ಬನ್ನೂರು: ಕೃಷಿ ಹೊಂಡಕ್ಕೆ ಬಿದ್ದು ಮೂರು ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ.
ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಅಂಕನಹಳ್ಳಿ ಗ್ರಾಮದ ದರ್ಗಾದ ಹತ್ತಿರ ಶಿವರಾಜು ಎಂಬುವರ ಜಮೀನಿನಲ್ಲಿ ನಿರ್ಮಿಸಿದ್ದ ಕೃಷಿ ಹೊಂಡಕ್ಕೆ ಆಟ ಆಡುತ್ತಿದ್ದ ಮೂರು ಮಕ್ಕಳು ಮಂಗಳವಾರ ಸಂಜೆ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನಪ್ಪಿವೆ.
ಮೃತಪಟ್ಟ ಮಕ್ಕಳನ್ನು ಸಂಜಯ್ (4), ರೋಹಿತ್ (3) ಮತ್ತು ಕಾವೇರಿ (2) ಎಂದು ಗುರುತಿಸಲಾಗಿದೆ.ಇವರೆಲ್ಲರೂ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾಗಲಾಪುರ ಗ್ರಾಮದಿಂದ ಬಣ್ಣಾರಿ ಅಮ್ಮನ್ ಕಾರ್ಖಾನೆಗೆ ಕಬ್ಬು ಕಟಾವು ಮಾಡಲು 40 ದಿವಸಗಳ ಹಿಂದೆ ಬಂದಿದ್ದರು ಮತ್ತು ಬನ್ನೂರು ಹೋಬಳಿಯ ಅಂಕನಹಳ್ಳಿ ಗ್ರಾಮದ ದರ್ಗಾದ ಹತ್ತಿರ ವಾಸಿಸಲು ಟೆಂಟ್ ಹಾಕಿಕೊಂಡು ಜೀವನ ನಡೆಸುತಿದ್ದರು.
ಸ್ಥಳಕ್ಕೆ ಮೈಸೂರು ಜಿಲ್ಲಾ ಅಡಿಸನಲ್ ಎಸ್.ಪಿ.ಶಿವಕುವಾರ್, ಬನ್ನೂರು ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಬಿ.ಎನ್.ಪುನೀತ್ ಭೇಟಿ ನೀಡಿ ಶವಗಳನ್ನು ಬನ್ನೂರು ಸರ್ಕಾರಿ ಅಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಕ್ಕಳ ಪೋಷಕರಿಗೆ ಒಪ್ಪಿಸಲಾಯಿತು.
ಮೃತ ಮಕ್ಕಳನ್ನು, ಸಂಬಂಧಿಕರು ಸೇರಿದಂತೆ ಎಲ್ಲರನ್ನು ಬನ್ನೂರು ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಬಿ.ಎನ್.ಪುನೀತ್ ವಾಹನದ ವ್ಯವಸ್ಥೆ ವಾಡಿಕೊಟ್ಟು ಹೋಸಪೇಟೆಯ ಸ್ವಗ್ರಾಮಕ್ಕೆ ಕಳುಹಿಸಿಕೊಟ್ಟರು.
ಇಷ್ಟೆಲ್ಲಾ ಆದರೂ ಮಾನವೀಯತೆ ದೃಷ್ಟಿಯಿಂದಾದರೂ ಬಣ್ಣಾರಿ ಅಮ್ಮನ್ ಕಾರ್ಖಾನೆಯ ಯಾವೊಬ್ಬ ಸಿಬ್ಬಂದಿಯು ಸ್ಥಳಕ್ಕೆ ಬಾರದೇ ಇದ್ದುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.