ಪಕ್ಕದ ಮನೆಯವನು ಟಿವಿಯನ್ನು ಜೋರಾಗಿ ಹಾಕುತ್ತಾನೆ ಎಂಬ ಸಿಟ್ಟು, ತರಕಾರಿ ಅಂಗಡಿಯವನು ಕೊತ್ತಂಬರಿ ಸೊಪ್ಪು ಕಡಿಮೆ ಕೊಟ್ಟನೇನೋ ಎಂಬ ಸಂಶಯ, ಹೆಂಡತಿ ಶರಟಿಗೆ ಸರಿಯಾಗಿ ಇಸ್ತ್ರಿ ಹಾಕಿ ಕೊಡಲಿಲ್ಲ ಎಂಬ ಅಸಮಾಧಾನ… ಎಲ್ಲವೂ ನಾವೇ ಹುಟ್ಟು ಹಾಕಿಕೊಂಡದ್ದು. ದುಃಖ ದುಮ್ಮಾನಗಳು, ಸಿಟ್ಟು ಸೆಡವುಗಳ ಕಾರ್ಖಾನೆ ನಮ್ಮೊಳಗೇ ಇದೆ. ಅದರ ಬಾಗಿಲು ಮುಚ್ಚಿ ಉತ್ಪಾದನೆ ಸ್ಥಗಿತಗೊಳಿಸಿ ಲಾಕ್‌ಡೌನ್ ಘೋಷಿಸುವುದಕ್ಕೆ ಇದು ಸರಿಯಾದ ಹೊತ್ತು.
ನಮ್ಮ ನರಳುವಿಕೆಯಲ್ಲಿ ಎರಡು ವಿಧ- ದೈಹಿಕ ಮತ್ತು ಮಾನಸಿಕ. ನಮ್ಮ ನೋವಿನಲ್ಲಿ ತೊಂಬತ್ತು ಪ್ರತಿಶತ ಕೊಡುಗೆ ಮನಸ್ಸಿನದ್ದು. ಸಿಟ್ಟು, ಭಯ, ದ್ವೇಷ, ಈಷ್ಯೆ, ಅಭದ್ರತೆ… ಹೀಗೆ ನಾವು ಪ್ರತೀ ದಿನ ನಮ್ಮೊಳಗೆಯೇ ಬಗೆಬಗೆಯ ನೋವುಗಳನ್ನು ಉತ್ಪಾದಿಸುತ್ತಿರುತ್ತೇವೆ.
ನೋವು ಉತ್ಪಾದನೆ ಹೇಗೆ ಆಗುತ್ತದೆ ಎಂಬುದನ್ನು ಪರಿಶೀಲಿಸೋಣ. ಇವತ್ತು ಬೆಳಗ್ಗೆ ಸೂರ್ಯ ಪೂರ್ವ ದಲ್ಲಿ ಸರಿಯಾದ ಹೊತ್ತಿಗೇ ಉದಯಿಸಿದ್ದಾನೆ. ಹೂವು ಗಳು ಅರಳಿವೆ, ಹಕ್ಕಿಗಳು ಎಂದಿನಂತೆ ಗಿಡದಿಂದ ಗಿಡಕ್ಕೆ ಹಾರುತ್ತ ತಮ್ಮ ಕೆಲಸ ಮಾಡುತ್ತಿವೆ, ತೆಂಗಿನ ಮರ ದಲ್ಲಿ ಕೊಂಬೊಡೆದಿದೆ, ಬಾವಿಯ ನೀರು ತಳ ಹತ್ತಿಲ್ಲ… ಎಲ್ಲವೂ ಅವುಗಳ ಪಾಡಿಗೆ ವ್ಯವಸ್ಥಿತ ವಾಗಿ ನಿಯಮ ಪ್ರಕಾರ ನಡೆಯುತ್ತಿವೆ. ಇಡೀ ವಿಶ್ವ ಇಷ್ಟು ಚೆನ್ನಾಗಿ ಮುನ್ನಡೆಯು ತ್ತಿರುವಾಗ ನಮ್ಮ ತಲೆಯೊಳಗೆ ಮಾತ್ರ ಒಂದು ಹುಳ ತೂತು ಕೊರೆಯುತ್ತಿರುತ್ತದೆ ಮತ್ತು ಈ ದಿನ ಚೆನ್ನಾಗಿಲ್ಲ, ಅದು ಕೆಟ್ಟದಾಗಿದೆ, ಇದು ಸರಿಯಾಗಿಲ್ಲ ಎಂದು ಗಿರಕಿ ಹೊಡೆಯುತ್ತಿರು ತ್ತದೆ. ಬದುಕು ಎಂದರೆ ಏನು ಎಂಬುದನ್ನು ಗ್ರಹಿಸಲು ಅಶಕ್ತರಾಗಿರುವುದರಿಂದ ನಮ್ಮಲ್ಲಿ ನೋವು ಉತ್ಪಾದನೆಯಾಗುತ್ತದೆ. ನಮಗೆ ಸೃಷ್ಟಿಯ ಮಹೋನ್ನತ ಪ್ರಕ್ರಿಯೆಗಿಂತ ನಮ್ಮ ಮನೋಪ್ರಕ್ರಿಯೆಯೇ ದೊಡ್ಡದು ಎಂಬಂತೆ ಭಾಸವಾಗುತ್ತಿದೆ. ನೇರವಾಗಿ ಹೇಳಬೇಕೆಂದರೆ ನಾವು ಸೃಷ್ಟಿಸಿಕೊಂಡಿರುವ ಕ್ಷುಲ್ಲಕ ನೋವುಗಳೇ ಸೃಷ್ಟಿಕರ್ತನ ಸೃಷ್ಟಿಗಿಂತ ದೊಡ್ಡದು ಎಂಬ ಗ್ರಹಿಕೆ.
ನಮ್ಮ ಎಲ್ಲ ನರಳುವಿಕೆಯ ಮೂಲ ಇದು. ಇಲ್ಲಿ ಬದುಕುವುದು ಎಂದರೇನು ಎಂಬ ಅರಿವು, ಪ್ರಜ್ಞೆ ನಮ್ಮಿಂದ ಸಂಪೂರ್ಣವಾಗಿ ಕೈತಪ್ಪಿ ಹೋಗಿದೆ. ನಮ್ಮ ತಲೆಯೊಳಗಿನ ಯಾವುದೋ ಒಂದು ಆಲೋಚನೆ, ಒಂದು ಭಾವನೆ ನಮ್ಮ ಈಗಿನ ಜೀವನದ ಅನುಭವವನ್ನು ಪ್ರಭಾವಿಸುತ್ತಿರುತ್ತದೆ. ಸೃಷ್ಟಿ ಅತ್ಯಂತ ಅದ್ಭುತವಾಗಿ ಮುನ್ನಡೆಯುತ್ತಿದ್ದರೂ ನಮ್ಮ ಮನಸ್ಸಿನ ಒಂದು ಭಾವನೆ ಅಥವಾ ಆಲೋಚನೆ ನಮ್ಮ ಪಾಲಿಗೆ ಅದನ್ನು ಹಾಳು ಗೆಡವುತ್ತದೆ. ನಮ್ಮ ಈ ಆಲೋಚನೆ ಮತ್ತು ಭಾವನೆಯಿಂದ ನಮ್ಮ ಪರಿಮಿತ ವ್ಯಾಪ್ತಿಯ ಅಸ್ತಿತ್ವಕ್ಕೂ ಏನೂ ಉಪಯೋಗವಿಲ್ಲ ಅನ್ನುವುದೂ ವಿಪರ್ಯಾಸ.
ನಾವು “ನಮ್ಮ ಮನಸ್ಸು’ ಅಂದುಕೊಂಡಿ ರುವುದು ಕೂಡ ನಿಜವಾಗಿ ನಮ್ಮದಲ್ಲ. ಎಲ್ಲವೂ ಎರವಲು ಪಡೆದು ಕೊಂಡದ್ದು. ಮನಸ್ಸು ಸಮಾಜದ ಕಸದಬುಟ್ಟಿ ಇದ್ದ ಹಾಗೆ. ಅವನು ಹೇಳಿದ್ದು, ಇವನು ಮಾಡಿದ್ದು, ಇಲ್ಲಿ ಆದದ್ದು, ಅಲ್ಲಿ ಹೋದದ್ದು ನಮ್ಮ ಮನಸ್ಸಿನೊಳಗೆ ಪ್ರತಿಕ್ರಿಯೆಗಳನ್ನು ಉತ್ಪಾದಿ ಸುತ್ತಿರುತ್ತದೆ. ಇಲ್ಲಿ ನಮಗೆ ಬೇಕು ಅಥವಾ ಬೇಡ ಎನ್ನುವ ಆಯ್ಕೆಗಳಿಲ್ಲ. ಹೀಗಾಗಿ ಈ ಕಸವನ್ನು ಚೆನ್ನಾಗಿ ಬಳಸಿಕೊಳ್ಳಲು ಗೊತ್ತಿದ್ದರೆ ಮಾತ್ರ ಅದು ಉಪಯೋಗಿ.
ಆಧ್ಯಾತ್ಮಿಕ ಬದುಕು ಎಂದರೆ ಸೃಷ್ಟಿ ಹೇಗಿ ದೆಯೋ ಹಾಗೆ ಅನುಭವಿಸಲು, ಪರಿಗ್ರಹಿಸಲು ಕಲಿಯುತ್ತ ಹೋಗುವುದು, ನಮ್ಮ ಆಲೋಚನೆಗಳ ಮೂಲಕ ಅಂಕು ಡೊಂಕಾಗಿ ಗ್ರಹಿಸುವುದಲ್ಲ. ಸರಳವಾಗಿ ಹೇಳಬೇಕಾದರೆ ನಾವು ಯೋಚಿಸಿದ್ದು, ನಾವು ಭಾವಿಸಿದ್ದು ಮುಖ್ಯವಲ್ಲ. ನಮ್ಮ ಮನೋಭಾವನಾತ್ಮಕ ಸೃಷ್ಟಿಯಲ್ಲ, ಅಖಂಡ ಸೃಷ್ಟಿಯೇ ಪರಮ ಸತ್ಯ.
ಅದಕ್ಕಾಗಿಯೇ ಹೇಳಿದ್ದು, ನೋವು ಉತ್ಪಾದಿಸುವ ಕಾರ್ಖಾನೆಯನ್ನು ಮುಚ್ಚಲು ಇದು ಸರಿಯಾದ ಸಮಯ.