Advertisement

ಥ್ರೀ-ಇನ್‌-ಒನ್‌ ಚಿತ್ರ

12:41 PM Jan 19, 2018 | Team Udayavani |

“ಕಲಾವಿದನಿಗೆ ಸದಾ ಚಾಲೆಂಜಿಂಗ್‌ ಎನಿಸುವ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಬಯಕೆ ಇದ್ದೇ ಇರುತ್ತೆ. ಅಂಥದ್ದೊಂದು ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ…’

Advertisement

ಹೀಗೆ ಹೇಳಿ ಹಾಗೊಂದು ನಗು ಹೊರ ಹಾಕಿದರು ದೇವರಾಜ್‌. ಅವರು ಹೇಳಿಕೊಂಡಿದ್ದು “3 ಗಂಟೆ 30 ದಿನ 30 ಸೆಕೆಂಡ್‌’ ಚಿತ್ರದ ಬಗ್ಗೆ. ಇಂದು ಚಿತ್ರ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡದ ಜತೆ ಮಾತಿಗೆ ಕುಳಿತಿದ್ದರು ದೇವರಾಜ್‌. ಅಂದು ಪಾತ್ರ ಕುರಿತು ಅವರು ಹೇಳಿದ್ದಿಷ್ಟು. “ನಾನಿಲ್ಲಿ ವಿಕಲಚೇತನನಾಗಿ ಕಾಣಿಸಿಕೊಂಡಿದ್ದೇನೆ. ಕಣ್ಣು ಕಾಣದ, ಕಿವಿ ಕೇಳದ ಪಾತ್ರವದು. ಪಾತ್ರ ಚಿಕ್ಕದ್ದಾಗಿದ್ದರೂ ಅದೊಂಥರಾ ಚಾಲೆಂಜಿಂಗ್‌ ಪಾತ್ರವಾಗಿತ್ತು. ಕಲಾವಿದರು ಬಯಸುವುದೇ ಆ ರೀತಿಯ ಪಾತ್ರಗಳನ್ನ. ಅಂತಹ ಪಾತ್ರದಲ್ಲಿ ನಟಿಸುವ ಅವಕಾಶ ಇಲ್ಲಿ ಸಿಕ್ಕಿದೆ. ಒಂದರ್ಥದಲ್ಲಿ 30 ಸೆಕೆಂಡ್‌ನ‌ ಪಾತ್ರ ಅಂದರೂ ಅಲ್ಲೊಂದು ವಿಶೇಷವಿದೆ. ನನ್ನ ಮಟ್ಟಿಗೆ ಹೇಳುವುದಾದರೆ, ಅದು ನೆನಪಲ್ಲಿ ಉಳಿಯುವ ಪಾತ್ರ. ನಾನೊಬ್ಬ ಕಲಾವಿದನಾಗಿ ಎಷ್ಟರಮಟ್ಟಿಗೆ ಆ ಪಾತ್ರಕ್ಕೆ ನ್ಯಾಯಸಲ್ಲಿಸಿದ್ದೇನೋ ಗೊತ್ತಿಲ್ಲ.ಇನ್ನು, ಇದು ಹೊಸಬರ ಚಿತ್ರ ಅಂತ ಅನಿಸುವುದಿಲ್ಲ. ಮಧುಸೂದನ್‌ಗೆ ಮೊದಲ ಚಿತ್ರವಾದರೂ, ಅವರು ಅನುಭವಿ ನಿರ್ದೇಶಕರಂತೆಯೇ ಕೆಲಸ ಮಾಡಿದ್ದಾರೆ. ಪ್ರಚಾರದ ವಿಷಯಕ್ಕೆ ಬಂದರೆ, ಸ್ಟಾರ್‌ ಸಿನಿಮಾ ಮಟ್ಟದಲ್ಲಿ ಪ್ರಚಾರ ಮಾಡಲಾಗಿದೆ. ಈ ಚಿತ್ರಕ್ಕೆ ಒಳ್ಳೆಯದಾಗಬೇಕು. ಇಲ್ಲಿ ಕೆಲಸ ಮಾಡಿದವರೆಲ್ಲರೂ ಗುರುತಿಸಿಕೊಳ್ಳಬೇಕು’ ಅಂತ ಹಾರೈಸಿದರು ದೇವರಾಜ್‌.

ನಿರ್ದೇಶಕ ಮಧುಸೂದನ್‌ ಅವರಿಗೆ ತಾನೊಬ್ಬ ಹೊಸ ನಿರ್ದೇಶಕ ಎಂಬ ಫೀಲ್‌ ಆಗಲಿಲ್ಲವಂತೆ. “ದೇವರಾಜ್‌, ಸುಧಾರಾಣಿ ಸೇರಿದಂತೆ ಅನೇಕರು ನೀಡಿದ ಸಹಕಾರ, ಪ್ರೋತ್ಸಾಹದಿಂದ ಹುಮ್ಮಸ್ಸಿನಿಂದ ಕೆಲಸ ಮಾಡೋಕೆ ಸಾಧ್ಯವಾಯ್ತು. ಇದು ನನ್ನೊಬ್ಬನಿಂದ ಸಾಧ್ಯವಾಗಿಲ್ಲ. ಪ್ರತಿಯೊಬ್ಬ ಕಲಾವಿದ, ತಂತ್ರಜ್ಞರು ಕೊಟ್ಟ ಸಹಕಾರದಿಂದ ಸಾಧ್ಯವಾಗಿದೆ. ದೇವರಾಜ್‌ ಸರ್‌ ಅವರು, ನಾನೊಬ್ಬ ಹೊಸಬ ಅಂತ ಯೋಚಿಸದೆ, ಈ ರೀತಿ ಮಾಡಿದರೆ ಓಕೆನಾ ಅನ್ನೋರು. ಇಲ್ಲಿ ಪಾತ್ರವಿರಲಿ, ಅವುಗಳ ವಸ್ತ್ರ ¤ವಿನ್ಯಾಸವಿರಲಿ, ಚಿತ್ರೀಕರಣದ ಸ್ಥಳಗಳಿರಲಿ ಹೊಸದಾಗಿರಬೇಕೆಂಬ ಕಾರಣಕ್ಕೆ ಎಲ್ಲವನ್ನೂ ಹೊಸತನದಿಂದ ಮಾಡಲಾಗಿದೆ’ ಎಂಬ ವಿವರ ಕೊಟ್ಟರು ಮಧುಸೂದನ್‌.

ನಿರ್ಮಾಪಕ ಚಂದ್ರಶೇಖರ್‌ ಪದ್ಮಶಾಲಿ ಅವರಿಗೆ ಒಳ್ಳೆಯ ಚಿತ್ರ ಮಾಡಿದ ತೃಪ್ತಿ ಇದೆಯಂತೆ. ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ. ಎಲ್ಲರ ಸಹಕಾರ ಇದ್ದುದರಿಂದಲೇ ಒಂದು ಹೊಸ ಪ್ರಯತ್ನ ಮಾಡಿದ್ದಾಗಿ ಹೇಳಿಕೊಂಡರು ನಿರ್ಮಾಪಕರು.

ನಾಯಕ ಅರುಗೌಡ ಅವರಿಲ್ಲಿ ವಕೀಲ ಪಾತ್ರ ನಿರ್ವಹಿಸಿದ್ದಾರಂತೆ. ಅದಕ್ಕೆ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದರಂತೆ. “ಇಡೀ ಚಿತ್ರದಲ್ಲಿ ಒಳ್ಳೆಯ ಅನುಭವ ಆಗಿದೆ. ನನ್ನ ಚಿತ್ರಕ್ಕೆ ಸಿಕ್ಕ ಈ ಪರಿ ಪ್ರಚಾರ ಇದೇ ಮೊದಲು. ಇಲ್ಲಿ ಯಾವುದೇ ಮುಜುಗರದ ಸನ್ನಿವೇಶವಿಲ್ಲ. ಮಕ್ಕಳೊಂದಿಗೆ ದೊಡ್ಡವರು ಕುಳಿತು ನೋಡಲು ಯಾವುದೇ ಸಮಸ್ಯೆ ಇಲ್ಲ. ಕ್ಲಾಸ್‌, ಮಾಸ್‌, ಆರ್ಟ್‌ ಮಿಕ್ಸ್‌ ಆಗಿರುವ ಚಿತ್ರವಿದು’ ಅಂದರು ಅರುಗೌಡ.

Advertisement

ನಾಯಕಿ ಕಾವ್ಯಾ ಶೆಟ್ಟಿ ಅವರಿಗೆ ಎಂದಿಗಿಂತ ಜಾಸ್ತಿ ಸಂತೋಷವಾಗಿದೆಯಂತೆ. “ಎಲ್ಲೇ ಹೋದರೂ, 30 ಗಂಟೆ ಸಿನಿಮಾ ಬಗ್ಗೆಯೇ ಕೇಳುತ್ತಾರೆ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಸಿಕ್ಕಿದೆ. ನಾನು ಸಿನಿಮಾ ನೋಡೋಕೆ ಕಾದಿದ್ದೇನೆ. ಒಂದು ವರ್ಷದ ಈ ಜರ್ನಿಯಲ್ಲಿ ಸಾಕಷ್ಟು ಮಾಸದ ನೆನಪುಗಳಿವೆ’ ಎಂದರು ಕಾವ್ಯಾ ಶೆಟ್ಟಿ. ನೃತ್ಯ ನಿರ್ದೇಶಕ ತ್ರಿಭುವನ್‌ ಬಹಳ ದಿನಗಳ ನಂತರ ದೇವರಾಜ್‌ ಅವರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದೆಯಂತೆ.  ಜೋಯಲ್‌ ಅವರು ವಿದೇಶದಲ್ಲೂ ಚಿತ್ರ ರಿಲೀಸ್‌ ಮಾಡುತ್ತಿದ್ದು, ಅಮೇರಿಕಾ, ಆಸ್ಟ್ರೇಲಿಯಾ, ಯುರೋಪ್‌, ಲಂಡನ್‌ ಮತ್ತು ಜರ್ಮನಿಯಲ್ಲಿ ಬಿಡುಗಡೆ ಮಾಡುವ ತಯಾರಿ ನಡೆಸಿದ್ದಾರೆ. ಯಮುನಾ, ದರ್ಶನ್‌ ಇತರರು ಅನುಭವ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next