ಬೆಂಗಳೂರು: “ದೇಶದ್ರೋಹಿ ಚಟುವಟಿಕೆಗಳನ್ನು ಕಂಡೂ ಕಾಣದಂತೆ ಸುಮ್ಮನೆ ಕುಳಿತುಕೊಳ್ಳುವವರು ಮತ್ತು ಅದರ ವಿರುದ್ಧ ಮಾತನಾಡದವರು ಸಹ ಪರೋಕ್ಷವಾಗಿ ದೇಶದ್ರೋಹಿಗಳೇ,’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಉಗ್ರರ ದಾಳಿಗಳಿಂದ ಇಂದು ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಕೆಲವರು ಆ ಘಟನೆಗೂ ತಮಗೂ ಸಂಬಂಧವೇ ಇಲ್ಲವೆಂಬ ರೀತಿ ವರ್ತಿಸುತ್ತಾರೆ. ಕಂಡೂ ಕಾಣದಂತಿರುತ್ತಾರೆ.
ಉಗ್ರರ ಹೀನ ಕೃತ್ಯವನ್ನು ಖಂಡಿಸಿ ಹೋರಾಟ ನಡೆಸುವುದಿರಲಿ, ಆ ಘಟನೆ ಬಗ್ಗೆ ಮಾತು ಕೂಡ ಆಡುವುದಿಲ್ಲ. ಇಂತಹ ಮನಸ್ಥಿತಿ ಉಳ್ಳವರೂ ಒಂದು ರೀತಿ ದೇಶದ್ರೋಹಿಗಳೇ ಆಗಿರುತ್ತಾರೆ ಎಂದರು. ಭಾರತದ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಿವಾಜಿಯ ದೇಶ ಪ್ರೇಮ ನಮಗೆ ಆದರ್ಶವಾಗಬೇಕು. ಈ ನಿಟ್ಟಿನಲ್ಲಿ “ದೇಶ ಮೊದಲು”ಎಂಬ ಮನೋಧರ್ಮ ಅನುಷ್ಠಾನವಾಗಬೇಕು ಎಂದು ಹೇಳಿದರು.
ಈ ವೇಳೆ 96 ಕುಳಿಗಳ ಪುಸ್ತಕ ಬಿಡುಗಡೆ, ವಿದ್ಯಾರ್ಥಿ ವೇತನ, ವಿಧವಾ ವೇತನ, ವಿಕಲಚೇತನರಿಗೆ ಮಾಸಾಶನ, ವೃದ್ಧಾಪ್ಯ ವೇತನ ವಿತರಿಸಲಾಯಿತು. ಗವಿಪುರಂ ಭವಾನಿ ಪೀಠ ಗೋಸಾಯಿ ಮಠದ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ರೋಷನ್ ಬೇಗ್, ಪರಿಷತ್‌ನ ಕೌನ್ಸಿಲ್ ಅಧ್ಯಕ್ಷ ವಿ.ಎ.ರಾಣೋಜಿ ರಾವ್ ಸಾಠೆ, ರಾಜ್ಯಾಧ್ಯಕ್ಷ ಎಸ್.ಸುರೇಶ್ ರಾವ್ ಸಾಠೆ ಉಪಸ್ಥಿತರಿದ್ದರು.
ಮೀಸಲಾತಿಗಾಗಿ ಬೇಡುವುದು ಬೇಡ: ಸಿಂಧ್ಯಾ “ಕ್ಷತ್ರಿಯ, ಮರಾಠ ಸಮುದಾಯವು ಪ್ರಸ್ತುತ ಹಿಂದುಳಿದ ವರ್ಗದ ಪ್ರವರ್ಗ-3ಬಿ ಅಡಿಯಲ್ಲಿದ್ದು, ಅದನ್ನು ಪ್ರವರ್ಗ-2ಎ ಗೆ ಸೇರಿಸಬೇಕು ಎಂಬ ಹತ್ತಾರು ವರ್ಷಗಳ ಬೇಡಿಕೆಗೆ ಯಾವ ಸರ್ಕಾರವೂ ಸ್ಪಂದಿಸುತ್ತಿಲ್ಲ. ಹೀಗಾಗಿ, ಮೀಸಲಾತಿಗಾಗಿ ಯಾರನ್ನೂ ಬೇಡುವುದು ಬೇಡ. ನಾವೇ ಬೀದಿಗಿಳಿದು ಹೋರಾಟ ಮಾಡೋಣ. ನಮ್ಮ ಸಮುದಾಯದ ನಾಯಕರನ್ನು ರಾಜಕೀಯವಾಗಿ ಬೆಂಬಲಿಸಿ ನಮ್ಮ ಹಕ್ಕನ್ನು ನಾವು ಪಡೆಯೋಣ,’ ಎಂದು ಪಿ.ಜಿ.ಆರ್.ಸಿಂಧ್ಯಾ ಹೇಳಿದರು.