Advertisement
ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ಸ್ಥಳೀಯರಾಗಿರುವ ಹಾಸನ ವಿಧಾನ ಪರಿಷತ್ತಿನ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹಾಗೂ ಹೊಳೆನರಸೀಪುರ ವಿಧಾನ ಸಭೆ ಶಾಸಕ ಎಚ್.ಡಿ.ರೇವಣ್ಣ ಈ ಮೂರು ಮಂದಿಯ ಮನೆ ಬಾಗಿಲಿಗೆ ನಿತ್ಯವೂ ನೂರಾರು ಮಂದಿ ತೆರಳಿ ಪಶುಭಾಗ್ಯ ಯೋಜನೆ ಸವಲತ್ತು ಕೊಡಿಸುವಂತೆ ಅಂಗಲಾಚಿ ಬೇಡುತ್ತಿದ್ದಾರೆ. ಆದರೆ, ಪ್ರಸಕ್ತ ವರ್ಷ ಕೇವಲ 31 ಮಂದಿಯನ್ನು ಮಾತ್ರ ಆಯ್ಕೆ ಮಾಡಬೇಕಿದ್ದು ಜನಪ್ರತಿನಿಧಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
Related Articles
Advertisement
ಆರ್‌ಕೆವಿವೈ ಸ್ಥಗಿತ: ರಾಜ್ಯದಲ್ಲಿ ಪಶುಭಾಗ್ಯ ಯೋಜನೆ ಫಲಾನುಭವಿಗಳ ಸಂಖ್ಯೆ ಕಡಿಮೆ ಆಗಲು ಕೇಂದ್ರ ಸರ್ಕಾರದ ಯೋಜನೆಯಾಗಿರುವ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯನ್ನು ಸಂಪೂರ್ಣವಾಗಿ ಪ್ರಸಕ್ತ ವರ್ಷ ನಿಲ್ಲಿಸಿದ್ದಾರೆ. ಇದರಿಂದ ಕೇಂದ್ರದಿಂದ ಹಣ ಸಂದಾಯವಾಗುತ್ತಿಲ್ಲ ರಾಜ್ಯದಲ್ಲಿ ಈ ಯೋಜನೆಗೆ ವೆಚ್ಚ ಮಾಡಲು ನಿಗದಿ ಆಗಿರುವ ಹಣದಲ್ಲಿ ಮಾತ್ರ ಯೋಜನೆ ರೈತರಿಗೆ ತಲುಪಬೇಕಿದೆ. ಹೀಗಾಗಿ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗಿದೆ.
ಯೋಜನೆ ಉದ್ದೇಶ: ಪಶುಭಾಗ್ಯ ಯೋಜನೆ ಕೃಷಿಯೇತರ ಚಟುವಟಿಕೆಗೆ ಪ್ರೋತ್ಸಾಹಿಸಲು ಜಾರಿ ಮಾಡಲಾಗಿದೆ. ಕೃಷಿಯಲ್ಲಿ ತೊಡಗಿಕೊಂಡಿರುವ ರೈತರಿಗೆ ಸಹಾಯಧನ ರೂಪದಲ್ಲಿ ಹಸು, ಎಮ್ಮೆ, ಕುರಿ, ಮೇಕೆ, ಕೋಳಿ ಖರೀದಿ ಮಾಡಿ, ಇಲಾಖೆಯಿಂದ ವಿತರಣೆ ಮಾಡಲಾಗುತ್ತದೆ. ಕೃಷಿ ಜೊತೆಗೆ ಹೈನುಗಾರಿಕೆಗೆ ಆದ್ಯತೆ ನೀಡುವುದು ಯೋಜನೆಯ ಮುಖ್ಯ ಉದ್ದೇಶ. ಆಯ್ಕೆಯಾದ ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಶೇ.90 ಸಹಾಯಧನ, ಸಾಮಾಜ್ಯ ವರ್ಗದವರಿಗೆ ಶೇ.50 ಸಹಾಯಧನ ನೀಡಲಾಗುತ್ತದೆ.
ಸಾವಿರಾರು ಅರ್ಜಿಗಳು ಮೂಲೆ ಗುಂಪು: ಯೋಜನೆ ಪ್ರಾರಂಭವಾದ ವರ್ಷ ಎರಡು ಸಾವಿರ ಮಂದಿ ಅರ್ಜಿ ನೀಡಿದರೂ ಅಂದು 200 ಮಂದಿ ಫಲಾನುಭವಿಗಳಿಗೆ ಯೋಜನೆ ತಲುಪಿತು. ನಂತರದ ವರ್ಷದಲ್ಲಿ ಒಂಧೂವರೆ ಸಾವಿರ ಹೀಗೆ ಪ್ರತಿ ವರ್ಷವೂ ಸಾವಿರಾರು ಅರ್ಜಿಗಳು ಪಶು ಇಲಾಖೆ ಕಚೇರಿ ತಲುಪುತ್ತಿವೆ. ಬೇಡಿಕೆಗೆ ತಕ್ಕಂತೆ ಸರ್ಕಾರ ಫಲಾನುಭವಿಗಳ ಸಂಖ್ಯೆ ಹೆಚ್ಚಿಸದೆ ವರ್ಷದಿಂದ ವರ್ಷಕ್ಕೆ ಯೋಜನೆ ಫಲಾನುಭವಿಗಳನ್ನು ಕಡಿತ ಮಾಡುತ್ತಿರುವುದರಿಂದ ಕಚೇರಿಯಲ್ಲಿ ಕನಿಷ್ಠ ನಾಲ್ಕು ಸಾವಿರ ಅರ್ಜಿಗಳು ಧೂಳು ಹಿಡಿಯುತ್ತಿವೆ.
ಚರ್ಚೆ ನಡೆಸುವೆ: ಪಶುಭಾಗ್ಯ ಯೋಜನೆ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಕೃಷಿ ಜೊತೆಯಲ್ಲಿ ಹೈನುಗಾರಿಕೆ ಮಾಡಲು ಹಾಗೂ ಕುರಿ, ಮೇಕೆ ಸಾಕಣೆ ಮಾಡಿ ಹಣ ಸಂಪಾದನೆಗೆ ಉತ್ತಮ ಮಾರ್ಗವಾಗಿದೆ. ಸರ್ಕಾರ ಪ್ರತಿ ವಿಧಾನ ಸಭಾ ಕ್ಷೇತ್ರಗಳಿಗೆ ವರ್ಷಕ್ಕೆ 200 ರಿಂದ 300 ಫಲಾನುಭವಿಗಳಿಗೆ ತಲುಪುವಂತೆ ಯೋಜನೆ ರೂಪಿಸಬೇಕಿದೆ. ಪ್ರಸಕ್ತ ವರ್ಷ ಕಡಿಮೆ ಆಗಿರುವ ಬಗ್ಗೆ ಪಶುಸಂಗೋಪನಾ ಮಂತ್ರಿ ಪಭು ಎಸ್.ಚೌಹಾಣ್ ಜೊತೆ ಚರ್ಚಿಸುತ್ತೇನೆಂದು ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದ್ದಾರೆ.
ಪಶುಭಾಗ್ಯ ಯೋಜನೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದೆ. ಪ್ರಸಕ್ತ ವರ್ಷ ಬೆರಳೆಣಿಕೆಷ್ಟು ಮಂದಿಗೆ ನೀಡಬೇಕಿರುವುರಿಂದ ಬಹಳ ತೊಂದರೆ ಆಗುತ್ತಿದೆ. ಪ್ರತಿ ಹೋಬಳಿಗೆ ಕನಿಷ್ಠ 50 ನಿಗದಿ ಮಾಡಬೇಕಿದೆ.-ಎಂ.ಎ.ಗೋಪಾಲಸ್ವಾಮಿ, ವಿಧಾನ ಪರಿಷತ್ ಸದಸ್ಯರು ಹಾಸನ ಕ್ಷೇತ್ರ * ಶಾಮಸುಂದರ್ ಕೆ.ಅಣ್ಣೇನಹಳ್ಳಿ