Advertisement

ತೊಡಿಕಾನ, ಅರಂತೋಡು: ಜನರ ನಡುಗಿಸುತ್ತಿದೆ ಜ್ವರಬಾಧೆ 

03:21 PM May 23, 2018 | Team Udayavani |

ತೊಡಿಕಾನ: ತೊಡಿಕಾನ, ಅರಂತೋಡು ಗ್ರಾಮಗಳಲ್ಲಿ ಶಂಕಿತ ಡೆಂಗ್ಯೂ ಜ್ವರದ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಮಳೆಗಾಲ ಕಾಲಿಡುತ್ತಿದ್ದಂತೆ ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಇದುವರೆಗೂ ಪತ್ತೆಯಾಗದಿದ್ದರೂ ಡೆಂಗ್ಯೂ ರೋಗದ ಗುಣಲಕ್ಷಣವಿರುವ ಜ್ವರ ಹಲವೆಡೆ ಇದೆ. ಸುಳ್ಯ ತಾಲೂಕಿನಲ್ಲಿ ಆರೋಗ್ಯ ಇಲಾಖೆ ನಿಗಾ ಇರಿಸಿದೆ. ಆದರೂ ಡೆಂಗ್ಯೂ ತನ್ನ ಪ್ರಾಬಲ್ಯ ಸಾಧಿಸುತ್ತಿದೆಯೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

Advertisement

ಒಂದು ತಿಂಗಳಿನಲ್ಲಿ ಅರಂತೋಡು ತೊಡಿಕಾನ ಭಾಗದಲ್ಲಿ ಡೆಂಗ್ಯೂ ಜ್ವರದ ಲಕ್ಷಣವಿರುವ ಪ್ರಕರಣ ಪತ್ತೆಯಾಗಿದೆ. ತಾಲೂಕಿನಲ್ಲಿ 25ರಷ್ಟು ಶಂಕಿತ ಡೆಂಗ್ಯೂ ಪ್ರಕರಣಗಳಿರಬಹುದು ಎಂದು ಆರೋಗ್ಯ ಇಲಾಖೆ ಹೇಳುತ್ತಿದ್ದು, ಅಧಿಕೃತ ಮಾಹಿತಿ ಈ ತನಕ ಬಂದಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಹೇಳಿದ್ದಾರೆ. ಆರೋಗ್ಯ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮ, ಜಾಗೃತಿಯ ಅರಿವನ್ನೂ ಕೈಗೊಳ್ಳುತ್ತಿದೆ. ಆದರೂ ಎರಡು ವರ್ಷಗಳ ಹಿಂದೆ ಡೆಂಗ್ಯೂ ವ್ಯಾಪಕವಾಗಿ ಹರಡಿದ್ದ ಅರಂತೋಡು, ತೊಡಿಕಾನ ಗ್ರಾಮಗಳಲ್ಲಿ ಈ ಬಾರಿಯೂ ಶಂಕಿತ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.

ಮಳೆಗಾಲದ ಕಾಯಿಲೆಗಳು
ಮಳೆಗಾಲ ಕಾಲಿಡುವ ಹೊತ್ತಿಗೆ ಪ್ರತಿ ಬಾರಿಯೂ ಸುಳ್ಯ ತಾಲೂಕಿನಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿವೆ. ಈ ಬಾರಿಯೂ 15 ದಿನಗಳಿಂದ ಶಂಕಿತ ಡೆಂಗ್ಯೂ ಜ್ವರದ ಪ್ರಕರಣಗಳು ಅಲ್ಲಲ್ಲಿ ವರದಿಯಾಗಿವೆ. ಆಸ್ಪತ್ರೆಗಳಿಗೆ ಭೇಟಿ ನೀಡುವ ಹಾಗೂ ದಾಖಲಾಗುವ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ತೊಡಿಕಾನ, ಅಡ್ಕಬಳೆ, ಅಡ್ಯಡ್ಕ, ಪೆರಾಜೆ ಭಾಗಗಳ 10ಕ್ಕೂ ಅಧಿಕ ಮಂದಿ ಶಂಕಿತ ಡೆಂಗ್ಯೂ ಜ್ವರದಿಂದ ಬಾಧಿತರಾಗಿದ್ದಾರೆ. ಇದು ಈ ಬಾರಿಯೂ ಎಲ್ಲಿ ತೀವ್ರತೆ ಪಡೆದುಕೊಂಡು ಕಾಡುತ್ತದೆಯೋ ಎಂಬ ಅನುಮಾನ ಗ್ರಾಮಸ್ಥರಲ್ಲಿದೆ.

ಇದುವರೆಗೆ ಖಾಸಗಿ ಕೇಂದ್ರಗಳ ಲ್ಯಾಬ್‌ನಲ್ಲಿ ಎನ್‌ಎಸ್‌1-ಐಎಎ ರಕ್ತಪರೀಕ್ಷೆ ಮಾಡಿಸಿಕೊಂಡು ರೋಗದ ಗುಣಲಕ್ಷಣಗಳಿಗೆ ಅನುಸಾರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂತಹವುಗಳನ್ನು ಇಲಾಖೆ ಶಂಕಿತ ಪ್ರಕರಣಗಳೆಂದು ಪರಿಗಣಿಸುತ್ತಿದೆ. ಆದರೆ ಅಧಿಕೃತವೆನಿಸಲು ಜಿಲ್ಲಾ ಆರೋಗ್ಯ ಇಲಾಖೆಯ ಲ್ಯಾಬ್‌ನಲ್ಲಿ ಎಲಿಸ ಪರೀಕ್ಷೆ ನಡೆಸಬೇಕಾಗಿದ್ದು, ಅಲ್ಲಿ ‘ಪಾಸಿಟಿವ್‌’ ಎಂದು ಕಂಡುಬಂದರೆ ಮಾತ್ರ ಇಲಾಖೆ ಅಧಿಕೃತ ಡೆಂಗ್ಯೂ ಪ್ರಕರಣವೆಂಬುದಾಗಿ ಪರಿಗಣಿಸುತ್ತದೆ.

ರೋಗದ ಲಕ್ಷಣ
ಜ್ವರ, ಗಂಟು ನೋವು, ವಿಪರೀತ ಸುಸ್ತು ಕಾಣಿಸಿಕೊಳ್ಳುವುದು ಡೆಂಗ್ಯೂ ಲಕ್ಷಣ. ಇವು ಕಂಡುಬಂದ ಕೂಡಲೇ ವೈದ್ಯರ ಸಲಹೆ ಪಡೆದು ಔಷಧ ತೆಗೆದುಕೊಳ್ಳುವುದು. ಇದಕ್ಕೆ ಪತ್ಯೇಕ ಔಷಧ ಇಲ್ಲ. ಜ್ವರ, ನೋವಿಗೆ ಔಷಧ ನೀಡುತ್ತಾರೆ, ವಿಶ್ರಾಂತಿಗೆ ಸಲಹೆ ಕೊಡುತ್ತಾರೆ.

Advertisement

ಮಂಜಾಗ್ರತಾ ಕ್ರಮ
ಮಳೆ ಬಿಟ್ಟು ಬಿಟ್ಟು ಬರುವುದರಿಂದ ಅಲ್ಲಲ್ಲಿ ನೀರು ಶೇಖರಗೊಂಡು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹೆಚ್ಚಾಗಿ ಅಡಿಕೆ ತೋಟಗಳಲ್ಲಿ ಹಾಳೆಯಲ್ಲಿ, ಬೊಂಡದ ಸಿಪ್ಪೆ, ಗೆರೆಟೆ, ಕೊಕ್ಕೊ ಒಡೆದ ಸಿಪ್ಪೆಯಲ್ಲಿ, ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈಡಿಸ್‌ ಇಜಿಪ್ಯೆ ಸೊಳ್ಳೆಗಳು ಮನುಷ್ಯರಿಗೆ ಕಟ್ಟಿದರೆ ರೋಗ ಹರಡುತ್ತದೆ. ಈ ಕಾರಣದಿಂದ ಎಲ್ಲಿಯೂ ನೀರು ನಿಲ್ಲಲು ಅವಕಾಶ ಕೊಡದೆ, ಸೊಳ್ಳೆ ಬೆಳೆಯದಂತೆ ನೋಡಿಕೊಳ್ಳಬೇಕು. ಸಂಜೆ ಹೊತ್ತಲ್ಲಿ ಮನೆಯ ಕಿಟಕಿ – ಬಾಗಿಲುಗಳನ್ನು ಮುಚ್ಚಿ ಮಲಗುವ ವೇಳೆ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಆರೋಗ್ಯ ಇಲಾಖೆಯಿಂದ ಆರೋಗ್ಯ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ತೆರಳಿ ಡೆಂಗ್ಯೂವಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

15 ಶಂಕಿತ ಡೆಂಗ್ಯೂ ಪತ್ತೆ
ಸುಳ್ಯ ತಾಲೂಕಿನಲ್ಲಿ 15 ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ. ಇವೆಲ್ಲವೂ ಕಡಬ- ಕೋಡಿಂಬಾಳ ಪ್ರದೇಶಕ್ಕೆ ಸೇರಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಪುತ್ತೂರು ತಾಲೂಕಿನ ವಿವಿಧೆಡೆಗಳಲ್ಲಿ ಜ್ವರದ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಇವೆಲ್ಲವೂ ಡೆಂಗ್ಯೂ ಅಲ್ಲ. ಕಡಬ- ಕೋಡಿಂಬಾಳವನ್ನು ಹೊರತು ಪಡಿಸಿ, ಉಳಿದ ಪ್ರದೇಶಗಳಲ್ಲಿ ಡೆಂಗ್ಯೂ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಾ| ಅಶೋಕ್‌ ಕುಮಾರ್‌ ರೈ ತಿಳಿಸಿದ್ದಾರೆ. ಡೆಂಗ್ಯೂ ಜ್ವರ ತಡೆಗಟ್ಟುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರ ಜತೆ ಸಭೆ ನಡೆಸಲಾಗಿದೆ. ಅಗತ್ಯ ಇರುವ ಪ್ರದೇಶಗಳಲ್ಲಿ ಫಾಗಿಂಗ್‌ ಮಾಡಲಾಗಿದೆ. ಗ್ರಾಮೀಣ ಸೇರಿದಂತೆ ಪ್ರತಿ ಪ್ರದೇಶಗಳಲ್ಲೂ ಕರಪತ್ರ ಹಂಚಲಾಗಿದೆ. ಹೂವಿನ ಗಿಡ, ಕುಂಡ, ಬೊಂಡದ ಸಿಪ್ಪೆ ಮೊದಲಾದ ಸ್ಥಳಗಳಲ್ಲಿ ನಿಂತ ನೀರನ್ನು ತೆಗೆಯುವ ಹಿನ್ನೆಲೆಯಲ್ಲಿ ಲಾರ್ವಾ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಸಾಂಕ್ರಾಮಿಕ ಜ್ವರ 
ಸುಳ್ಯ: ತಾಲೂಕಿನಲ್ಲಿ ಎರಡು ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ಉಳಿದಂತೆ ಶಂಕಿತ ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿ ರಕ್ತ ಪರೀಕ್ಷೆ ವರದಿಗಳು ಇನ್ನಷ್ಟೇ ದೊರೆಯಬೇಕಿದೆ. ಗ್ರಾಮಾಂತರ ಪ್ರದೇಶದಲ್ಲಿ ಶೀತ, ಜ್ವರ, ತಲೆನೋವಿಗೆ ಸಂಬಂಧಿಸಿ ಪ್ರಾಥಮಿಕ ಮತ್ತು ಸಮುದಾಯ ಆಸ್ಪತ್ರೆಗಳಿಗೆ ಹೊರ ಮತ್ತು ಒಳ ರೋಗಗಳಾಗಿ ಭೇಟಿ ನೀಡುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಶಂಕಿತ ಡೆಂಗ್ಯೂ ಜ್ವರಬಾಧೆಗೆ ಒಳಗಾದವರು ಪುತ್ತೂರು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಳೆಗಾಲದಲ್ಲಿ ಅತಿ ಹೆಚ್ಚು
ಕಳೆದ ಮಳೆಗಾಲದಲ್ಲಿ ಚಿಕನ್‌ ಗುನ್ಯಾ, ಡೆಂಗ್ಯೂ ಮೊದಲಾದ ಸಾಂಕ್ರಾಮಿಕ ರೋಗಗಳು ಸುಳ್ಯದಲ್ಲಿ ಹೆಚ್ಚು ದಾಖಲಾಗಿದ್ದವು. ಕಾಡು, ಕೃಷಿ ತೋಟ ಆವರಿತ ಪ್ರದೇಶದ ಕಾರಣದಿಂದ ರೋಗ ಸುಲಭವಾಗಿ ಹಬ್ಬುತ್ತಿತ್ತು. ಎರಡು ವರ್ಷಗಳಿಂದ ರೋಗ ಹರಡುವ ಪ್ರಮಾಣ ಕೊಂಚ ಇಳಿಮುಖ ಕಂಡಿದೆ.

ವಿಶಾಂತ್ರಿ ಅಗತ್ಯ
ಕಳೆದ ತಿಂಗಳು ಅರಂತೋಡು ತೊಡಿಕಾನ ಭಾಗದಲ್ಲಿ ನಾಲ್ಕು ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಈ ತಿಂಗಳ ವರದಿ ಬರಬೇಕಷ್ಟೆ. ತಾಲೂಕಿನ ಹೆಚ್ಚಿನ ಕಡೆ ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ. ರಕ್ತದ ಮಾದರಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಜ್ವರವನ್ನು ಯಾರೂ ನಿರ್ಲಕ್ಷ್ಯ ಮಾಡದೆ, ರೋಗದ ಲಕ್ಷಣ ಕಂಡುಬಂದರೆ ವೈದರ ಸಲಹೆ ಪಡೆಯಬೇಕು. ಸೂಕ್ತ ಚಿಕಿತ್ಸೆ ಪಡಕೊಂಡರೆ ಆತಂಕ ಪಡಬೇಕಾಗಿಲ್ಲ. ಜ್ವರಪೀಡಿತರಿಗೆ ವಿಶಾಂತ್ರಿ ಅಗತ್ಯ.
– ಡಾ| ಸುಬ್ರಹ್ಮಣ್ಯ, ತಾಲೂಕು ವೈದ್ಯಾಧಿಕಾರಿಗಳು, ಸುಳ್ಯ

ತೇಜೇಶ್ವರ್‌ ಕುಂದಲ್ಪಾಡಿ 

Advertisement

Udayavani is now on Telegram. Click here to join our channel and stay updated with the latest news.

Next