Advertisement

ದನ ಕಳ್ಳರ ವಿರುದ್ಧ ಮೂರು ಪ್ರಕರಣ: ನಾಲ್ವರ ಬಂಧನ

10:48 AM Jul 28, 2018 | |

ಮಂಗಳೂರು: ನಗರದ ಪಾಂಡೇಶ್ವರ, ಕಾವೂರು ಮತ್ತು ಮೂಡಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಪ್ರತ್ಯೇಕ ದನ ಕಳವು ಪ್ರಕರಣಗಳಿಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಟ್ವಾಳ ಅಮ್ಮೆಮ್ಮಾರ್‌ ನಿವಾಸಿ ಇಮ್ರಾನ್‌ ಯಾನೆ ಕುಟ್ಟ ಇಮ್ರಾನ್‌ (27), ಬಜಪೆ ಶಾಂತಿಗುಡ್ಡೆಯ ಉಮ್ಮರ್‌ ಫಾರೂಕ್‌ (32), ಕಸಬಾ ಬೆಂಗ್ರೆಯ ಅಬ್ದುಲ್‌ ಕಬೀರ್‌ ಯಾನೆ ಪಾರಿವಾಳ ಕಬೀರ್‌ (30) ಮತ್ತು ಎಡಪದವು ಬಡಗ ತೋಡಾರು ನಿವಾಸಿ ಕೆ. ಅಬ್ದುಲ್‌ ಬಶೀರ್‌ ಯಾನೆ ಅರ್ಗ ಬಶೀರ್‌ (42) ಬಂಧಿತರು. ಆರೋಪಿಗಳಿಂದ ಸ್ಕಾರ್ಪಿಯೋ ಮತ್ತು ಇನ್ನೊಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. 

ಪ್ರಕರಣ 1
ಜೂ.16 ಮತ್ತು 17ರಂದು ಮೂಡುಶೆಡ್ಡೆ ಬೈಲು ನಿವಾಸಿ ಪುರುಷೋತ್ತಮ ಅವರ  ಹಟ್ಟಿಯಿಂದ 2 ದನಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಇಮ್ರಾನ್‌ ಹಾಗೂ ಫಾರೂಕ್‌ನನ್ನು ಬಂಧಿಸಲಾಗಿದೆ. 

ಆರೋಪಿಗಳ ಇಮ್ರಾನ್‌ ಯಾನೆ ಕುಟ್ಟ ಇಮ್ರಾನ್‌ ವಿರುದ್ಧ ಉಳ್ಳಾಲ, ಕೊಣಾಜೆ, ಬಜಪೆ, ಮಂಗಳೂರು ಗ್ರಾಮಾಂತರ, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ ಹಾಗೂ ಕೊಡಗು ಜಿಲ್ಲೆಯ ಕುಶಾಲನಗರ, ಸೋಮವಾರಪೇಟೆ, ಹಾಸನ ಜಿಲ್ಲೆಯ ಸಕಲೇಶಪುರ, ಪೊಲೀಸ್‌ ಠಾಣೆಗಳಲ್ಲಿ ದನಕಳ್ಳತನ ಹಾಗೂ ಕೊಲೆ ಸಹಿತ ಒಟ್ಟು 20 ಪ್ರಕರಣಗಳಿವೆ.

Advertisement

ಫಾರೂಕ್‌ ವಿರುದ್ಧ ಬಜಪೆ, ಬಂಟ್ವಾಳ ನಗರ, ಉಪ್ಪಿನಂಗಡಿ, ವೇಣೂರು, ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ  ಠಾಣೆಗಳಲ್ಲಿ  ದನ ಕಳವು ಸಂಬಂಧಿಸಿ  10 ಪ್ರಕರಣಗಳಿವೆ. 

ಪ್ರಕರಣ 2
ಪಾಂಡೇಶ್ವರ ಗೂಡ್ಸ್‌ ಶೆಡ್‌ ಬಳಿ ಮೇಯುತ್ತಿದ್ದ 2 ದನ ಹಾಗೂ ಕರುವನ್ನು ಕಳವು ಮಾಡಿದ ಪ್ರಕರಣ ಕುರಿತಂತೆ  ಆರೋಪಿ ಕಸಬಾ ಬೆಂಗ್ರೆಯ ಅಬ್ದುಲ್‌ ಕಬೀರ್‌ ಯಾನೆ ಪಾರಿವಾಳ ಕಬೀರ್‌ (30) ಬಂಧಿತನಾಗಿದ್ದಾನೆ. 

ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ದನಗಳು ಮತ್ತು ಕರುವನ್ನು ಜು.5ರಂದು ಮೇಯಲು ಬಿಟ್ಟಿದ್ದು, ಕಳ್ಳರು ಅಲ್ಲಿಂದಲೇ ಕದ್ದೊಯ್ದಿದ್ದರು. 

ಕಬೀರ್‌ನಿಂದ ದನ ಕಳ್ಳತನ ಮಾಡಲು ಉಪಯೋಗಿಸಿದ ಮಾರುತಿ ರಿಟ್ಜ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ಪಣಂಬೂರು ಪೊಲೀಸ್‌ ಠಾಣೆಯಲ್ಲಿ ದರೋಡೆ ಪ್ರಕರಣ, ಬಜಪೆ ಪೊಲೀಸ್‌ ಠಾಣೆಯಲ್ಲಿ ದನಕಳ್ಳತನ ಪ್ರಕರಣ, ಉಳ್ಳಾಲ ಹಾಗೂ ಉಪ್ಪಿನಂಗಡಿ ಪೊಲೀಸ್‌ ಠಾಣೆಗಳಲ್ಲಿ ಮೊಬೈಲ್‌ ಕಳ್ಳತನ ಹಾಗೂ ಇತರ ಪ್ರಕರಣಗಳಿವೆ.

ಈತ  ಕೆಲವು ಪ್ರಕರಣಗಳಲ್ಲಿ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿದ್ದು,  ಈತನ ವಿರುದ್ಧ ವಾರಂಟ್‌ ಹೊರಡಿಸಲಾಗಿತ್ತು.

ಪ್ರಕರಣ 3
ಮೂಡಬಿದಿರೆ ಠಾಣಾ ವ್ಯಾಪ್ತಿಯ ಮೂರು ಕಡೆಗಳಲ್ಲಿ ನಡೆದ ದನಕಳವು ಪ್ರಕರಣಕ್ಕೆ ಸಂಬಂಧಿಸಿ ಎಡಪದವು ಬಡಗ ತೋಡಾರು ನಿವಾಸಿ ಕೆ. ಅಬ್ದುಲ್‌ ಬಶೀರ್‌ ಯಾನೆ ಅರ್ಗ ಬಶೀರ್‌ (42)ನನ್ನು ಬಂಧಿಸಲಾಗಿದೆ.

ಈತನ ಮೇಲೆ 2017ರಲ್ಲಿ  ಮೂಡ ಬಿದಿರೆ ರಿಂಗ್‌ರೋಡ್‌, ಒಂಟಿಕಟ್ಟೆ, ಬೊಗ್ರುಗುಡ್ಡೆ ಹಟ್ಟಿಯೊಂದರಿಂದ ದನಕಳವು ಪ್ರಕರಣ ಮಾತ್ರವಲ್ಲದೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.

ಈತನನ್ನು ಸಿಸಿಬಿ ಪೊಲೀಸರು ತೋಡಾರು ಬಳಿಯಿಂದ ವಶಕ್ಕೆ ಪಡೆದು ಮೂಡಬಿದಿರೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಆರೋಪಿಗಳು ಇನ್ನೂ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ವಿಚಾರಣೆ ವೇಳೆ ತಿಳಿದು ಬಂದಿದೆ. ಇನ್ನೂ ಹಲವು ಆರೋಪಿಗಳ‌ನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next