Advertisement

ಉತ್ತರ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ

12:03 PM Jul 11, 2017 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ 2013ರಲ್ಲಿ ಗೆದ್ದ ಸ್ಥಾನಕ್ಕಿಂತಲೂ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲುವುದು ಖಚಿತ. ಮುಂದಿನ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿಯುವುದು ಶತಸಿದ್ಧ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ ಹೇಳಿದರು. 

Advertisement

ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಇಲ್ಲಿನ ಆರ್‌.ಎನ್‌.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯಾನಗರ ಹಾಗೂ ಉಣಕಲ್ಲ ಬ್ಲಾಕ್‌ಗಳ ಬೂತ್‌ ಕಮಿಟಿಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

2013ರಲ್ಲಿ ಹೊಸಪೇಟೆಯಿಂದ ಕೂಡಲಸಂಗಮಕ್ಕೆ ಪಾದಯಾತ್ರೆ ಮೂಲಕ ಗೆಲುವಿನ ಹೆಜ್ಜೆ ಹಾಕಿದ್ದೆವು. ಇದೀಗ ಕೂಡಲಸಂಗಮದ ಸಮಾವೇಶದ ಮೂಲಕ 2018ರ ಚುನಾವಣೆಗೆ ರಣಕಹಳೆ ಮೊಳಗಿಸಿದ್ದೇವೆ ಎಂದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ ಈಗಾಗಲೇ 155 ಭರವಸೆಗಳನ್ನು ಈಡೇರಿಸಿದ್ದು, ಬಸವಣ್ಣನವರ ಆಶಯದಂತೆ ನುಡಿದಂತೆ ನಡೆದ ಸರಕಾರ ನಮ್ಮದಾಗಿದೆ.

ರಾಜ್ಯ ಸರಕಾರ ಕೇವಲ ಅಹಿಂದ ಸರಕಾರವಲ್ಲ, ಇದು ಎಲ್ಲ ವರ್ಗದ ಸರಕಾರವಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಮೊದಲು ರಾಜ್ಯ ಸರಕಾರ ಸಾಲ ಮನ್ನಾ ಮಾಡಲಿ, ಕೇಂದ್ರ ಸರಕಾರದ ಮೇಲೆ ಒತ್ತಡ ತರುತ್ತೇವೆ ಎನ್ನುತ್ತಿದ್ದ ಬಿಜೆಪಿ ನಾಯಕರು ಇದೀಗ ಕೇಂದ್ರದಿಂದ ಸಾಲ ಮನ್ನಾ ಇಲ್ಲ ಎನ್ನುತ್ತಿದ್ದು, ಇದರ ವಿರುದ್ಧ ಹೋರಾಟಕ್ಕಿಳಿಯೋಣ ಎಂದರು. 

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಮತದಾರರು ಕಾರಣರಲ್ಲ ಪಕ್ಷದ ನಾಯಕರ ನಡುವಿನ ವೈಮನಸ್ಸು ಕಾರಣವಾಗುತ್ತಿದೆ. ಮಹಾನಗರ ಪಾಲಿಕೆ ಸದಸ್ಯರಲ್ಲಿ ಕೆಲವರು ದೇಹ ಕಾಂಗ್ರೆಸ್‌, ಮನಸ್ಸು ಬಿಜೆಪಿ ಎನ್ನುವಂತಿದ್ದಾರೆ. 

Advertisement

ಮಹಾನಗರ ಅಭಿವೃದ್ಧಿಗೆ ಕಾಂಗ್ರೆಸ್‌ ಸರಕಾರ ಬಿಡುಗಡೆ ಮಾಡಿದ ಅನುದಾನ ಬಗ್ಗೆ ಜನರಿಗೆ ತಿಳಿಸಬೇಕಿದೆ ಎಂದರು. ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಚುನಾವಣೆ ಯುದ್ಧಕ್ಕೆ ನಾವು ಸಿದ್ಧರಾಗಬೇಕು. ಪ್ರತಿ ಬೂತ್‌ಗೆ ಕನಿಷ್ಠ 1,300 ಸದಸ್ಯರನ್ನು ನೋಂದಣಿ ಮಾಡಿಸಬೇಕಿದೆ.

ರಾಜ್ಯದಲ್ಲಿ ಮತ್ತೂಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಈ ಬಗ್ಗೆ ಅನುಮಾನ ಬೇಡ ಎಂದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸಿ.ಎಸ್‌.ಶಿವಳ್ಳಿ ಮಾತನಾಡಿ, ಬಿಜೆಪಿಯವರು ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರಕಾರ ಬುದ್ಧಿವಂತ ವ್ಯಾಪಾರಿಗಳ ಪರ ಸರಕಾರವಾಗಿದೆ ಎಂದರು. 

ಮಾಜಿ ಸಂಸದರಾದ ಪ್ರೊ|ಐ.ಜಿ.ಸನದಿ, ಮಂಜುನಾಥ ಕುನ್ನೂರು, ಕೆಪಿಸಿಸಿ ಎಸ್‌ಸಿ ಘಟಕದ ಅಧ್ಯಕ್ಷ ಎಚ್‌.ಎಫ್.ಜಕ್ಕಪ್ಪನವರ, ಮಹಾನಗರ ಜಿಲ್ಲಾಧ್ಯಕ್ಷ ಎ.ಎಂ.ಹಿಂಡಸಗೇರಿ ಮಾತನಾಡಿದರು. ಎಐಸಿಸಿ ಕಾರ್ಯದರ್ಶಿ, ಕೆಪಿಸಿಸಿ ಕಾರ್ಯಾಧ್ಯಕ್ಷ, ಕೆಪಿಸಿಸಿ ಎಸ್‌ಸಿ ಘಟಕದ ರಾಜ್ಯಾಧ್ಯಕ್ಷರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

ಕೆಪಿಸಿಸಿ ವೈದ್ಯಕೀಯ ಘಟಕದ ಉಪಾಧ್ಯಕ್ಷ ಡಾ|ಮಹೇಶ ನಾಲವಾಡ ಮಾತನಾಡಿದರು. ವೀರಣ್ಣ ಮತ್ತಿಕಟ್ಟಿ, ಅನ್ವರ್‌ ಮುಧೋಳ, ಪಾರಸ್‌ಮಲ್‌ ಜೈನ್‌, ಎಚ್‌.ವಿ.ಮಾಡಳ್ಳಿ, ಸದಾನಂದ ಡಂಗನವರ, ರಾಜಶೇಖರ ಮೆಣಸಿನಕಾಯಿ, ದೀಪಕ ಚಿಂಚೋರೆ, ಇಸ್ಮಾಯಿಲ್‌ ತಮಟಗಾರ, ದೇವಕಿ ಯೋಗಾನಂದ ಇದ್ದರು. ಮೋಹನ ಹಿರೇಮನಿ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next