Advertisement

ಈ ಬಾರಿ ಜ.15 ರಿಂದ ಜ.17 ರ ತನಕ ಮಾರಣಕಟ್ಟೆ ಮಕರ ಸಂಕ್ರಮಣ ಉತ್ಸವ

10:01 AM Jan 15, 2020 | Nagendra Trasi |

ಮಾರಣಕಟ್ಟೆ, ಜ.14:ಉಡುಪಿ,ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ಆರಾಧ್ಯ ದೇವವಾಗಿರುವ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಈ ಬಾರಿ ಜ.15 ರಿಂದ ಜ.17 ರ ತನಕ ಮಕರಸಂಕ್ರಮಣ ಉತ್ಸವ ಜರಗಲಿದೆ.

Advertisement

ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರು ಕಟ್ಟುನಿಟ್ಟಾಗಿ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸದೆ ಬಟ್ಟೆ ಅಥವಾ ಕಾಗದದ ಚೀಲ ಬಳಸುವಂತೆ ಸೂಚಿಸಲಾಗಿದ್ದು ಪ್ಲಾಸ್ಟಿಕ್‌ ಮುಕ್ತ ಮಕರಸಂಕ್ರಮಣ ಉತ್ಸವ ನಡೆಸಲು ಸಕಲ ಸಿದ್ಧತೆ ಪೂರ್ಣಗೊಂಡಿದೆ ಎಂದು ದೇಗುಲದ ಆಡಳಿತ
ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ಹಾಗೂ ಮಂಡಳಿಯ ಪ್ರಮುಖ ಸಿ.ರಘುರಾಮ ಶೆಟ್ಟಿ ತಿಳಿಸಿದ್ದಾರೆ.

ಹಲವಾರು ವರ್ಷಗಳ ಅನಂತರ ಈ ಬಾರಿ ಜ. 14ರ ಬದಲು ಜ.15ರಂದು ಸಂಕ್ರಮಣ ಉತ್ಸವ ಆರಂಭಗೊಳಲಿದ್ದು ಅದಕ್ಕಾಗಿ ದೇಗುಲ ಪರಿಸರದಲ್ಲಿ ಅಂಗಡಿ ಮುಂಗಟ್ಟುಗಳ ಸಹಿತ ರಥಬೀದಿಯನ್ನು ಸುಂದರವಾಗಿ ಅಲಂಕರಿಸಲಾಗುತ್ತಿದೆ. ಮಕರ ಸಂಕ್ರಮಣ ಸಂದರ್ಭ ನಡೆಯುವ ಸೇವಂತಿಗೆ ಹೂವಿನ ಹೊರೆ ಕಾಣಿಕೆ ಮಹತ್ವದ್ದಾಗಿದ್ದು ಇದಕ್ಕಾಗಿ ಸರತಿಯ ಸಾಲಿನಲ್ಲಿ ಸಾಗಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ,
ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ .

ಕ್ಷೇತ್ರದ ವಿಶೇಷ ಉತ್ಸವಗಳು
ಮಾರಣಕಟ್ಟೆ ಮಕರ ಸಂಕ್ರಾಂತಿಯು ಬಹುದೊಡ್ಡ ಜಾತ್ರೆ. ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ತುಳುನಾಡಿನಿಂದ ಅಸಂಖ್ಯಾಕ ಭಕ್ತರು ಆಗಮಿಸುತ್ತಾರೆ. ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದ ಸಿಂಗಾರ ಹೂವಿನ ಅರ್ಪಣೆ ವಿಶೇಷವಾಗಿದೆ. ಕುಂಭ ಸಂಕ್ರಮಣ ಇಲ್ಲಿನ ಇನ್ನೊಂದು ವಿಶೇಷ ಜಾತ್ರೆ. ಅದಲ್ಲದೆ ವರ್ಷದ ಮೂರು ಕಾಲದಲ್ಲಿ ಚೆರುವಿನ ಪೂಜೆ, ಸಂಪ್ರೋಕ್ಷಣೆ, ಸೌರಮಾನ ಯುಗಾದಿ, ಸೋಣೆ ಆರತಿ, ಕದಿರು ಕಟ್ಟುವುದು, ದೀಪೋತ್ಸವ ಇವು ಇಲ್ಲಿನ ಇನ್ನಿತರ ವಿಶೇಷ ಪೂಜೆಗಳು.

ಸಂಕ್ರಾಂತಿ ಪೂಜಾ ವಿಶೇಷತೆ
ಜ.15 ರಂದು ಮಧ್ಯಾಹ್ನ12 ಗಂಟೆಗೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಮಂಗಳಾರತಿ ಹಾಗೂ ರಾತ್ರಿ 10. 30ಕ್ಕೆ ಗೆಂಡ ಸೇವೆ . ಜ.16 ರಂದು ಬೆಳಗ್ಗೆ 9.30ಕ್ಕೆ ಮಹಾ ಮಂಗಳಾರತಿ , ಅನಂತರ ಮಂಡಲ ಸೇವೆ. ಜ.17ರಂದು ಬೆಳಗ್ಗೆ 9.30 ಕ್ಕೆ ಮಹಾಮಂಗಳಾರತಿ , ಅನಂತರ ಮಂಡಲ ಸೇವೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next