ಬೆಂಗಳೂರು: “ನಮ್ಮ ಮೆಟ್ರೋ’ ಮೊದಲ ಹಂತದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ದೂರದೃಷ್ಟಿ ಕೊರತೆಯಿಂದಾದ ಯಡವಟ್ಟಿಗೆ ಈಗ ಪ್ರಯಾಣಿಕರು ಬೆಲೆ ತೆರುವಂತಾಗಿದೆ. ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ ಎಲ್ಲ ಮೆಟ್ರೋ ರೈಲುಗಳು ಆರು ಬೋಗಿಗಳಾಗಿವೆ. ಉದ್ದೇಶಿತ ಮಾರ್ಗದಲ್ಲಿ ರೈಲುಗಳ ಸಂಖ್ಯೆಯೂ ಅಧಿಕವಾಗಿದ್ದು, ಫ್ರಿಕ್ವೆನ್ಸಿ ಕೂಡ ಹೆಚ್ಚಿದೆ. ಆದರೆ, ಹಸಿರು ಮಾರ್ಗದ ಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ಇಲ್ಲಿ ಬೋಗಿಗಳ ಸಂಖ್ಯೆ ಕಡಿಮೆ ಇದ್ದು, ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ನೇರಳೆ ಮಾರ್ಗಕ್ಕೆ ಹೋಲಿಸಿದರೆ ಅರ್ಧಕ್ಕರ್ಧ ಕಡಿಮೆ.
ಈ ಅಸಮತೋಲನವು ಜನರ ಪರದಾಟಕ್ಕೆ ಕಾರಣವಾಗುತ್ತಿದೆ. ಬೈಯಪ್ಪನಹಳ್ಳಿ-ಮೈಸೂರು ರಸ್ತೆ (ನೇರಳೆ) ನಡುವಿನ 18 ಕಿ.ಮೀ. ಮಾರ್ಗದಲ್ಲಿ 28 ರೈಲುಗಳು ಸಂಚರಿಸುತ್ತಿದ್ದು, ಸೆಪ್ಟೆಂಬರ್‌ನಿಂದಲೇ ಅವೆಲ್ಲವೂ ಮೂರರಿಂದ ಆರು ಬೋಗಿಗಳಾಗಿ ಪರಿವರ್ತನೆಗೊಂಡಿವೆ. ಆದರೆ, ನಾಗಸಂದ್ರ-ಯಲಚೇನಹಳ್ಳಿ (ಹಸಿರು)ಯ 24 ಕಿ.ಮೀ. ಉದ್ದದ ಮಾರ್ಗದಲ್ಲಿ 22 ರೈಲು ಕಾರ್ಯಾಚರಣೆ ಮಾಡುತ್ತಿದ್ದು, ಈ ಪೈಕಿ ಇದುವರೆಗೆ ಆರು ರೈಲುಗಳು ಮಾತ್ರ ಆರು ಬೋಗಿಗಳಾಗಿ ಮಾರ್ಪಟ್ಟಿವೆ. 24 ಬೋಗಿಗಳು ಹೆಚ್ಚುವರಿಯಾಗಿ ಘಟಕಗಳಲ್ಲಿ ನಿಂತಿವೆ. ಅವುಗಳನ್ನು ಜೋಡಣೆ ಮಾಡಲು ತಾಂತ್ರಿಕವಾಗಿ ಸದ್ಯಕ್ಕೆ ಸಾಧ್ಯವಿಲ್ಲ.
ಯಾಕೆಂದರೆ, ಏಕಕಾಲದಲ್ಲಿ ಆರು ಬೋಗಿಗಳಿರುವ 20-22 ರೈಲುಗಳನ್ನು ಎಳೆದೊಯ್ಯುವ ಸಾಮರ್ಥ್ಯ ಹಸಿರು ಮಾರ್ಗದಲ್ಲಿ ಇಲ್ಲ. ಬಿಎಂಆರ್‌ಸಿಎಲ್, ಆ ಮಾರ್ಗದ ವಿನ್ಯಾಸವನ್ನು ಕೇವಲ ಮೂರು ಬೋಗಿಗಳನ್ನು ಎಳೆದೊಯ್ಯಲು ಸೀಮಿತಗೊಳಿಸಿದೆ. ಈ ದೂರದೃಷ್ಟಿ ಕೊರತೆ ಪರಿಣಾಮ ನೇರಳೆ ಮಾರ್ಗದಲ್ಲಿ ಆರು ಬೋಗಿಗಳಲ್ಲಿ ಮೆಜೆಸ್ಟಿಕ್‌ನ ಕೆಂಪೇಗೌಡ ಇಂಟರ್‌ಚೇಂಜ್‌ನಲ್ಲಿ ಬಂದಿಳಿದವರು ಹಸಿರು ಮಾರ್ಗದಲ್ಲಿನ ಮೂರು ಬೋಗಿಗಳ ರೈಲುಗಳಲ್ಲಿ ತೂರುವಂತಾಗಿದೆ. ಕಣ್ಣೆದುರೇ ರೈಲು ಹಾದುಹೋಗುತ್ತಿದ್ದರೂ ಪ್ರಯಾಣಿಕರು ಪಾಳಿಯಲ್ಲಿ ನಿಂತು ನೋಡುವಂತಾಗಿದ್ದು, “ಪೀಕ್ ಅವರ್’ನಲ್ಲಂತೂ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಸಮಸ್ಯೆ ಏನು?: ಮೂರು ಮತ್ತು ಆರು ಬೋಗಿಗಳ ಮೆಟ್ರೋ ರೈಲುಗಳ ವಿದ್ಯುತ್ ಪೂರೈಕೆ ಒಂದೇ ಪ್ರಮಾಣದಲ್ಲಿದ್ದರೂ, ಆ ರೈಲುಗಳು ಬಳಸುವ ವಿದ್ಯುತ್ ಪ್ರಮಾಣ ಭಿನ್ನವಾಗಿರುತ್ತದೆ. ಉದಾಹರಣೆಗೆ ಮನೆಯಲ್ಲಿ 250 ವೋಲ್ಟ್ ಎಸಿ ವಿದ್ಯುತ್ ಪೂರೈಕೆ ಆಗುತ್ತಿದೆ ಎಂದುಕೊಳ್ಳೋಣ. ಆ ಮನೆಯಲ್ಲಿ ಪೀಕ್ ಅವರ್‌ನಲ್ಲಿ ಏಕಕಾದಲ್ಲಿ ಮಿಕ್ಸರ್ ಗ್ಲೈಂಡರ್, ರೆಫ್ರಿಜರೇಟರ್, ವಾಷಿಂಗ್ ಮಷಿನ್, ಟಿವಿ ಬಳಕೆಯಲ್ಲಿದ್ದಾಗ, ಲೋಡ್ ಹೆಚ್ಚಾಗಿ ಟ್ರಿಪ್ ಆಗುತ್ತದೆ. ಇದೇ ಸಮಸ್ಯೆ ಮೆಟ್ರೋ ಹಸಿರು ಮಾರ್ಗದಲ್ಲೂ ಇದೆ.
ಅಂದರೆ, ಮೂರು ಬೋಗಿಗಳನ್ನು ಎಳೆಯಲು ಬಳಕೆಯಾಗುವುದಕ್ಕಿಂತ ದುಪ್ಪಟ್ಟು ವಿದ್ಯುತ್ ಬಳಕೆ ನಾಲ್ಕು ಮೋಟಾರು ಕಾರುಗಳನ್ನು ಒಳಗೊಂಡ ಆರು ಬೋಗಿಗಳ ರೈಲು ಎಳೆಯಲು ಆಗುತ್ತದೆ. ಆದರೆ, ಹಸಿರು ಮಾರ್ಗದಲ್ಲಿ ವಿದ್ಯುತ್ ಸರಬರಾಜು ಮಾಡುವ ಟ್ರ್ಯಾಕ್ಷನ್ ಸಬ್ ಸ್ಟೇಶನ್ (ಟಿಎಸ್‌ಎಸ್)ಗಳು ಆ ಸಾಮರ್ಥ್ಯ ಹೊಂದಿಲ್ಲ. ಆಗ ಲೋಡ್ ಹೆಚ್ಚಾಗಿ ಟ್ರಿಪ್ (ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು) ಆಗುತ್ತದೆ. ಪರಿಣಾಮ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ವಿವರಿಸಿದರು.
24 ಕಿ.ಮೀ. ಉದ್ದದ ಮಾರ್ಗದಲ್ಲಿ 12 ಟಿಎಸ್‌ಎಸ್‌ಗಳು ಬರುತ್ತವೆ. ಕೆಪಿಟಿಸಿಎಲ್‌ನಿಂದ ಅವುಗಳಿಗೆ ಪೂರೈಕೆಯಾಗುವ ವಿದ್ಯುತ್ ಅನ್ನು ಎಸಿಯಿಂದ ಡಿಸಿಗೆ ಪರಿವರ್ತಿಸಿ ಮೆಟ್ರೋ ಥರ್ಡ್‌ರೈಲ್‌ಗೆ ಸರಬರಾಜು ಮಾಡಲಾಗುತ್ತದೆ. ಈಗ ಖಾಸಗಿ ಕಂಪೆನಿಯೊಂದರಿಂದ ಟಿಎಸ್‌ಎಸ್‌ಗಳ ಸಾಮರ್ಥ್ಯ ಹೆಚ್ಚಿಸುವ ಕಾರ್ಯ ನಡೆಯುತ್ತಿದೆ. ವರ್ಷಾಂತ್ಯದ ಗಡುವು ನೀಡಲಾಗಿದೆ. ಆದರೆ, ಅಷ್ಟರಲ್ಲಿ ಪೂರ್ಣಗೊಳ್ಳುವುದು ಅನುಮಾನ ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಹಸಿರು ಮಾರ್ಗದ ವಿದ್ಯುತ್ ಪೂರೈಕೆ ಮತ್ತು ಬಳಕೆ ಸಾಮರ್ಥ್ಯ ಹೆಚ್ಚಿಸುವ ಕಾರ್ಯ ಪೂರ್ಣಗೊಂಡಿದೆ. ಈಗೇನಿದ್ದರೂ ರೈಲುಗಳನ್ನು ಮೂರು ಬೋಗಿಯಿಂದ ಆರು ಬೋಗಿಗೆ ಪರಿವರ್ತಿಸುವ ಕೆಲಸ ಬಾಕಿ ಇದೆ. ಡಿಸೆಂಬರ್ ಒಳಗೆ ಬಿಇಎಂಎಲ್‌ನಿಂದ ಎಲ್ಲ ಬೋಗಿಗಳ ಬಾಕಿ ಇರುವ ಬೋಗಿಗಳ ಪೂರೈಕೆ ಆಗಲಿದೆ. 2020ರ ಮಾರ್ಚ್ ಅಂತ್ಯಕ್ಕೆ ಮೊದಲ ಹಂತದ ಎಲ್ಲ 50 ರೈಲುಗಳು ಆರು ಬೋಗಿಗಳಾಗಲಿವೆ.
-ಯಶವಂತ ಚವಾಣ್, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ
* ವಿಜಯಕುಮಾರ ಚಂದರಗಿ