ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ “ಕಾಸ್ಮಿಕ್ ಕ್ಲೋನ್ಸ್’ ಎಂಬ ಹೊಸ ಸಿನಿಮಾ ಕೂಡ ಸೇರಿದೆ. ಈ ಹೆಸರಲ್ಲೊಂದು ವಿಶೇಷವಿದೆ. ಕಾಸ್ಮಿಕ್ ಅಂದರೆ ಬ್ರಹ್ಮಾಂಡ. ಕ್ಲೋನ್ಸ್ ಅನ್ನೋದು ಡಿಫರೆಂಟ್. ಅಲ್ಲಿಗೆ ಒಂದು ರೀತಿಯಂತೆ ಮತ್ತೂಂದು ಇರೋದಿಲ್ಲ ಎಂಬ ಕಾನ್ಸೆಪ್ಟ್ ಮೇಲೆ ಮಾಡುತ್ತಿರುವ ಸಿನಿಮಾ ಇದು.
ಈ ಚಿತ್ರಕ್ಕೆ ರಾಕೇಶ್ ನಿರ್ದೇಶಕರು. ಮೊದಲ ನಿರ್ದೇಶನದ ಸಿನಿಮಾ ಇದು. ಇಲ್ಲಿ ರಾಕೇಶ್ ಅವರು, ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಯಲ್ಲಿ ನಟನೆಯನ್ನೂ ಮಾಡಿದ್ದಾರೆ. ಸಿನಿಮಾ ಬಗ್ಗೆ ಹೇಳುವ ನಿರ್ದೇಶಕ ರಾಕೇಶ್, ಒಂದು ಸಸ್ಪೆನ್ಸ್ ವಿಷಯ ಇಲ್ಲಿದೆ. ಅದನ್ನು ಸಿನಿಮಾದಲ್ಲೇ ನೋಡಬೇಕು. ಈ ರೀತಿಯ ಸಿನಿಮಾಗಳು ಹೆಚ್ಚಾಗಿ ಯುರೋಪಿಯನ್ ದೇಶಗಳಲ್ಲಿ ಕಾಣಬಹುದು.
ಕನ್ನಡದಲ್ಲಿ ಒಂದು ವಿಭಿನ್ನ ಪ್ರಯತ್ನ ಎನ್ನುವ ರಾಕೇಶ್, ಇಲ್ಲಿ ಸೈನ್ಸ್ ಫಿಂಕ್ಷನ್ ವಿಷಯ ಹೇಳಹೊರಟಿದ್ದೇವೆ. ಸೈನ್ಸ್‌ಗೆ ಇರುವಂತಹ ಅನೇಕ ವಿಷಯಗಳು ಚಿತ್ರದಲ್ಲಿರಲಿವೆ. ಚಿತ್ರದ ಕಥೆ ಹೆಣೆಯುವ ಮುನ್ನ, ಅನೇಕ ಡಾಕ್ಟರ್ ಹಾಗೂ ವಿಜ್ಞಾನಿಗಳನ್ನು ಸಂಪರ್ಕಿಸಿ ಚರ್ಚಿಸಲಾಗಿದೆ. ಸಾಕಷ್ಟು ಪಾತ್ರಗಳು ಇಲ್ಲಿ ಬರಲಿದ್ದು, ಪ್ರತಿ ಪಾತ್ರಕ್ಕೂ ಅದರದ್ದೇ ಆದಂತಹ ವಿಶೇಷತೆ ಇದೆ ಎಂಬುದು ಅವರ ಮಾತು.
ಅಂದಹಾಗೆ, “ಕಾಸ್ಮಿಕ್ ಕ್ಲೋನ್ಸ್’ ಚಿತ್ರ ಈಗಾಗಲೇ ಶೇ.90ರಷ್ಟು ಚಿತ್ರೀಕರಣಗೊಂಡಿದೆ.ಬಹುತೇಕ ಬೆಂಗಳೂರಲ್ಲೇ ಶೂಟಿಂಗ್ ಮಾಡಲಾಗಿದೆ. ಇನ್ನು ಶೇ.10 ರಷ್ಟು ಚಿತ್ರೀಕರಣಗೊಂಡರೆ ಸಿನಿಮಾ ಮುಗಿಯಲಿದೆ. ಡಿಸಿಸಿ ಸಿನಿಮಾ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣಗೊಂಡಿದೆ. ಚಿತ್ರಕ್ಕೆ ಸಚಿನ್ ಛಾಯಾಗ್ರಹಣ ಮಾಡಿದ್ದಾರೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇತ್ತೀಚೆಗೆ ನಟರಾದ ಗಣೇಶ್ ಕೇಸರ್ಕರ್ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.