Advertisement
ನವೀನ್ ಶೆಟ್ಟಿ (19) ಮತ್ತು ಬಾಲಕುಮಾರ್ (19) ಬಂಧಿತರು. ಆರೋಪಿಗಳ ಬಂಧನದಿಂದ ನಗರದ 22 ಕಡೆ ನಡೆದಿದ್ದ ಸರಗಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, 27 ಲಕ್ಷ ರೂ. ಮೌಲ್ಯದ 900 ಗ್ರಾಂ. ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Related Articles
Advertisement
ಕ್ರಿಕೆಟ್ ಟು ಸರಗಳವು: ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಾಗಬೇಕೆಂಬ ಆಸೆ ಹೊಂದಿದ್ದ ಯುವಕರು, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಕ್ರಿಕೆಟ್ ತರಬೇತಿ ಕೇಂದ್ರ ಕೆಐಓಸಿಗೆ ಹೋಗಿ ವಿಚಾರಿಸಿದ್ದರು. ವರ್ಷಕ್ಕೆ 30 ಸಾವಿರ ರೂ. ಹಾಗೂ ಕ್ರಿಕೆಟ್ ಕಿಟ್ ಖರೀದಿಗೆ ಕೇಂದ್ರದ ಅಧಿಕಾರಿಗಳು ಸೂಚಿಸಿದ್ದಾರೆ.
ಆದರೆ, ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗದ ಯುವಕರು, ಕ್ರಿಕೆಟ್ ಮೈದಾನದಲ್ಲಿ ಪರಿಚಯವಾದ ಸಗಾಯ್ ಎಂಬಾತನ ಸಲಹೆ ಕೇಳಿದ್ದರು. ಆತ ಸುಲಭವಾಗಿ ಹಣ ಸಂಪಾದಿಸಲು ಸರಗಳ್ಳತನ ಮಾಡುವಂತೆ ಪ್ರೇರೇಪಿಸಿದ್ದ. ಅದರಂತೆ ದ್ವಿಚಕ್ರವಾಹನದಲ್ಲಿ ಹೋಗಿ ಸರ ಕಸಿಯುವುದನ್ನು ಕರಗತ ಮಾಡಿಕೊಂಡಿದ್ದರು.
ಸರಗಳ್ಳತನ ಹೇಗೆ?: ಜಯನಗರದ ಮೀನಾಕ್ಷಿ ಬಾರ್ ಮುಂಭಾಗ ನಿಲ್ಲಿಸಿದ್ದ ವಿನಯ್ ಎಂಬುವರ ಬಿಳಿ ಬಣ್ಣದ ಹೋಂಡಾ ಏವಿಯೇಟರ್ ದ್ವಿಚಕ್ರ ವಾಹನ ಕಳವು ಮಾಡಿದ್ದ ಆರೋಪಿಗಳು, ಇದೇ ವಾಹನ ಬಳಸಿ ಕಳೆದ 8 ತಿಂಗಳಿಂದ ಸರಗಳವು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಶನಿವಾರ, ಭಾನುವಾರ, ತಪ್ಪಿದಲ್ಲಿ ಮಂಗಳವಾರ, ಬುಧವಾರಗಳಂದು ಕಪ್ಪು ಹಾಗೂ ಕೆಂಪು ಬಣ್ಣದ ಹೆಲ್ಮೆಟ್ ಹಾಗೂ ಫುಲ್ ಜಾಕೆಟ್‌ಗಳನ್ನು ಧರಿಸಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು.
ವಿಶಾಲವಾದ ರಸ್ತೆಗಳು, ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರು, ಮನೆ ಮುಂದೆ ರಂಗೋಲಿ ಹಾಕುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದರು. ಇವರ ಬಂಧನದಿಂದ ಜಯನಗರ, ಜೆ.ಪಿ.ನಗರ, ಬನಶಂಕರಿ, ಸಿದ್ದಾಪುರ, ಬಸವನಗುಡಿ, ಕೋಣನಕುಂಟೆ, ಸಿ.ಕೆ.ಅಚ್ಚುಕಟ್ಟು, ಗಿರಿನಗರ, ಹನುಮಂತನಗರ, ತಿಲಕನಗರ, ಮಲ್ಲೇಶ್ವರ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ 22 ಪ್ರಕರಣಗಳು ಪತ್ತೆಯಾಗಿವೆ.
ಅಕ್ಕನ ಮದುವೆಯೂ ಇಲ್ಲ ಕ್ರಿಕೆಟ್ ಇಲ್ಲ: ಬಾಲಕುಮಾರ್ ಹಾಗೂ ನವೀನ್ ಶೆಟ್ಟಿ ಸರಗಳ್ಳತನಕ್ಕೆ ಇಳಿದಿದ್ದರ ಹಿಂದೆ ಹಲವು ಸ್ವಾರಸ್ಯಕರ ಕಾರಣಗಳಿವೆ. ಇಬ್ಬರೂ ದೊಡ್ಡ ಕ್ರಿಕೆಟಿಗರಾಗಬೇಕು ಎಂಬ ಕನಸು ಒಂದೆಡೆಯಾದರೆ, ಮನೆಯ ಅರ್ಥಿಕ ಪರಿಸ್ಥಿತಿ ಅರಿತಿದ್ದ ಬಾಲಕುಮಾರ್, ತನ್ನ ಸಹೋದರಿಗೆ ಒಳ್ಳೆ ಕಡೆ ಮದುವೆ ಮಾಡಬೇಕು. ಅದಕ್ಕಾಗಿ ಹಣ ಕೂಡಿಡಬೇಕು ಅಂದುಕೊಂಡಿದ್ದ.
ಆದರೆ, ಸರಗಳ್ಳತನ ರೂಢಿಯಾಗುತ್ತಿದ್ದಂತೆ ತಮ್ಮ ಉದ್ದೇಶಗಳನ್ನೆ ಮರೆತ ಯುವಕರು, ಕ್ರಿಕೆಟ್ ಕಿಟ್, ತರಬೇತಿ ಗೋಜಿಗೂ ಹೋಗಿರಲಿಲ್ಲ. ಇತ್ತ ಸಹೋದರಿಯ ಮದುವೆಗೆ ಹಣವನ್ನೂ ಕೂಡಿಡದೆ ಕದ್ದ ಸರಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಜೀವನ ನಿರ್ವಹಣೆಗಾಗಿ ತಂದೆಗೆ ಹೊಸ ಆಟೋ, ಮನೆಗಳಿಗೆ ವಾಷಿಂಗ್ ಮೆಷಿನ್, ಫ್ರೀಜ್ ಹಾಗೂ ಇತರೆ ವಸ್ತುಗಳನ್ನು ಖರೀದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಾಕಾಬಂದಿ ಹಾಕಿ ಬಂಧನ: ಆರೋಪಿಗಳ ಕೃತ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ಎಲ್ಲ ಠಾಣೆಗಳ ಸಿಬ್ಬಂದಿಗೆ ರವಾನಿಸಲಾಗಿತ್ತು. ಈ ಮಧ್ಯೆ ಕೆಲ ದಿನಗಳ ಹಿಂದೆ ಆರೋಪಿಗಳು ಜಯನಗರ ಬೃಂದಾವನ ಪಾರ್ಕ್ ಬಳಿ ಸರ ಕದ್ದು ಓಡುತ್ತಿದ್ದರು. ಇದೇ ವೇಳೆ ಪೇದೆ ಶ್ರೀನಿವಾಸ್ ಗಸ್ತಿನಲ್ಲಿದ್ದರು.
ಪೊಲೀಸರನ್ನು ಕಂಡ ಇಬ್ಬರು ಯುಟರ್ನ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಆರೋಪಿಗಳ ವರ್ತನೆಯಿಂದ ಅನುಮಾನಗೊಂಡ ಪೇದೆ ಶ್ರೀನಿವಾಸ್ ಕೂಡಲೇ ಸಿಬ್ಬಂದಿಗಳಾದ ಕೆಂಪರಾಜ್, ಚಂದ್ರಶೇಖರ್, ಪ್ರವೀಣ್, ಸೈಯದ್‌ಗೆ ಮಾಹಿತಿ ನೀಡಿದ್ದಾರೆ.
ಎಲ್ಲ ಸಿಬ್ಬಂದಿ ಆರೋಪಿಗಳನ್ನು ಬೆನ್ನತ್ತಿ ಎನ್‌ಎಂಕೆಆರ್‌ವಿ ಕಾಲೇಜು ಬಳಿ ನಾಕಾಬಂದಿ ಹಾಕಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ತವ್ಯಪ್ರಜ್ಞೆ ಮೆರೆದ ಪೇದೆಗಳಿಗೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಸಲಹೆ ನೀಡಿದ ಸಗಾಯ್ ಸೆರೆ: ಆರೋಪಿಗಳಿಗೆ ತರಬೇತಿ ನೀಡುತ್ತಿದ್ದ ಸಗಾಯ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಸರಗಳವು ಮಾತ್ರವಲ್ಲದೆ, ದರೋಡೆ, ಗಲಾಟೆಗಳಂತಹ ಕೃತ್ಯಗಳಲ್ಲಿ ತೊಡಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಸರ ಕಳವಿಗೂ ತರಬೇತಿ: ಕೊಲೆಗಳಂತಹ ದೊಡ್ಡ ಕೃತ್ಯಗಳಿಗೆ ತರಬೇತಿ ಪಡೆಯುವುದು ಸಾಮಾನ್ಯ. ಆದರೆ, ನವೀನ್ ಮತ್ತು ಬಾಲಕುಮಾರ್ ಸರಗಳವು ಮಾಡಲು ತರಬೇತಿ ಪಡೆದಿದ್ದರು ಎಂಬ ವಿಚಾರ ತನಿಖೆಯಿಂದ ತಿಳಿದು ಬಂದಿದೆ.
ಸ್ನೇಹಿತ ಸಗಾಯ್ ಇಬ್ಬರಿಗೂ ಲಿಂಗರಾಜಪುರಂ ಚಾರ್ಲ್ಸ್ ಮೈದಾನದಲ್ಲಿ ವಾಹನ ಓಡಿಸುತ್ತಾ ಸರ ಕಸಿಯುವುದು ಹೇಗೆ ಎಂದು ತರಬೇತಿ ನೀಡುತ್ತಿದ್ದ. ಹಾಗೇ ಮಾತನಾಡುತ್ತಾ ಹೋಗುವವರ ಮೊಬೈಲ್ ಹಾಗೂ ಪರ್ಸ್ ಕಳವು ಮಾಡುವ ಬಗ್ಗೆಯೂ ತರಬೇತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.