ಬೆಂಗಳೂರು: ತಲಘಟ್ಟಪುರ 80 ಅಡಿ ರಸ್ತೆಯಲ್ಲಿ ನಡೆದಿದ್ದ ಲಾರಿಚಾಲಕನ ಕೊಲೆಪ್ರಕರಣವನ್ನು ಭೇದಿಸುವಲ್ಲಿ ಸಫಲರಾಗಿರುವ ಪೊಲೀಸರು, ಮೂವರು ದರೋಡೆಕೋರರನ್ನು ಬಂಧಿಸಿದ್ದಾರೆ.ತೌಹೀದ್ ಅಲಿಯಾಸ್ ವರ್ದಾ, ಮುದಾಸೀರ್, ಸಲ್ಮಾನ್ ಬಂಧಿತರು.
ನ.3ರಂದು ಲಾರಿಚಾಲಕ ಭಾಸ್ಕರ್ ಕೊಲೆ ಪ್ರಕರಣದ ಜಾಡು ಹಿಡಿದ ತಲಘಟ್ಟಪುರ ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದ ತಂಡ”ಲಾರಿ ಚಾಲಕರ’ ಸೋಗಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವುದು ವಿಶೇಷ.ಮೂವರು ಆರೋಪಿಗಳ ಬಂಧನದಿಂದ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಎರಡು ದರೋಡೆ ಪ್ರಕರಣಗಳೂ ಬೆಳಕಿಗೆ ಬಂದಿವೆ.
ಖಾಸಗಿ ಕಂಪೆನಿಗೆ ಕಬ್ಬಿಣದ ಸಾಮಾಗ್ರಿಗಳನ್ನು ಪೂರೈಸುವ ಲಾರಿ ಚಾಲಕನಾಗಿದ್ದ ಆನೇಕಲ್ ಮೂಲದ ಭಾಸ್ಕರ್ ನ.3ರಂದು ರಾತ್ರಿ 80 ಅಡಿ ರಸ್ತೆಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದರು. ಈ ವೇಳೆ ದರೋಡೆಗೆ ಬಂದ ಮೂವರು ಆರೋಪಿಗಳು ಆತನ ಬಳಿ ಹಣ ಕೇಳಿದ್ದಾರೆ. ಇದಕ್ಕೊಪ್ಪದಿದ್ದಾಗ ಆತನ ತಲೆಗೆ ಹಲ್ಲೆ ನಡೆಸಿ ಕೊಲೈಗೈದು 2.500 ರೂ. ಹಣ ದೋಚಿ ಪರಾರಿಯಾಗಿದ್ದರು.
ಮೂರು ದಿನಗಳ ಬಳಿಕ ಸ್ಥಳೀಯರೊಬ್ಬರು ಲಾರಿಯಲ್ಲಿ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ನೀಡಿದ ಮಾಹಿತಿ ಮೇರೆಗೆ ಪೊಲೀಸರು ತೆರಳಿ ನೋಡಿದಾಗ ಭಾಸ್ಕರ್ ಶವ ಬಹುತೇಕ ಕೊಳೆತ ಸ್ಥಿತಿಯಲ್ಲಿತ್ತು. ಈ ಪ್ರಕರಣವನ್ನು ಹಲವು ಆಯಾಮಗಳಲ್ಲಿ ನಡೆಸಿದರೂ ಸಣ್ಣಸುಳಿವು ಲಭ್ಯವಾಗಲಿಲ್ಲ. ಭಾಸ್ಕರ್ ಕೊಲೆ ನಡೆದ ಕೆಲ ದಿನಗಳ ಬಳಿಕ ಅದೇ ಜಾಗದಲ್ಲಿ ಇಬ್ಬರು ಲಾರಿಚಾಲಕರಿಂದ ಹಣ ಸುಲಿಗೆ ಮಾಡಿದ ಪ್ರಕರಣಗಳು ವರದಿಯಾಗಿದ್ದವು.
ಈ ಸುಳಿವಿನ ಮೇರೆಗೆ ವಿಶೇಷ ತಂಡ ಲಾರಿಚಾಲಕರಾಗಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಶುರುಮಾಡಿತ್ತು. ರಸ್ತೆಬದಿ ಲಾರಿ ನಿಲ್ಲಿಸಿಕೊಂಡು ಚಾಲಕರಾಗಿದ್ದ ಪೊಲೀಸರ ಬಳಿಯೇ ಬಂದ ಆರೋಪಿಗಳು ಬೆದರಿಸಿ ಹಣ ಪಡೆಯಲು ಶುರುಮಾಡಿದ್ದರು. ಕೂಡಲೇ ಅವರನ್ನು ಬಂಧಿಸಿ ವಿಚಾರಣೆಗೊಳಿಸಿದಾಗ ಭಾಸ್ಕರ್ ಕೊಲೆ ಕೃತ್ಯದ ಬಗ್ಗೆ ಬಾಯ್ಬಿಟ್ಟರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.