ಪೂಂಚ್ : ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (LoC) ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳೊಂದಿಗೆ ಮೂವರು ಭಯೋತ್ಪಾದಕರನ್ನು ಸೇನೆ ಬುಧವಾರ ಬಂಧಿಸಿದೆ.
ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ ಸೇನೆ 10 ಕೆಜಿಯ ಶಕ್ತಿಶಾಲಿ ಸುಧಾರಿತ ಸ್ಫೋಟಕ ಸಾಧನವನ್ನು (IED) ಹೊಂದಿದ್ದ ಭಯೋತ್ಪಾದಕರು ಈ ಭಾಗಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಗಡಿ ಬೇಲಿ ಬಳಿ ಗುಂಡಿನ ಚಕಮಕಿ ನಡೆಸಿದ್ದು ಆ ಬಳಿಕ ಬಂಧಿಸಲಾಯಿತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾ ಸಿಬಂದಿ ಹಾಗೂ ಓರ್ವ ಭಯೋತ್ಪಾದಕ ಗಾಯಗೊಂಡಿದ್ದಾರೆ. ಸೇನೆಯು ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿತ್ತು.
ಮೇ 30 ಮತ್ತು 31 ರ ರಾತ್ರಿ ಕೆಟ್ಟ ಹವಾಮಾನ ಮತ್ತು ಭಾರೀ ಮಳೆಯ ಲಾಭವನ್ನು ಪಡೆದುಕೊಂಡು ಪೂಂಚ್ ಸೆಕ್ಟರ್‌ನ ಎಲ್‌ಒಸಿಯಲ್ಲಿ ಮೂರ್ನಾಲ್ಕು ಭಯೋತ್ಪಾದಕರು ಬೇಲಿ ದಾಟಲು ಪ್ರಯತ್ನಿಸುತ್ತಿದ್ದಾಗ ತಡೆಯಲಾಗಿದೆ ಎಂದು ಜಮ್ಮು- ಮೂಲದ ಸೇನಾ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ದೇವೆಂದರ್ ಆನಂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕರ್ಮರ ನಿವಾಸಿಗಳಾದ ಮೊಹಮ್ಮದ್ ಫಾರೂಕ್ (26)ಕಾಲಿಗೆ ಗುಂಡು ತಗುಲಿದೆ , ಮೊಹಮ್ಮದ್ ರಿಯಾಜ್ (23) ಮತ್ತು ಮೊಹಮ್ಮದ್ ಜುಬೇರ್ (22) ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳು ಮತ್ತು ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರಿಂದ ಎಕೆ ಅಸಾಲ್ಟ್ ರೈಫಲ್, ಎರಡು ಪಿಸ್ತೂಲುಗಳು, ಆರು ಗ್ರೆನೇಡ್‌ಗಳು, ಪ್ರೆಶರ್ ಕುಕ್ಕರ್‌ನಲ್ಲಿ ಅಳವಡಿಸಲಾಗಿದ್ದ 10 ಕೆಜಿ ಐಇಡಿ ಮತ್ತು 100 ಕೋಟಿ ರೂ.ಗೂ ಅಧಿಕ ಮೌಲ್ಯದ 20 ಹೆರಾಯಿನ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.