Advertisement

Sadananda Gowda ಪಕ್ಷದ ವಿರುದ್ಧ ಮಾತನಾಡುವವರಿಗೆ ಬಿಜೆಪಿಯಲ್ಲಿ ಮಣೆ

12:13 AM Jul 02, 2024 | Team Udayavani |

ಬೆಂಗಳೂರು: ಪಕ್ಷದ ವಿರುದ್ಧ ಮಾತನಾಡುವವರಿಗೆ ಮಣೆ ಹಾಕಿ, ಅಶಿಸ್ತಿಗೆ ವಕಾಶ ಕೊಟ್ಟಿದ್ದರಿಂದಲೇ ಬಿಜೆಪಿ ಶಿಥಿಲಗೊಳ್ಳುತ್ತಿದೆ. ಬೇರೆ ಪಕ್ಷದಂತೆ ಬಿಜೆಪಿ ಆಗಬಾರದು. ನಾನು ಪಕ್ಷ ಶುದ್ಧೀಕರಣದ ದಾರಿಯಲ್ಲಿದ್ದೇನೆ. ಅದಕ್ಕಾಗಿ ಗುಂಪು ಕಟ್ಟುವುದಿಲ್ಲ. ಪಕ್ಷ ದ್ರೋಹವನ್ನೂ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.

Advertisement

ಸೋಮವಾರ ಬೆಂಗಳೂರಿನ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫ‌ಲಿತಾಂಶ ಸಿಕ್ಕಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾದಾಗಲೇ ಗಂಭೀರವಾಗಿ ಪರಿಗಣಿಸಬೇಕಿತ್ತು. ಕಾರ್ಯಕರ್ತರನ್ನು ಹುರಿದುಂಬಿಸುವ ಬದಲು ಮೋದಿ ಹೆಸರಿನಲ್ಲಿ ಅತಿಯಾದ ಆತ್ಮವಿಶ್ವಾಸದಿಂದ 9 ಸ್ಥಾನ ಕಳೆದುಕೊಂಡಿದ್ದೇವೆ ಎಂದರು.

ಕಾಂಗ್ರೆಸ್‌ ಪ್ರಬಲವಾಗಿ ಕಾರ್ಯಾಚರಣೆಗಿಳಿದಿದೆ ಎಂಬುದನ್ನು ಊಹಿಸಲು ನಾನೂ ಸೇರಿದಂತೆ ರಾಜ್ಯದ ಸಂಘಟನೆಯವರು ವಿಫ‌ಲರಾಗಿದ್ದೇವೆ. ಜೆಡಿಎಸ್‌ ಜತೆಗಿದ್ದ ಕಾರಣದಿಂದ ಗೆದ್ದಿದ್ದೇವೆ ಎಂದು ಜನ ಮಾತನಾಡಲಾರಂಭಿಸಿದ್ದಾರೆ. ಇದು ಬಿಜೆಪಿ ಸಂಘಟನೆಗೆ ಸವಾಲು. ಎಲ್ಲ ಕಡೆ ಮತಗಳ ಅಂತರ ಕಡಿಮೆ ಆಗಿರುವುದು ನಮಗೆ ಎಚ್ಚರಿಕೆಯ ಸಂದೇಶ ಎಂದರು.

ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪ್ರಚಾರ ಇಲ್ಲದೆ ತಳಮಟ್ಟದಲ್ಲಿ ಕೆಲಸ ಮಾಡಬೇಕು. ಯಾರನ್ನೋ ಕೂರಿಸಿದರೆ ಸಂಘಟನೆ ಆಗುವುದಿಲ್ಲ. ನಾನು ರಾಜ್ಯಾಧ್ಯಕ್ಷರ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ಅವರು ಮೊನ್ನೆ ಮೊನ್ನೆ ಬಂದಿದ್ದಾರೆ. ಅವರು ಬಂದ ಕೂಡಲೇ ಚುನಾವಣೆಯೂ ಬಂದಿದೆ. ನಾಯಕತ್ವ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಚಾರ್ಜ್‌ಶೀಟ್‌ ಎಲ್ಲಿ ಹೋಗಬೇಕೋ ಅಲ್ಲಿ ಹೋಗುತ್ತದೆ. ನಾವೆಲ್ಲಾ ಎ3 ಅಥವಾ ಎ 4 ಆಗಿರಬಹುದು. ಜು. 4ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕಾರಿಣಿಯಲ್ಲಿ ಇವೆಲ್ಲವೂ ಚರ್ಚೆ ಆಗಬೇಕು ಎಂದರು.

ನಾನು ರಾಜ್ಯಾಧ್ಯಕ್ಷನಿದ್ದಾಗ ಪಕ್ಷದ ವಿರುದ್ಧ ಮಾತನಾಡಿದ್ದ ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ಯತ್ನಾಳ್‌ ವಿರುದ್ಧ ಕೇಂದ್ರದ ಒಪ್ಪಿಗೆ ಪಡೆದು ಅಮಾನತು ಮಾಡಿದ್ದೆ. ಇದರಿಂದ ಪಕ್ಷ ಬೆಳೆಯಲು ಅನುಕೂಲ ಆಯಿತು. ಈಗ ಈ ಕೆಲಸ ಆಗುತ್ತಿಲ್ಲ. ಚೇಲಾಗಳನ್ನು ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡುವ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಅಶೋಕ್‌ ವಿರುದ್ಧವೂ ಅಸಮಾಧಾನ
ವಿಧಾನಸಭೆ ವಿಪಕ್ಷದ ನಾಯಕರಾಗಿರುವ ಆರ್‌. ಅಶೋಕ್‌ ವಿರುದ್ಧವೂ ಅಸಮಾಧಾನ ಹೊರಹಾಕಿದ ಡಿವಿಎಸ್‌, ಸಿದ್ದರಾಮಯ್ಯ ಅವರನ್ನು ಎದುರಿಸಲು ಸಾಮಾನ್ಯರಿಂದ ಸಾಧ್ಯವಿಲ್ಲ. ವಿಪಕ್ಷ ನಾಯಕ ಆದವರು ಅಧ್ಯಯನ ಮಾಡಬೇಕು. ಕೇವಲ ಜಗಳ ಮಾಡುವುದಲ್ಲ. ಓಡಾಟದಿಂದ ಪಕ್ಷದ ನಾಯಕರಾಗಿ ಬೆಳೆಯಬಹುದೇ ಹೊರತು, ವಿಪಕ್ಷ ನಾಯಕ ಆಗಲಾರರು. ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಅಧ್ಯಯನ, ಅಂಕಿ-ಅಂಶ ಹಾಗೂ ಸೂಕ್ತ ಸಮಯದಲ್ಲಿ ಪ್ರತಿರೋಧ ಒಡ್ಡುವ ನಾಯಕರ ಆವಶ್ಯಕತೆ ಇದೆ ಎಂದರು.

ನಾನು ಮತ್ತೊಬ್ಬ ಜಗದೀಶ್‌ ಶೆಟ್ಟರ್‌ ಆಗಲಾರೆ: ಡಿವಿಎಸ್‌
ಇತ್ತೀಚೆಗೆ ಕಾಂಗ್ರೆಸ್‌ ನಾಯಕರೊಬ್ಬರು ನನ್ನನ್ನು ಅವರ ಪಕ್ಷಕ್ಕೆ ಕರೆದಿದ್ದರು. ನಾಲ್ಕು ಪ್ಯಾಂಟ್‌, ಶರ್ಟ್‌ ಮಾತ್ರ ತನ್ನಿ. 28ರಲ್ಲಿ ಒಂದು ಕಡೆ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಆಹ್ವಾನ ಕೊಟ್ಟಿದ್ದರು. ನಾನು ಮತ್ತೂಬ್ಬ ಜಗದೀಶ್‌ ಶೆಟ್ಟರ್‌ ಆಗಲು ಸಿದ್ಧನಿಲ್ಲ ಎಂದು ನೇರವಾಗಿ ಹೇಳಿದ್ದೆ ಎಂದು ಸದಾನಂದ ಗೌಡ ಹೇಳಿದರು.

ಸರಕಾರ ಬೀಳುತ್ತದೆ, ರಾಜಣ್ಣ ಶಿಷ್ಯತ್ವ ಸ್ವೀಕರಿಸಲಿ’
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಶ್ರೀ ಕುಮಾರ ಚಂದ್ರ ಶೇಖರನಾಥ ಸ್ವಾಮೀಜಿ ಪರ ಬ್ಯಾಟ್‌ ಬೀಸಿದ ಡಿವಿಎಸ್‌, ಸಚಿವ ರಾಜಣ್ಣ ಅವರಿಗೆ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ಇಲ್ಲಿ ಸರಕಾರ ಬೀಳುತ್ತದೆ, ಅವರಲ್ಲಿ ಸ್ವಾಮೀಜಿ ಆಗುತ್ತಾರಾ ನೋಡಲಿ. ಕಾವಿ ಬಟ್ಟೆ ಬೇಕಾದರೆ ನಾವೇ ಕೊಡುತ್ತೇವೆ, ಶಿಷ್ಯತ್ವ ಸ್ವೀಕಾರ ಮಾಡುತ್ತಾರಾ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next