ಹಾವೇರಿ: ಮೇ ತಿಂಗಳಲ್ಲಿ ರಾಜ್ಯದ ಎಲ್ಲ ಪಡಿತರ ಅಂಗಡಿಗಳನ್ನು ಏಕ ಕಾಲದಲ್ಲಿ ತೆರೆದು ಅಕ್ಕಿ ಮತ್ತು ತೊಗರಿ ಬೇಳೆಯನ್ನು ಒಟ್ಟಿಗೆ ನೀಡುವ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಗುರುವಾರ ನಿರ್ಧಾರ ಪ್ರಕಟಿಸಲಾಗುವುದು ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಮೇ ತಿಂಗಳಲ್ಲಿ ರೇಷನ್ ಜೊತೆಗೆ ಒಂದು ಕೆಜಿ ತೊಗರಿಬೇಳೆ ನೀಡಲಾಗುವುದು. ಮೇ ಹಾಗೂ ಜೂನ್‌ವರೆಗೆ ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ಹಾಗೂ ಪ್ರತಿ ಕಾರ್ಡ್ ಒಂದಕ್ಕೆ ಒಂದು ಕೆ.ಜಿ. ತೊಗರಿ ಬೇಳೆ ಉಚಿತವಾಗಿ ವಿತರಿಸಲಾಗುತ್ತದೆ. ಈ ಮಾಹಿತಿಯನ್ನು ಜಿಲ್ಲೆಯ ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಪ್ರಕಟಿಸಲು ಕ್ರಮ ವಹಿಸಬೇಕು ಎಂದರು.
ಕೋವಿಡ್ 19 ಸಂಕಷ್ಟ ಕಾಲದಲ್ಲಿ ಯಾರಿಗೂ ರೇಷನ್ ನಿರಾಕರಿಸಬಾರದು. ಅನರ್ಹರೆಂದು ಕಂಡುಬಂದರೂ ಕೋವಿಡ್ 19 ಮುಗಿಯುವವರೆಗೂ ಯಾವ ಕಾರ್ಡ್ ಗಳನ್ನೂ ಅನರ್ಹಗೊಳಿಸಬಾರದು. ಗ್ರಾಹಕರಿಂದ ಯಾವುದೇ ಸೇವಾ ವೆಚ್ಚವನ್ನು ನ್ಯಾಯಬೆಲೆ ಅಂಗಡಿ ಮಾಲೀಕರು ವಸೂಲಿ ಮಾಡುವ ಹಾಗಿಲ್ಲ. ಸರ್ಕಾರವೇ ಅವರಿಗೆ ಸೇವಾ ವೆಚ್ಚವನ್ನು ನೀಡುತ್ತಿದೆ. ಪಡಿತರದಾರರಿಂದ ಯಾರಾದರೂ ಒಂದು ಪೈಸೆ ಹಣ ಪಡೆದರೆ ಅಂಥವರ ಮೇಲೆ ಕಠಿಣ ಕ್ರಮಕೈಗೊಳ್ಳಿ ಎಂದರು. ಪಡಿತರ ಕಾರ್ಡ್‌ಗಾಗಿ ಅರ್ಜಿ ಹಾಕಿದ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ ರೇಷನ್ ನೀಡಬೇಕು. ಅರ್ಜಿ ಹಾಕಿದವರ ಪಟ್ಟಿಯನ್ನು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಕಟಿಸಬೇಕು. ಪ್ರತಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ನೀಡಬೇಕು ಹಾಗೂ ಎಪಿಎಲ್ ಕುಟುಂಬ ರೇಷನ್ ಬೇಡಿಕೆ ಸಲ್ಲಿಸಿದರೆ ಒಂದು ಕೆ.ಜಿ. ಅಕ್ಕಿಗೆ 15 ರೂ.ನಂತೆ ಪಡೆಯಲು ಅವಕಾಶವಿದೆ. ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಇಲ್ಲದೆ ಇರುವುದರಿಂದ ಪಡಿತರ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದವರ ಅರ್ಹತೆ ಪರಿಶೀಲನೆ ಮಾಡಿ ತ್ವರಿತವಾಗಿ ಅರ್ಹರಿಗೆ ಕಾರ್ಡ್ ವಿತರಿಸಿ ಎಂದರು.
ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಶಾಸಕರಾದ ಸಿ.ಎಂ. ಉದಾಸಿ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣ ಕುಮಾರ ಗುತ್ತೂರ, ಡಿಸಿ ಕೃಷ್ಣ ಭಾಜಪೇಯಿ, ಎಸ್ಪಿ ಕೆ.ಜಿ. ದೇವರಾಜು, ಜಿಪಂ ಸಿಇಒ ರಮೇಶ ದೇಸಾಯಿ ಇನ್ನಿತರರು ಇದ್ದರು.