ್ಲೂ ಈ ಪೀಠವನ್ನು ಸ್ಥಾಪಿಸಬೇಕು ಎಂದರು.

ನಮ್ಮಲ್ಲಿರುವ ವಸಾಹತುಶಾಯಿ ಮನಸ್ಥಿತಿ ತೊಡೆದು ಹಾಕಿ ಒರಿಯಂಟಲ್‌ ಪದ ಬಳಕೆಯ ಬದಲು ಪ್ರಾಚ್ಯವಿದ್ಯಾ ಎಂಬ ಪದವನ್ನೇ ಬಳಸಬೇಕು. ಭಾರತೀಯ ಜ್ಞಾನ ಪರಂಪರೆಯನ್ನು ಮುಂದು ವರಿಸುವಲು ಇದು ಸಹಕಾರಿ. ಸಂಸ್ಕೃತದಂತೆಯೇ ಪಾಲಿ, ಪ್ರಾಕೃತ ಭಾಷೆಯ ಪುನರುಜ್ಜೀವನಕ್ಕೂ ಶ್ರಮಿಸಬೆಕಿದೆ ಎಂದು ಹೇಳಿದರು.

Advertisement

ಕೇಂದ್ರೀಯ ಸಂಸ್ಕೃತ ವಿ.ವಿ.ಯ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ಮಾತನಾಡಿ, 52ನೇ ಸಮ್ಮೇಳನಕ್ಕೆ ಅನುಕೂಲವಾಗುವಂತೆ ವಿ.ವಿ. ಮಟ್ಟದಲ್ಲಿ ಸಮ್ಮೇಳನಗಳನ್ನು ನಡೆಸಿ, ಅಲ್ಲಿ ಪ್ರಬಂಧಗಳನ್ನು ಆಹ್ವಾನಿಸಿ, ಅದರಲ್ಲಿ ಉತ್ಕೃಷ್ಟ ಪ್ರಬಂಧವನ್ನು ಅಖಿಲ ಭಾರತ ಸಮ್ಮೇಳನದಲ್ಲಿ ಮಂಡಿಸುವಂತಾಗಬೇಕು ಎಂದರು.

ಪುತ್ತಿಗೆ ಶ್ರೀಪಾದರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದ ಕನ್ನಡ ಮತ್ತು ಇಂಗ್ಲಿಷ್‌ ಮಾಹಿತಿ ಒಳಗೊಂಡ ಪುಸ್ತಕವನ್ನು ಡಾ| ಭಾಸ್ಕರ್‌ ರಾವ್‌ ಅವರು ಸಂಪಾದಿಸಿದ್ದು ಬಿಡುಗಡೆ ಮಾಡಲಾಯಿತು. ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಸಮ್ಮೇಳನದ ಅಧ್ಯಕ್ಷೆ ಪ್ರೊ| ಸರೋಜಾ ಭಾಟಿಯಾ, ಪ್ರಮುಖರಾದ ಪ್ರೊ| ಸಚ್ಚಿದಾನಂದ, ಪ್ರೊ| ಅರುಣ್‌ ರಂಜನ್‌ ಮಿಶ್ರಾ, ಪ್ರೊ| ಮುರಳಿಕೃಷ್ಣ, ಪ್ರೊ| ಕೊರೊಡ್‌ ಸುಬ್ರಹ್ಮಣ್ಯಮ್‌, ವಿದ್ವತ್‌ ಪರಿಷತ್‌ ಟ್ರಸ್ಟ್‌ ಅಧ್ಯಕ್ಷ ಪ್ರೊ| ವೀರನಾರಾಯಣ ಪಾಂಡುರಂಗಿ ಉಪಸ್ಥಿತರಿದ್ದರು. ಶ್ರೀಮಠದ ಡಾ| ಗೋಪಾಲಾಚಾರ್ಯ ಸ್ವಾಗತಿಸಿದರು.

891 ಪ್ರಬಂಧ ಮಂಡನೆ
ಮೂರು ದಿನಗಳ ಸಮ್ಮೇಳನದಲ್ಲಿ 1,611 ಮಂದಿ ನೋಂದಣಿ ಮಾಡಿಕೊಂಡಿದ್ದು, 1,149 ಮಂದಿಯಿಂದ ಅಬ್‌ಸ್ಟ್ರಾಕ್‌ ಸ್ವೀಕರಿಸಲಾಗಿತ್ತು. ಅದರಲ್ಲಿ 891 ಪ್ರಬಂಧ ಮಂಡನೆಯಾಗಿದೆ. 119 ಸೆಶನ್‌ಗಳು, 23 ಗೋಷ್ಠಿ ನಡೆದಿದೆ ಎಂದು ಪರಿಷತ್‌ ಕಾರ್ಯದರ್ಶಿ ಪ್ರೊ| ಶಿವಾನಿಯವರು ಮಾಹಿತಿ ನೀಡಿದರು.

ಹೊಸ ಸಮಿತಿಗೆ ಆಯ್ಕೆ
52ನೇ ಸಮ್ಮೇಳನದ ಅಧ್ಯಕ್ಷರು ಸಹಿತ ಹೊಸ ಸಮಿತಿಯ ಚುನಾವಣೆ ಗೀತಾಮಂದಿರದಲ್ಲಿ ನಡೆದಿದ್ದು ಪ್ರೊ| ಶ್ರೀನಿವಾಸ ವರಖೇಡಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ರಾಗಿ ಪ್ರೊ| ಅರುಣ್‌ ರಂಜನ್‌ ಮಿಶ್ರ, ಜತೆ ಕಾರ್ಯದರ್ಶಿಯಾಗಿ ಪ್ರೊ| ಶಿವಾನಿ, ಖಜಾಂಚಿಯಾಗಿ ಪ್ರೊ| ರಮಾಕಾಂತ್‌ ಪಾಂಡೆ ಸಹಿತ ಹಲವರು ಸಮಿತಿಯ ಲ್ಲಿದ್ದಾರೆ ಎಂದು ಸಮಿತಿಯ ಪ್ರೊ| ಕವಿತಾ ಹೊಳೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next