Advertisement

ರಸ್ತೆ ಅಪಘಾತದಲ್ಲಿ ಮೂವರು ಸಾವು

11:26 AM Nov 02, 2018 | Team Udayavani |

ಬೆಂಗಳೂರು: ನಗರದ ಮೂರು ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ, ಟೆಕ್ಕಿ ಸೇರಿ ಮೂವರು ಮೃತಪಟ್ಟಿದ್ದಾರೆ. ತಟ್ಟೆ ಇಡ್ಲಿ ತಿನ್ನಲು ಬಿಡದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ರಸ್ತೆ ಸಮೀಪದ “ನೈಸ್‌’ ಜಂಕ್ಷನ್‌ನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

Advertisement

ವಿಜಯನಗರ ನಿವಾಸಿ ಪೂರ್ಣಚಂದ್ರ (18) ಮೃತ ವಿದ್ಯಾರ್ಥಿ. ಘಟನೆ ಸಂಬಂಧ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಚಿಕ್ಕಪ್ಪ ಎಂಬಾತನನ್ನು ಬಂಧಿಸಲಾಗಿದೆ. ವಿಜಯನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪೂರ್ಣಚಂದ್ರ ಮತ್ತು ಇತರೆ ಮೂವರು ಸ್ನೇಹಿತರೊಂದಿಗೆ ಎರಡು ಬೈಕ್‌ಗಳಲ್ಲಿ ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ತಟ್ಟೆ ಇಡ್ಲಿ ತಿನ್ನಲು ಬಿಡದಿಗೆ ಹೋಗುತ್ತಿದ್ದರು.

ಇದೇ ವೇಳೆ ವೇಗವಾಗಿ ಬಂದ ಮೈಸೂರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌, ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಪೂರ್ಣಚಂದ್ರ ಕೆಳಗೆ ಬಿದ್ದಿದ್ದಾನೆ. ಬಳಿಕ ಬಸ್‌ ಈತನ ಎರಡು ಕಾಲುಗಳ ಮೇಲೆ ಹರಿದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಧಾವಿಸಿದ ಕೆಂಗೇರಿ ಸಂಚಾರ ಪೊಲೀಸರು ಆರೋಪಿ ಬಸ್‌ ಚಾಲಕ ಚಿಕ್ಕಪ್ಪನನ್ನು ಬಂಧಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್‌.ಆರ್‌.ನಗರ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ಕೆಂಗೇರಿ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

ಟೆಕ್ಕಿ ಸಾವು: ಬೈಕ್‌ನಲ್ಲಿ ವೇಗವಾಗಿ ಹೋಗುವಾಗ ನಿಯಂತ್ರಣ ತಪ್ಪಿ ಬಟ್ಟೆ ಅಂಗಡಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಟೆಕ್ಕಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆ.ಆರ್‌.ಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ.

Advertisement

ಆಂಧ್ರಪ್ರದೇಶ ಮೂಲದ ಸೂರ್ಯತೇಜು (27) ಮೃತ ಟೆಕ್ಕಿ. ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಕಲ್ಕರೆಯಿಂದ ರಾಮಮೂರ್ತಿನಗರಕ್ಕೆ ಹೋಗುವಾಗ ದುರ್ಘ‌ಟನೆ ಸಂಭವಿಸಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಟೆಕ್ಕಿ ಸೂರ್ಯತೇಜು ರಾಮಮೂರ್ತಿನಗರದ ಬಾಡಿಗೆ ಮನೆಯೊಂದರಲ್ಲಿ ಸೇಹಿತರ ಜತೆ ವಾಸವಾಗಿದ್ದು, ಐಟಿಪಿಎಲ್‌ ಕಂಪನಿಯಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ. ಗುರುವಾರ ನಸುಕಿನ 2 ಗಂಟೆ ಸುಮಾರಿಗೆ ಕೆಲಸ ಮುಗಿದ ಬಳಿಕ ಕಲ್ಕರೆಯಲ್ಲಿರುವ ಸ್ನೇಹಿತನನ್ನು ಬಿಟ್ಟು ವಾಪಸ್‌ ರಾಮಮೂರ್ತಿನಗರ ಕಡೆಗೆ ವೇಗವಾಗಿ ಬಂದಿದ್ದಾನೆ.

ಈ ವೇಳೆ ರಾಮಮೂರ್ತಿನಗರ ಮುಖ್ಯರಸ್ತೆಯ ಆಲದಮರದ ಬಸ್‌ ನಿಲ್ದಾಣ ಸಮೀಪ ನಿಯಂತ್ರಣ ತಪ್ಪಿ ಬಟ್ಟೆ ಅಂಗಡಿಯ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ವೇಳೆ ಸೂರ್ಯತೇಜು ಹೆಲ್ಮೆಟ್‌ ಧರಿಸಿರಲಿಲ್ಲ. ಹೀಗಾಗಿ ದುರ್ಘ‌ಟನೆ ಸಂಭವಿಸಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಪ್ರಕರಣ ಕೆ.ಆರ್‌.ಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಪರಿಚಿತ ವ್ಯಕ್ತಿ ಸಾವು: ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಲಸೂರು ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಹಲಸೂರಿನ 100 ಅಡಿ ರಸ್ತೆಯ ದೂಪನಹಳ್ಳಿ ಜಂಕ್ಷನ್‌ ಬಳಿ ಅಪರಿಚಿತ ವ್ಯಕ್ತಿ ರಸ್ತೆ ದಾಟುತ್ತಿದ್ದರು.

ಈ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಆ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯ ಹೆಸರು ವಿಳಾಸ ಪತ್ತೆಯಾಗಿಲ್ಲ. 45-50 ವರ್ಷ ವಯಸ್ಸಿನವರಾಗಿದ್ದು, ಮೃತದೇಹವನ್ನು ಬೌರಿಂಗ್‌ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಹಲಸೂರು ಸಂಚಾರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next