ಮಳೆಗಾಲ ಬಂತೆಂದರೆ ಸಾಕು ಬಿಸಿ-ಬಿಸಿ ಪದಾರ್ಥಗಳನ್ನು ತಿನ್ನಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತೆ.ಹಾಗೆಯೇ ಊಟದ ಜೊತೆ ಒಂದು ರಸಂ ಇದ್ದರೆ ಸಾಕು ಎಲ್ಲೋ ಒಂದು ಖುಷಿ.ಹಾಗೇ ಹೆಚ್ಚಿನವರು ಟೊಮೆಟೋ ರಸಂ ತಿಂದು ಬೇಜಾರಗಿದ್ರೆ ಇಲ್ಲೊಂದು ನಾನ್ ವೆಜ್ ಪ್ರಿಯರಿಗೆ ರಸಂ ಇದೆ ಅದುವೇ “
ಚಿಕನ್ ರಸಂ”. ಏನಪ್ಪಾ ಶಾಕ್ ಆದ್ರಾ ,ಚಿಕನ್ ಬಳಸಿ ಹೀಗೂ ಮಾಡಬಹುದಾ!ರುಚಿ ಹೇಗಿರಬಹುದು ಎಂದು ಯೋಚಿಸುತ್ತಿದ್ದೀರಾ!ಹಾಗಾದರೆ ಚಿಂತೆ ಬಿಡಿ.ನಾವು ಹೇಳಿರುವ ಸಾಮಗ್ರಿಗಳನ್ನು ಬಳಸಿ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ… ಇದು ಆರೋಗ್ಯಕ್ಕೂ ಬಹಳ ಒಳ್ಳೆಯದು ಯಾಕೆಂದರೆ ಇದರಲ್ಲಿ ಸಾಕಷ್ಟು ಪೋಷಕಾಂಶಗಳಿರುವುದರಿಂದ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದು ಪ್ರಯೋಜನಕಾರಿ. ಮಾತ್ರವಲ್ಲದೇ ತುಂಬಾನೇ ಟೇಸ್ಟಿ ಕೂಡ ಹೌದು.
ಹಾಗಾದರೆ ಬನ್ನಿ ನಿಮಗಾಗಿ ಚಿಕನ್ ರಸಂ ಮಾಡುವುದು ಹೇಗೆ ಎಂಬುವುದರ ಬಗ್ಗೆ ಹೇಳಿಕೊಡುತ್ತೇವೆ…
ಚಿಕನ್ ರಸಂ
ಬೇಕಾಗುವ ಸಾಮಗ್ರಿಗಳು
ಚಿಕನ್-1ಕಪ್, ಈರುಳ್ಳಿ-2,ಜೀರಿಗೆ-1ಚಮಚ,ಕರಿಬೇವು-2ಎಸಳು,ಎಣ್ಣೆ-3ಚಮಚ,ಚಕ್ಕೆ-1,ಲವಂಗ-2,ಶುಂಠಿ-ಬೆಳ್ಳುಳ್ಳಿ ಪೇಸ್ಟ್-2ಚಮಚ,ಟೊಮೆಟೋ-1(ಸಣ್ಣಗೆ ಹೆಚ್ಚಿದ್ದು), ಅರಿಶಿನ ಪುಡಿ-1 ಟೀಸ್ಪೂನ್,ಖಾರದ ಪುಡಿ-3ಚಮಚ,ಕೊತ್ತಂಬರಿ ಪುಡಿ-1ಚಮಚ,ಕೊತ್ತಂಬರಿ ಸೊಪ್ಪು-ಸ್ವಲ್ಪ, ಪೆಪ್ಪರ್ ಪುಡಿ-1ಚಮಚ,ಉಪ್ಪು-ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ
ಮೊದಲಿಗೆ ಚಿಕನ್‌ನನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಸಣ್ಣಗೆ ಕಟ್ ಮಾಡಿ, ಉಪ್ಪು ಸೇರಿಸಿ ಬೇಯಿಸಿಕೊಳ್ಳಿ.ನಂತರ ಮಿಕ್ಸಿಜಾರಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ ,ಜೀರಿಗೆ ಮತ್ತು ಕರಿಬೇವಿನ ಎಸಳು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ತದನಂತರ ಒಂದು ಪ್ಯಾನ್ ಗೆ 3ಚಮಚ ಎಣ್ಣೆ ಹಾಕಿ ರುಬ್ಬಿಟ್ಟ ಮಸಾಲೆಯನ್ನು ಸೇರಿಸಿ 2ರಿಂದ 3ನಿಮಿಷಗಳ ಕಾಲ ಫ್ರೈ ಮಾಡಿ(ಹಸಿ ವಾಸನೆ ಹೋಗುವವರೆಗೆ).ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್,ಟೊಮೆಟೋ,ಅರಿಶಿನ ಪುಡಿ,ಖಾರದ ಪುಡಿ,ಕೊತ್ತಂಬರಿ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಪುನಃ ಫ್ರೈ ಮಾಡಿ ನಂತರ ನೀರನ್ನು ಹಾಕಿ ಅದಕ್ಕೆ ಬೇಯಿಸಿಟ್ಟ ಚಿಕನ್ ನನ್ನು ಸೇರಿಸಿ ಸ್ವಲ್ಪ ಹೊತ್ತು ಕುದಿ ಬರುವವರೆಗೆ ಬೇಯಿಸಿರಿ.ಆಬಳಿಕ ಪೆಪ್ಪರ್ ಪುಡಿ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ,ಚೆನ್ನಾಗಿ ಮಿಶ್ರಣ ಮಾಡಿದರೆ ಸಾಕು ಬಿಸಿ-ಬಿಸಿಯಾದ ಚಿಕನ್ ರಸಂ ಸವಿಯಲು ಸಿದ್ಧ.
-ಶ್ರೀರಾಮ್ ಜಿ .ನಾಯಕ್