Advertisement

ಕುಟುಂಬ ವೈದ್ಯ ಪರಿಕಲ್ಪನೆಗೆ ಹೊಸ ಸ್ಪರ್ಶ ನೀಡಲು ಚಿಂತನೆ

11:04 PM Feb 05, 2020 | Lakshmi GovindaRaj |

ಬೆಂಗಳೂರು: ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಫ್ಯಾಮಿಲಿ ಮೆಡಿಸಿನ್‌ ಸ್ನಾತಕೋತ್ತರ ಕೋರ್ಸ್‌ ಆರಂಭಿಸುವ ಮೂಲಕ ಕುಟುಂಬ ವೈದ್ಯ ಪರಿಕಲ್ಪನೆಗೆ ಹೊಸ ರೂಪ ನೀಡಲು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸಜ್ಜಾಗಿದೆ. ವಿದೇಶಗಳಲ್ಲಿ ಕುಟುಂಬ ವೈದ್ಯ(ಫ್ಯಾಮಿಲಿ ಡಾಕ್ಟರ್‌) ಪರಿಕಲ್ಪನೆ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ.

Advertisement

ಭಾರತವೂ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಇಂದಿಗೂ ಕುಟುಂಬ ವೈದ್ಯ ಇದೆ. ಜ್ವರ, ಶೀತ, ಕೆಮ್ಮು ಸಹಿತವಾಗಿ ಯಾವುದೇ ಗಂಭೀರ ಕಾಯಿಲೆ ಗುಣಲಕ್ಷಣ ಕಾಣಲಾರಂಭಿಸಿದರೆ ಮೊದಲು ಫ್ಯಾಮಿಲಿ ವೈದ್ಯರನ್ನು ಸಂಪರ್ಕ ಮಾಡುತ್ತಾರೆ. ಫ್ಯಾಮಿಲಿ ವೈದ್ಯರು ನೀಡುವ ಸಲಹೆಯಂತೆ ಚಿಕಿತ್ಸೆ ಅಥವಾ ಮುಂದಿನ ವೈದ್ಯಕೀಯ ಸೇವೆ ಪಡೆಯುತ್ತಾರೆ. ಆದರೆ, ಇದು ಅಷ್ಟೊಂದು ವ್ಯವಸ್ಥಿತವಾಗಿ ನಡೆಯುತ್ತಿಲ್ಲ.

ಈಗ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವೈದ್ಯಕೀಯ ವಿಜ್ಞಾನ ವಿಭಾಗದಿಂದ ಫ್ಯಾಮಿಲಿ ಮೆಡಿಸಿನ್‌ ಸ್ನಾತಕೋತ್ತರ ಕೋರ್ಸ್‌ ಆರಂಭಿಸಿ, ಕುಟುಂಬ ವೈದ್ಯರ ಸೇವೆಯನ್ನು ಅತಿ ಸುಲಭವಾಗಿ ಸಾಮಾನ್ಯ ಜನರೂ ಪಡೆಯುವಂತೆ ಮಾಡಲು ಯೋಜನೆ ರೂಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ 2020-21ನೇ ಸಾಲಿನಿಂದ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಸ್ನಾತಕೋತ್ತರ ವಿಭಾಗದಲ್ಲಿ ಫ್ಯಾಮಿಲಿ ಮೆಡಿಸಿನ್‌ ಕೋರ್ಸ್‌ ಆರಂಭಿಸುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ ಎಂದು ವಿವಿ ಉನ್ನತ ಮೂಲ ಖಚಿತಪಡಿಸಿದೆ.

ಸದ್ಯ ರಾಜೀವ್‌ಗಾಂಧಿ ಆರೋಗ್ಯ ವಿವಿ ಅಧೀನದಲ್ಲಿರುವ ಕಾಲೇಜುಗಳ ಪೈಕಿ ಕೆಲವೇ ಕೆಲವು ಕಾಲೇಜಿನಲ್ಲಿ ಫ್ಯಾಮಿಲಿ ಮೆಡಿಸಿನ್‌ ಕೋರ್ಸ್‌ ಇದೆ. ಇದನ್ನು ತಮ್ಮ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಸ್ನಾತಕೋತ್ತರ ವಿಭಾಗದಲ್ಲಿ ಆರಂಭಿಸಲು ವಿವಿಯಿಂದ ನಿರ್ದೇಶನ ನೀಡುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಕೋರ್ಸ್‌ನ ಉದ್ದೇಶವೇನು?: ಕುಟುಂಬ ವೈದ್ಯರಿಗೆ ಸಾಕಷ್ಟು ಬೇಡಿಕೆಯಿದೆ. ಆದರೆ, ಬಹುತೇಕರಿಗೆ ಇದರ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ. ಜ್ವರ, ಶೀತ, ಕೆಮ್ಮು ಸಹಿತವಾಗಿ ದಿಢೀರ್‌ ಅಸ್ವಸ್ಥರಾಗಿ ನೇರವಾಗಿ ತಜ್ಞ ವೈದ್ಯರನ್ನೇ ಸಂಪರ್ಕಿಸುತ್ತಾರೆ. ಇದನ್ನು ತಪ್ಪಿಸಿ, ಆರೋಗ್ಯಕ್ಕೆ ಸಂಬಂಧಿಸಿದ ಸಣ್ಣಪುಟ್ಟ ವಿಚಾರಗಳಿಗೆ ಫ್ಯಾಮಿಲಿ ಮೆಡಿಸಿನ್‌ ಕೋರ್ಸ್‌ ಪೂರೈಸಿದ ವೈದ್ಯರ ಮೂಲಕ ನೀಡುವ ಉದ್ದೇಶದಿಂದ ಇದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎನ್ನಲಾಗಿದೆ.

ಕುಟುಂಬ ವೈದ್ಯನಿಗೆ ಒಂದು ಕುಟುಂಬದ ಪ್ರತಿ ಸದಸ್ಯನ ಆರೋಗ್ಯಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಮತ್ತು ಆರೋಗ್ಯ ಹಿನ್ನೆಲೆ ತಿಳಿದಿರುತ್ತದೆ. ಗಂಭೀರ ಸಮಸ್ಯೆ ಅಥವಾ ಉನ್ನತ ಮಟ್ಟದ ಚಿಕಿತ್ಸೆಗೆ ಬೇಕಿರುವ ಅಗತ್ಯ ಸಲಹೆಯನ್ನು ಸುಲಭವಾಗಿ ಕುಟುಂಬಕ್ಕೆ ನೀಡಬಹುದಾಗಿದೆ. ಇಡೀ ಕುಟುಂಬದ ಆರೋಗ್ಯದ ಹಿತದೃಷ್ಟಿಯಿಂದ ಫ್ಯಾಮಿಲಿ ಮೆಡಿಸಿನ್‌ ಕೋರ್ಸ್‌ ತೆರೆಯಲು ರಾಜೀವ್‌ಗಾಂಧಿ ಆರೋಗ್ಯ ವಿವಿ ಮುಂದಾಗಿದೆ.

ಕೋರ್ಸ್‌ ವಿನ್ಯಾಸ ಹೀಗಿದೆ: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿವಿ ವ್ಯಾಪ್ತಿಯ ಕಾಲೇಜು 2020-21ನೇ ಸಾಲಿಗೆ ಫ್ಯಾಮಿಲಿ ಮೆಡಿಸಿನ್‌ ಕೋರ್ಸ್‌ಗೆ ಅರ್ಜಿ ಆಹ್ವಾನಿಸಿದರೆ, ಪ್ರತಿ ಕಾಲೇಜು ವರ್ಷಕ್ಕೆ ನಾಲ್ಕು ಅಭ್ಯರ್ಥಿಗಳನ್ನು ದಾಖಲಿಸಿಕೊಳ್ಳುವ ಅವಕಾಶ ಸಿಗಲಿದೆ.

ಎಂಬಿಬಿಎಸ್‌ ಪೂರೈಸಿದ ಅಭ್ಯರ್ಥಿಗಳು ಸ್ನಾತಕೋತ್ತರ ವಿಭಾಗದಲ್ಲಿ ಫ್ಯಾಮಿಲಿ ಮೆಡಿಸಿನ್‌ ಕೋರ್ಸ್‌ ಅನ್ನು ಸ್ಪೆಷಲೈಸೇಷನ್‌ ಆಗಿ ಪಡೆದು, 3 ವರ್ಷ ಅಧ್ಯಯನ ಮಾಡಬೇಕಾಗುತ್ತದೆ. ಸಾಮಾನ್ಯ ಸ್ನಾತಕೋತ್ತರ ಪದವಿಯಂತೆ ಪ್ರಮಾಣ ಪತ್ರವನ್ನು ವಿವಿಯಿಂದ ನೀಡಲಾಗುತ್ತದೆ. ಪ್ರಮಾಣ ಪತ್ರ ಪಡೆದವರು ಫ್ಯಾಮಿಲಿ ವೈದ್ಯರಾಗಿ ಸೇವೆ ಸಲ್ಲಿಸಲು ಅರ್ಹರಾಗುತ್ತಾರೆ ಎಂದು ವಿವಿ ಉನ್ನತಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next