ಬೆಂಗಳೂರು: ”ಕುಮಾರಸ್ವಾಮಿಯವರ ಕುಟುಂಬದ ಸದಸ್ಯರೊಬ್ಬರು ಜೆಡಿಎಸ್ ಬದಲು ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು ಜೆಡಿಎಸ್ ಪಕ್ಷ ಮುಳುಗಿ ಹೋಗಿರುವುದಕ್ಕೆ ಸಾಕ್ಷಿ” ಎಂದು ಡಾ.ಸಿ. ಎನ್. ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಬಗ್ಗೆ ಕಾಂಗ್ರೆಸ್ ಲೇವಡಿ ಮಾಡಿದೆ.
ಎಕ್ಸ್ ಪೋಸ್ಟ್ ನಲ್ಲಿ, ಡಾ.ಸಿ. ಎನ್. ಮಂಜುನಾಥ್ ಅವರಿಗೆ ಜೆಡಿಎಸ್ ಪಕ್ಷದ ಮೇಲೆ, ಜೆಡಿಎಸ್ ಪಕ್ಷದ ನಾಯಕತ್ವದ ಮೇಲೆ ನಂಬಿಕೆ ಇಲ್ಲದಾಗಿದೆಯೇ ಎಚ್.ಡಿ.ಕುಮಾರಸ್ವಾಮಿ ಅವರೇ? ಎಂದು ಪ್ರಶ್ನಿಸಿದೆ.
”ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯುವ ಮೊದಲೇ ಕೆಲವರಿಗೆ ಟಿಕೆಟ್ ಘೋಷಿಸಿರುವುದು ಕರ್ನಾಟಕ ಬಿಜೆಪಿಯ ರಾಜಕೀಯ ದಾರಿದ್ರ್ಯಕ್ಕೆ ಹಿಡಿದ ಕನ್ನಡಿ” ಎಂದು ಡಾ.ಸಿ. ಎನ್. ಮಂಜುನಾಥ್ ಮತ್ತು ಯದುವೀರ್ ಅವರು ಟಿಕೆಟ್ ಘೋಷಣೆಯಾದ ಬಳಿಕ ಪಕ್ಷ ಸೇರ್ಪಡೆಯಾಗಿರುವ ಕುರಿತು ಲೇವಡಿ ಮಾಡಿದೆ.
ಇನ್ನೊಂದು ಎಕ್ಸ್ ಪೋಸ್ಟ್ ನಲ್ಲಿ ”ಸಂಸತ್ ದಾಳಿಕೋರರೊಂದಿಗೆ ಕೈಜೋಡಿಸಿ ಪಾಸ್ ನೀಡಿದ್ದಕಾಗಿಯೇ ಪ್ರತಾಪ್ ಸಿಂಹರಿಗೆ ಟಿಕೆಟ್ ನಿರಾಕರಿಸಲಾಗಿದೆಯೇ? ಸಂಸತ್ ದಾಳಿಯಲ್ಲಿ ಪ್ರತಾಪ್ ಸಿಂಹರ ಸ್ಪೋಟಕ ಸತ್ಯಗಳಿದೆಯೇ? ಸಂಸತ್ ದಾಳಿಯ ಬಗೆಗಿನ ತನಿಖೆ ಎಲ್ಲಿಯವರೆಗೆ ಬಂದಿದೆ? ದಾಳಿ ಹಿಂದಿನ ಕೈವಾಡ ಯಾರದ್ದಿದೆ? ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಈ ವಿಷಯವನ್ನು ಬಹಿರಂಗಪಡಿಸಬೇಕು.ಪ್ರತಾಪ್ ಸಿಂಹ ಬಗ್ಗೆ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಕರ್ನಾಟಕ ಬಿಜೆಪಿಗೆ ಈ ಪ್ರಶ್ನೆಗಳಿಗೆ ಉತ್ತರಿಸುವ ಧಮ್ ತಾಕತ್ತಿದೆಯೇ?” ಎಂದು ಪ್ರಶ್ನಿಸಿದೆ.