ನಿನ್ನ ಹರವಾದ ಎದೆಯ ಮೇಲೆ ತಲೆಯಿಟ್ಟು ಗಳಿಗೆ ಮಲಗುವಾಸೆ. ಆ ಮೂಲಕ ಮನದ ನೋವನ್ನೆಲ್ಲ ಹೊರಹಾಕಿ ನಿಟ್ಟುಸಿರಾಗುವಾಸೆ.
ನೀನು ಹೀಗೆ ನನ್ನೊಳಗೆ ಪ್ರವೇಶಿಸಿ, ನನ್ನ ಅಸ್ತಿತ್ವವೇ ಮರೆಯಾಗುವಂತೆ ಮಾಡ್ತೀಯಾ ಅಂದುಕೊಂಡಿರಲಿಲ್ಲ ಗೆಳೆಯಾ. ಈ ಪ್ರೀತಿ ಹೀಗೆ ಹೇಳದೆ ಕೇಳದೆ ಒಳ ನುಗ್ಗತ್ತೆ ಅಂತ ಕಲ್ಪನೆ ಕೂಡ ಇರಲಿಲ್ಲ. ಅದ್ಯಾವ ಗಳಿಗೆಯಲಿ ನಿನ್ನ ನೋಡಿದೆನೋ, ಅವತ್ತಿನಿಂದ ನನ್ನಲಿ ನೀನೇ ತುಂಬಿಕೊಂಡಿದೀಯಾ. ನಿನ್ನ ಕಣ್ಣನೋಟ ಮರೆಯಲಾಗುತ್ತಿಲ್ಲ. ನೀನಿಲ್ಲದಾಗ ಎಷ್ಟು ಹಾಯಾಗಿತ್ತು ಈ ಮನಸ್ಸು. ನೀ ಬಂದ ಮೇಲೆ ಬರೀ ನಿನ್ನ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಕಾಲೇಜು, ಫ್ರೆಂಡ್ಸ್ ಅಂತ ಅಲೆಯುತ್ತಿದ್ದ ನನಗೀಗ ನಿನ್ನನ್ನು ಬಿಟ್ಟರೆ ಎಲ್ಲವೂ ಶೂನ್ಯವೆನಿಸುತ್ತಿದೆ.
ನನ್ನ ಮುಂಗುರುಳ ಮುದ್ದಿಸಿ, ಕಣ್ಣಲಿ ಕಣ್ಣಿಟ್ಟು ನೋಡುತ್ತ, ಎಡಗೆನ್ನೆಯ ಸುಂದರ ಸಮ್ಮೊàಹಕ ಗುಳಿಕೆನ್ನೆಗೆ ಬೆರಗಾಗಿ ನಿನ್ನ ನೀ ಮರೆತದ್ದನ್ನು ನಾ ಅದ್ಹೇಗೆ ಮರೆಯಲಿ? ಗೊತ್ತೇನೇ ಹುಡುಗಿ, ನಿನ್ನ ನೋಡದೆ ಅದೆಷ್ಟು ಚಡಪಡಿಸುತ್ತಿದೆ ನನ್ನ ಮನ ಎಂದು ಫೋನಾಯಿಸಿದಾಗ ಆಕಾಶಕ್ಕೆ ಲಗ್ಗೆ ಹಾಕಿದಷ್ಟು ಸಂಭ್ರಮದಲ್ಲಿ ಮನ ಹಿಗ್ಗುತ್ತದೆ. ಈ ಒಲವಿಗೆ, ಈ ಸಾಂಗತ್ಯಕ್ಕೆ, ಈ ಸಿಹಿಸಂಕಟಕ್ಕೆ ಮುನ್ನುಡಿ ಬರೆದ ಮಾಯಗಾರ ನೀನು. ನೀನಿಲ್ಲದೆ ಊಟ ರುಚಿಸುತ್ತಿಲ್ಲ, ನೀನಿಲ್ಲದೆ ನಿದಿರೆ ಹತ್ತಿರ ಸುಳಿಯುತ್ತಿಲ್ಲ. ನನಗೇನಾಗಿದೆ ಅಂತ ನನ್ನನ್ನೇ ನಾನು ಕೇಳುವಂತಾಗಿದೆ. ಇದಕ್ಕೆಲ್ಲ ದಿವ್ಯಔಷಧ ನೀನೇ ಅಂತಲೂ ಗೊತ್ತು. ನೀನಿಲ್ಲದೆ ಈ ಸಂಜೆ, ಈ ಏಕಾಂತ, ಈ ಕುಳಿರ್ಗಾಳಿ ನನ್ನನ್ನು ಅಣಕಿಸಿದಂತೆ ಭಾಸವಾಗ್ತಿದೆ ಕಣೋ. ಎಂದಿಗೂ ನೀ ನನ್ನವಳೇ ಕೂಸೆ, ನೀನೇ ನನ್ನುಸಿರು ಎನ್ನುತ ಓಲೈಸುವ ನಿನ್ನ ಪ್ರೀತಿಯ ಪರಿಗೆ ಬೆರಗಾದೆ.
ನೀನಿಲ್ಲದೆ ನಿಲ್ಲಲ್ಲ ಈ ಜೀವ. ಅರಳಲ್ಲ ಯಾವ ಭಾವ. ಗೊತ್ತೆ ಇದೆಯಲ್ಲ ನಿನಗ ನನ್ನ ಸ್ವಭಾವ? ಹೂಮುತ್ತಿಗಾಗಿ ಕಾದಿದೆ ಹಣೆ. ನಿನ್ನ ಇಂಪಾದ ದನಿಯ ಕೇಳುವ ತವಕದಲ್ಲಿರುವೆ. ಅಗಲುವಿಕೆಗೆ ಪೂರ್ಣವಿರಾಮ ನೀಡು. ನಿನ್ನ ಕೋಪ ತಾಪಗಳೇನೇ ಇದ್ದರೂ ಮರೆತು ಬಿಡು. ನಮ್ಮಿಬ್ಬರ ಕನಸುಗಳು ಒಂದೇ, ಒಲವ ದಾರಿಯೂ ಒಂದೇ. ಸೇರುವ ಗುರಿಯೂ ಒಂದೇ ಇರುವಾಗ ಮತ್ತೇಕೆ ತಡ ಕೂಸೆ? ನಿನ್ನ ಹರವಾದ ಎದೆಯ ಮೇಲೆ ತಲೆಯಿಟ್ಟು ಗಳಿಗೆ ಮಲಗುವಾಸೆ. ಆ ಮೂಲಕ ಮನದ ನೋವನ್ನೆಲ್ಲ ಹೊರಹಾಕಿ ನಿಟ್ಟುಸಿರಾಗುವಾಸೆ. ನೀನಾಡದ ಮಾತು ಮಾತಲ್ಲ, ನಿನ್ನ ನೋಡದ ಕಂಗಳು ಕಂಗಳಲ್ಲ. ನೀನಿಲ್ಲದ ಯಾವ ಸಿರಿ ಬೇಡ.ನಿಜವಾದ ಸಿರಿ ನನಗೆ ನೀನು ಕಣೋ. ನೀನೇ ವೇದ್ಯ, ನೀನೇ ನೈವೇದ್ಯ ಈ ಹೃದಯಕೆ. ಕಾರಣ ಹೇಳದೆ ಬಂದು ಸೇರು ನಿನ್ನ ರಾಣಿಯ ಒಲವ ತೋಟಕೆ. ವಿರಹ ಸಾಕಿನ್ನು ವಿಲಾಸ ಬೇಕಿನ್ನು. ಯಾವ ಹೂವು ಯಾರ ಮುಡಿಗೊ ಅಂತ ನನ್ನ ಕಂಡಾಗಲೆಲ್ಲ ಹಾಡುತ್ತಿದ್ದೆಯಲ್ಲವೆ? ಈಗ ಈ ಹೂವು ನಿನಗಾಗಿ ಕಾಯುತ್ತಿದೆ ಬಾ ಒಲವೆ.
ನಿನ್ನೊಲವಿನ ಪೂಜೆಯ ಆರಾಧಕಿ,
ಜಯಶ್ರೀ ಭ. ಭಂಡಾರಿ