Advertisement

ಮೂರು ಪಥ ಸಂಚಾರಕ್ಕೆ ಮುಕ್ತ

12:00 PM Mar 02, 2018 | |

ಬೆಂಗಳೂರು: ಹಲವು ತಿಂಗಳ ಬಳಿಕ ಗುರುವಾರ ನಗರ ಪ್ರದಕ್ಷಿಣೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಬಿಎಂಪಿ ವತಿಯಿಂದ ಕೈಗೆತ್ತಿಕೊಂಡು ಪೂರ್ಣಗೊಳಿಸಿರುವ ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

Advertisement

ಗುರುವಾರ ಪಾಲಿಕೆ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ನಗರ ಪ್ರದಕ್ಷಿಣೆ ನಡೆಸಿದ ಅವರು, ಓಕಳಿಪುರ ಅಷ್ಟಪಥ ಕಾರಿಡಾರ್‌, ಚರ್ಚ್‌ಸ್ಟ್ರೀಟ್‌ ಟೆಂಡರ್‌ ಶ್ಯೂರ್‌ ರಸ್ತೆ ಹಾಗೂ ಫ್ರೀಡಂ ಪಾರ್ಕ್‌ನ ಬಹುಮಹಡಿ ಪಾರ್ಕಿಂಗ್‌ ತಾಣ ಪರಿಶೀಲಿಸಿ, ಬಾಕಿಯಿರುವ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಆದೇಶಿಸಿದರು.

ಮೊದಲಿಗೆ ಓಕಳಿಪುರ ಅಷ್ಟಪಥ ಕಾಮಗಾರಿಯ ಮೊದಲ ಹಂತವಾಗಿ ಮಲ್ಲೇಶ್ವರದಿಂದ ರಾಜಾಜಿನಗರಕ್ಕೆ ಸಿಗ್ನಲ್‌ ಮುಕ್ತ ಸಂಚಾರಕ್ಕಾಗಿ ನಿರ್ಮಿಸಿರುವ ಅಂಡರ್‌ಪಾಸ್‌, ನಗರ ಕೇಂದ್ರ ರೈಲು ನಿಲ್ದಾಣದಿಂದ ಮಲ್ಲೇಶ್ವರಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಹಾಗೂ ರಾಜಾಜಿನಗರಕ್ಕೆ ಸಂಪರ್ಕಿಸುವ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಯಿತು.

ನಂತರ ಫ್ರೀಡಂ ಪಾರ್ಕ್‌ನ ಬಹುಮಹಡಿ ನಿಲುಗಡೆ ತಾಣದ ಒಂದು ಮಹಡಿಗೆ ಸಿಎಂ ಚಾಲನೆ ನೀಡಿದರು. ನಾಲ್ಕು ಹಂತಗಳ ಪೈಕಿ ಎರಡು ಹಂತಗಳ ಕಾಮಗಾರಿ ಪೂರ್ಣಗೊಂಡಿದ್ದು, ಒಂದು ಮಹಡಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. ಮಹಡಿಯಲ್ಲಿ 50 ಕಾರುಗಳು ಹಾಗೂ 36 ಬೈಕ್‌ಗಳ ನಿಲುಗಡೆಗೆ ಅವಕಾಶವಿದೆ.

ಟೆಂಡರ್‌ಶ್ಯೂರ್‌ ಮಾದರಿಯಡಿಯಲ್ಲಿ ನಿರ್ಮಿಸಿರುವ ಚರ್ಚ್‌ಸ್ಟ್ರೀಟ್‌ನ 715 ಮೀ. ರಸ್ತೆಯನ್ನು ಕಾರ್ಬಲ್‌ ಸ್ಟೋನ್‌ ಬಳಸಿ ಅಂತಾರಾಷ್ಟ್ರೀಯ ದರ್ಜೆಯಲ್ಲಿ ನಿರ್ಮಿಸಿದ್ದು, ರಸ್ತೆಯಲ್ಲಿ ಹಲವು ಕಲೆಗಳ ದರ್ಶನವಾಗುತ್ತದೆ. ಜತೆಗೆ, ಅತ್ಯಾಕರ್ಷಕ ಬೀದಿ ದೀಪಗಳನ್ನು ಅಳವಡಿಸಲಾಗಿದೆ.

Advertisement

ಚರ್ಚ್‌ಸ್ಟ್ರೀಟ್‌ ರಸ್ತೆ ಉದ್ಘಾಟನೆ ನಂತರ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಗಳು ನಗರದಲ್ಲಿನ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಿದ್ದಾರೆ. ಮೇಲ್ಸೇತುವೆ, ಅಂಡರ್‌ಪಾಸ್‌ ಹಾಗೂ ಟೆಂಡರ್‌ ಶ್ಯೂರ್‌ ರಸ್ತೆಗಳ ನಿರ್ಮಾಣ ಕಾಮಗಾರಿ ನಡೆದಿದ್ದು, ಚರ್ಚ್‌ಸ್ಟ್ರೀಟ್‌ನಲ್ಲಿ ವಿಶ್ವದರ್ಜೆಯ ರಸ್ತೆ ನಿರ್ಮಿಸಲಾಗಿದೆ ಎಂದು ಹೇಳಿದರು. 

“ವೈಟ್‌ ಟಾಪಿಂಗ್‌ ಮೂಲಕ ಚುನಾವಣೆಗೆ ಕಮಿಷನ್‌ ಪಡೆಯುತ್ತಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡ ಆರ್‌.ಅಶೋಕ್‌ ಆರೋಪಿಸಿದ್ದಾರೆ. ಸರ್ಕಾರ ತಪ್ಪು ಮಾಡಿದಾಗ ವಿರೋಧ ಪಕ್ಷಗಳು ತಿದ್ದಬೇಕು. ಆದರೆ, ವಿನಾಕಾರಣ ಸರ್ಕಾರ ಅಥವಾ ಪಕ್ಷದ ವಿರುದ್ಧ ಆಧಾರರಹಿತವಾಗಿ ಟೀಕಿಸುವುದು,’ ಖಂಡನೀಯ ಎಂದರು.

ಲೂಟಿ ಹೊಡೆದವರಿಂದ ಪಾದಯಾತ್ರೆ: ನಗರದಲ್ಲಿ ಬಿಜೆಪಿ ಆರಂಭಿಸಿರುವ ಬೆಂಗಳೂರು ರಕ್ಷಿಸಿ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಅಧಿಕಾರ ಸಿಕ್ಕಾಗ ಬೆಂಗಳೂರನ್ನು ಲೂಟಿ ಹೊಡೆದವರು ಯಾವ ಯಾತ್ರೆ ಮಾಡಿದರೆ ಏನು ಪ್ರಯೋಜನ? ಅಧಿಕಾರ ಇದ್ದ ಸಂದರ್ಭದಲ್ಲಿ ನಗರಕ್ಕೆ ಅಪಕೀರ್ತಿ ತಂದವರು, ಈಗ ಬೆಂಗಳೂರು ರಕ್ಷಿಸಿ ಎಂದು ಹೊರಟಿದ್ದಾರೆ. ನಗರದ ಜನ ಇಂತಹ ಯಾತ್ರೆಗಳಿಗೆ ಬೆಲೆ ಕೊಡುವುದಿಲ್ಲ,’ ಎಂದು ತಿರುಗೇಟು ನೀಡಿದರು. 

ಹ್ಯಾರಿಸ್‌ ಶಕ್ತಿ ಪ್ರದರ್ಶನ: ಮಗ ಮೊಹಮ್ಮದ್‌ ನಲಪಾಡ್‌ ದರ್ವರ್ತನೆಯಿಂದ ಕ್ಷೇತ್ರದಲ್ಲಿ ಮುಜುಗರಕ್ಕೆ ಒಳಗಾಗಿರುವ ಶಾಸಕ ಹ್ಯಾರಿಸ್‌, ಗುರುವಾರ ನಡೆದ ಚರ್ಚ್‌ಸ್ಟ್ರೀಟ್‌ ರಸ್ತೆ ಉದ್ಘಾಟನಾ ಸಮಾರಂಭವನ್ನು ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಬಳಸಿಕೊಂಡಂತೆ ಕಂಡುಬಂತು. ಸುಮಾರು 715 ಮೀ. ರಸ್ತೆಯ ಎರಡೂ ಬದಿ ಪಕ್ಷದ ಬಾವುಟ ಹಿಡಿದು, ಹ್ಯಾರಿಸ್‌ ಮತ್ತು ಸಿಎಂ ಮುಖವಾಡ ಧರಿಸಿ ನಿಂತಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಶಾಸಕರ ಪರ ಘೋಷಣೆ ಕೂಗಿದರು. ನಂತರ ಸಚಿವ ಕೆ.ಜೆ.ಜಾರ್ಜ್‌ ಬಾವುಟ ಹಾರಿಸದಂತೆ ತಾಕೀತು ಮಾಡಿದರು.

ವೇದಿಕೆಗೆ ಬಾರದ ಸಿಎಂ: ಚರ್ಚ್‌ಸ್ಟ್ರೀಟ್‌ ಟೆಂಡರ್‌ಶ್ಯೂರ್‌ ರಸ್ತೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಇದಕ್ಕೆ ಸ್ಪಷ್ಟನೆ ನೀಡಿದ ಶಾಸಕ ಹ್ಯಾರಿಸ್‌, ಮುಖ್ಯಮಂತ್ರಿಗಳು ಪಾವಗಡದಲ್ಲಿ ಮತ್ತೂಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಬೇಕಿರುವ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಲಿಲ್ಲ ಎಂದರು.

ಪಕ್ಷಭೇದ ಮರೆತು ನಗರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರ ಕೆಲಸ ಮಾಡುತ್ತಿದ್ದು, ಈ ಹಿಂದೆ ಆಡಳಿತ ನಡೆಸಿದವರು ಬೆಂಗಳೂರಿಗೆ ಗಾಬೇìಜ್‌ ಸಿಟಿ ಎಂಬ ಅಪಖ್ಯಾತಿ ತಂದಿದ್ದರು. ಇದೀಗ ನಮ್ಮ ಸರ್ಕಾರ ಬೆಂಗಳೂರನ್ನು ಮತ್ತೆ ಉದ್ಯಾನ ನಗರಿಯಾಗಿಸಲು ಕ್ರಮಕೈಗೊಂಡಿದೆ.
-ಕೆ.ಜೆ.ಜಾರ್ಜ್‌, ಬೆಂಗಳೂರು ನಗರಾಭಿವೃದ್ಧಿ ಸಚಿವ

ಚುನಾವಣೆ ವೇಳೆ ಕೆಲವರು ಬೇಡದ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ. ಆದರೆ, ನಾವು ಈ 5 ವರ್ಷಗಳಲ್ಲಿ ಏನು ಕೆಲಸ ಮಾಡಿದ್ದೇವೆ ಎಂದು ಜನ ನೋಡಬೇಕು. ಬಿಜೆಪಿಯವರಿಗೆ ಸಾಮರ್ಥ್ಯವಿದ್ದರೆ ಶಾಂತಿನಗರ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ತಮ್ಮ ಶಾಸಕರ ಕ್ಷೇತ್ರಗಳಲ್ಲಿ ಮಾಡಿ ತೋರಿಸಲಿ. ಯಾರೇ ತಪ್ಪು ಮಾಡಿದರೂ ಅವರಿಗೆ ಕಾನೂನಿಂತೆ ಶಿಕ್ಷೆಯಾಗುತ್ತದೆ. ಹೀಗಾಗಿ ಮತ್ತೂಬ್ಬರಿಗೆ ಕೇಡು ಮಾಡಲು ಯಾರೂ ಮುಂದಾಗಬಾರದು. ಮನಸು ನೋಯಿಸುವ ರಾಜಕೀಯ ಮಾಡಬಾರದು. 
-ಎನ್‌.ಎ.ಹ್ಯಾರಿಸ್‌, ಶಾಂತಿನಗರ ಶಾಸಕ

ನ್ಯೂಯಾರ್ಕ್‌ನಲ್ಲಿರುವ ಟೈಮ್ಸ್‌ ಸ್ಕ್ವೇರ್‌ ಮಾದರಿಯಲ್ಲಿ ನಗರದ ಬ್ರಿಗೇಡ್‌ ರಸ್ತೆ ಜಂಕ್ಷನ್‌ಲ್ಲಿ “ಬೆಂಗಳೂರು ಸ್ಕ್ವೇರ್‌’ ನಿರ್ಮಿಸಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. 
-ಆರ್‌.ಸಂಪತ್‌ರಾಜ್‌, ಮೇಯರ್‌

ಉದ್ಘಾಟನೆಗೊಂಡ ಯೋಜನೆಗಳ ವಿವರ
ಯೋಜನೆ:
ಚರ್ಚ್‌ ಸ್ಟ್ರೀಟ್‌ ಟೆಂಡರ್‌ಶ್ಯೂರ್‌ ಕಾಮಗಾರಿ
ವಿವರ: ಚರ್ಚ್‌ಸ್ಟ್ರೀಟ್‌ ರಸ್ತೆಯನ್ನು ವಿಶ್ವದರ್ಜೆಗೇರಿಸುವುದು ಹಾಗೂ ಪದೇ ಪದೆ ರಸ್ತೆ ಅಗೆಯದಂತೆ ವಿವಿಧ ಸೇವೆಗಳ ಕೇಬಲ್‌ ಹಾಗೂ ಪೈಪ್‌ಗ್ಳನ್ನು ಪಾದಚಾರಿ ಮಾರ್ಗದ ಕೆಳಭಾಗದ ಡಕ್ಟ್ಗಳಲ್ಲಿ ಅಳವಡಿಸುವುದು.
ಕಾಮಗಾರಿ ಆರಂಭ: 2017ರ ಫೆಬ್ರವರಿ 4
ಅಂದಾಜು ವೆಚ್ಚ: 8 ಕೋಟಿ ರೂ.
ಯೋಜನಾ ವೆಚ್ಚ: 9.02 ಕೋಟಿ ರೂ.
ಗುತ್ತಿಗೆದಾರ: ಕುದ್ರೋಳಿ ಬಿಲ್ಡರ್ ಆಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈ. ಲಿ.

ಯೋಜನೆ: ಓಕಳಿಪುರ ಜಂಕ್ಷನ್‌ ಅಷ್ಟಪಥ
ವಿವರ: ದೇವರಾಜ ಅರಸು ವೃತ್ತದಿಂದ ಓಕಳಿಪುರ ವೃತ್ತದವರೆಗೆ ಎಂಟು ಪಥದ ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಾಣ. ಗುಬ್ಬಿ ತೋಟದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣಮಿಲ್‌ ರಸ್ತೆಗಳಲ್ಲಿನ ಸಂಚಾರ ಸಿಗ್ನಲ್‌ ಮುಕ್ತವಾಗಲಿದೆ.
ಕಾಮಗಾರಿ ಆರಂಭ: 2016ರ ಜುಲೈ 14
ಯೋಜನಾ ವೆಚ್ಚ: 102.84 ಕೋಟಿ ರೂ.
ಗುತ್ತಿಗೆದಾರ: ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈ. ಲಿ.

ಯೋಜನೆ: ಬಹುಮಹಡಿ ವಾಹನ ನಿಲುಗಡೆ ಕಟ್ಟಡ
ವಿವರ: ನಗರದಲ್ಲಿನ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಾಲಿಕೆಯಿಂದ ಗಾಂಧಿನಗರದ ಫ್ರೀಡಂ ಪಾರ್ಕ್‌ನಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಿಸುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರ 556 ಕಾರುಗಳು ಮತ್ತು 500 ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದು.
ಕಾಮಗಾರಿ ಆರಂಭ: 2015ರ ಜೂನ್‌ 24
ಅಂದಾಜು ವೆಚ್ಚ: 44.80 ಕೋಟಿ ರೂ.
ಯೋಜನಾ ವೆಚ್ಚ: 79.81 ಕೋಟಿ ರೂ.
ಗುತ್ತಿಗೆದಾರ: ಕೆಎಂವಿ ಪ್ರಾಜೆಕ್ಟ್

Advertisement

Udayavani is now on Telegram. Click here to join our channel and stay updated with the latest news.

Next