ಹುಬ್ಬಳ್ಳಿ: ಧರ್ಮ ಅವನತಿಯತ್ತ ಸಾಗಿದಾಗ ಋಷಿ-ಮುನಿಗಳು, ಸಾಧು-ಸಂತರು ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಾರೆ. ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಈ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಮಂಗಳವಾರ ಇಲ್ಲಿನ ಗೋಕುಲ ರಸ್ತೆಯ ಹವ್ಯಕ ಭವನದಲ್ಲಿ ಶ್ರೀ ಭಗವದ್ಗೀತಾ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಧರ್ಮ ಸಂಕಷ್ಟ, ಅವನತಿಯತ್ತ ಸಾಗಿರುವ ಸಂದರ್ಭದಲ್ಲಿ ಭಗವದ್ಗೀತೆ ಪಠಣ ಅಭಿಯಾನ ಅತ್ಯಂತ ಸ್ತುತ್ಯ ಹಾಗೂ ಅನುಕರಣೀಯವಾಗಿದೆ. ಪಠಣ ಮಾಡುವುದರೊಂದಿಗೆ ಭಗವದ್ಗೀತಾ ಸಾರವನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಅಭಿಯಾನದ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ. ಅಂತಹವರ ಜೀವನ ಮುಕ್ತಿ ಕಾಣುತ್ತದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಧರ್ಮ ರಕ್ಷಣೆಗೆ ಮುಂದಾಗಿದ್ದಾರೆ. ಶ್ರೀ ಶಂಕರಾಚಾರ್ಯರ ಮೂರ್ತಿ ಸ್ಥಾಪನೆ ಮಾಡಿ ವಿಶ್ವದ ಗಮನ ಸೆಳೆದಿದ್ದಾರೆ. ಇಂತಹ ಕ್ರಾಂತಿಕಾರಿ ನಿರ್ಣಯಗಳನ್ನು ತೆಗೆದುಕೊಳ್ಳುವ ಶಕ್ತಿ ಇವರಿಗೆ ಮಾತ್ರ ಎನ್ನುವುದನ್ನು ತೋರಿಸಿದ್ದಾರೆ. ಓರ್ವ ವ್ಯಕ್ತಿ ಇಂತಹ ನಿರ್ಧಾರಗಳನ್ನು ಕೈಗೊಂಡು ಬದಲಾವಣೆ ತರುವಾಗ ಪ್ರತಿಯೊಬ್ಬರು ಮನಸ್ಸು ಮಾಡಿದರೆ ದೇಶದ ಚಿತ್ರಣ ಬದಲಿಸಬಹುದು ಎಂದು ಹೇಳಿದರು.
ಭಗವದ್ಗೀತೆ ಜೀವನದಲ್ಲಿ ಜ್ಞಾನ ನೀಡುತ್ತದೆ. ಆ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡವರು ಮಹಾನ್ ವ್ಯಕ್ತಿಗಳಾಗಿದ್ದಾರೆ. ಜಪಾನ್ ದೇಶದಲ್ಲಿ ಭಗವದ್ಗೀತೆಯ ಪಠಣ ಹಾಗೂ ಅದರಂತೆ ನಡೆದುಕೊಳ್ಳುವ ದೊಡ್ಡ ಸಮೂಹವಿದೆ. ಮನೆಯಲ್ಲಿ ಮಾತೆಯರು ಭಗವದ್ಗೀತೆ ಪಠಣ ಮಾಡಬೇಕು. ಅದರ ಸಾರವನ್ನು ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು. ಬಾಲ್ಯಾವಸ್ಥೆಯಲ್ಲೇ ಭಗವದ್ಗೀತೆಯ ಜ್ಞಾನ ಮಕ್ಕಳಿಗೆ ದೊರೆಯುವಂತಹ ಕೆಲಸ ಆಗಬೇಕು. ಧಾರ್ಮಿಕ
ಕಾರ್ಯಕ್ರಮಗಳು, ಪಾರಾಯಣಗಳು ಕೇವಲ ಹಿರಿಯರಿಗೆ ಮಾತ್ರ ಎನ್ನುವ ಮನಸ್ಥಿತಿ ಹೋಗಿ ಮಕ್ಕಳಿಂದ ಹಿಡಿದು ಯುವಕರು ಕೂಡ ಪಾಲ್ಗೊಳ್ಳುವ ಪ್ರವೃತ್ತಿ ಬೆಳೆಯಬೇಕು.ಅಂದಾಗ ಮಾತ್ರ ಸಂಸ್ಕಾರಯುತ ಹಾಗೂ ಸಮಾಜದ ಉತ್ತಮ ನಾಗರಿಕನಾಗಿ ರೂಪಗೊಳ್ಳಲು ಸಾಧ್ಯ ಎಂದರು.
ಉದ್ಯಮಿ ಹಾಗೂ ಗೀತಾಭಿಯಾನ ಸಮಿತಿ ಉಪಾಧ್ಯಕ್ಷ ಡಾ| ವಿಎಸ್‌ವಿ ಪ್ರಸಾದ ಮಾತನಾಡಿ, ಕಲಿಯುಗದಲ್ಲಿ ಭಗವದ್ಗೀತೆಯ ಮಾರ್ಗದರ್ಶನ ಅಗತ್ಯವಿದೆ. ಪ್ರತಿಯೊಬ್ಬರು ಇದನ್ನು ಅಳವಡಿಸಿಕೊಂಡರೆ ದ್ವಾಪರಯುಗ ಮರುಕಳಿಸಲಿದೆ. ಭಗವದ್ಗೀತೆ ಪಠಣದೊಂದಿಗೆ ಇದನ್ನು ಕೇಳಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂದು ಹೇಳಿದರು. ಗೀತಾಭಿಯಾನ ಸಮಿತಿ ಕಾರ್ಯಾಧ್ಯಕ್ಷ ಎ.ಸಿ. ಗೋಪಾಲ ಮಾತನಾಡಿ, ಭಗವದ್ಗೀತೆ ಮೂರನೇ ಅಧ್ಯಾಯ ಫಠಣ
ಅಭಿಯಾನ ಮಹಾನಗರದ 200 ಕಡೆಗಳಲ್ಲಿ ನಡೆಯುತ್ತಿದೆ. ಪ್ರತಿಯೊಬ್ಬರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂಬುವುದು ಸಮಿತಿಯ ಉದ್ದೇಶವಾಗಿದೆ ಎಂದರು.
ವಿಜಯಾ ಬದ್ದಿ ಉಪನ್ಯಾಸ ನೀಡಿದರು. ಪ್ರಮುಖರಾದ ಶ್ರೀಕಾಂತ ಹೆಗಡೆ, ಲಕ್ಷ್ಮಣರಾವ ಓಕ್, ಸುನೀಲ ಗುಮಾಸ್ತೆ, ಮನೋಹರ ಪರ್ವತಿ, ಅಶೋಕ ಹೆಗಡೆ, ವೀಣಾ ಹೆಗಡೆ, ವೀಣಾ ಶಿವರಾಮ ಹೆಗಡೆ, ವಿಶ್ವನಾಥ ಕುಲಕರ್ಣಿ, ಅರವಿಂದ ಮುತ್ತತಿ ಇನ್ನಿತರರಿದ್ದರು.