ದಾವಣಗೆರೆ: ಮಹಿಳೆ ಅಂದರೆ ಕೇವಲ ಮನೆ ಕೆಲಸವಷ್ಟೇ. ಮಕ್ಕಳನ್ನು ಹೆತ್ತು, ಪಾಲನೆ ಪೋಷಣೆ ಮಾಡಿದರೆ ಆಕೆಯ ಜೀವನ ಸಾಧನೆಯ ಪುಟ ತುಂಬಿ ಹೋಯಿತು ಎಂಬ ಮಾತುಗಳು ಈ ಹಿಂದೆ ಇದ್ದವು. ಆದರೆ, ಇಂದು ಕಾಲ ಸಂಪೂರ್ಣ ಬದಲಾಗಿದೆ. ಮಹಿಳೆ ಪುರುಷನ ಮೀರಿ ಸಾಧನೆಗೈಯ್ಯುವ ಮಟ್ಟಕ್ಕೆ ಬೆಳೆದಿದ್ದಾಳೆ.
ಯಾವುದೇ ಕ್ಷೇತ್ರದಲ್ಲೂ ತಾನು ಕಮ್ಮಿ ಇಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ದೊಡ್ಡ ದೊಡ್ಡ ಕೈಗಾರಿಕೋದ್ಯಮಿ, ಸಾಧಕರಲ್ಲಿ ಮಹಿಳೆಯರ ಸಂಖ್ಯೆ ಸಹ ಪುರುಷರಿಗೆ ಸರಿ ಸಮಾನ ಅನ್ನುವಷ್ಟರ ಮಟ್ಟಿಗಿದೆ. ಅಂಥಹ ಸಾಧಕಿಯರು ಈಗ ಎಲ್ಲಡೆ ಕಾಣ ಸಿಗುತ್ತಾರೆ.
ಮೂರು ದಶಕಗಳ ಹಿಂದೆ ಮಹಿಳೆ ಕೆಲಸಕ್ಕೆ ಹೋಗುತ್ತಾಳೆಂದರೆ ಅಚ್ಚರಿ ಪಡುವ ಜನರಿದ್ದರು. ಅಂತಹ ಕಾಲದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹಿಳೆ ಕೆಲಸ ಮಾಡುತ್ತಾಳೆಂದರೆ ಬೆರಗುಗಣ್ಣಿನಿಂದ ನೋಡುತ್ತಿದ್ದರು. 1991ರಲ್ಲಿ ನಮ್ಮದೇ ಊರಿನ ಯುವತಿ ಇನ್ನೂ 18 ತುಂಬುವ ಮುನ್ನವೇ ಗ್ರಾಮೀಣ ಬ್ಯಾಂಕ್‌ನ ಪರೀಕ್ಷೆ ಬರೆದು ಪಾಸಾದರು.
ನಂತರ ಇಂಜಿನಿಯರಿಂಗ್ ಮಾಡುವ ಬಯಕೆ ಹೊಂದಿದ್ದರು. ಆದರೆ, ಮನೆಯಲ್ಲಿ ಬಿಎಸ್‌ಸಿ ಸೇರಿಸಿದ್ದರ ಪರಿಣಾಮ, ಬ್ಯಾಂಕ್ ಪರೀಕ್ಷೆ ಬರೆದು ಆ ಕ್ಷೇತ್ರದಲ್ಲಿ ಸೇವೆ ಆರಂಭಿಸಿ, ಯಶಸ್ವಿಯಾದವರೇ ಕಿರಣ್. ಜಿಲ್ಲೆಯ ಮುಂಚೂಣಿ ಬ್ಯಾಂಕ್ (ಲೀಡ್ ಬ್ಯಾಂಕ್) ಪಿ.ಜೆ. ಬಡಾವಣೆ ಶಾಖೆಯ ಮುಖ್ಯ ಪ್ರಬಂಧಕರಾಗಿರುವ ಕಿರಣ್, 25 ವರ್ಷ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಸೇವೆ ಪೂರ್ಣಗೊಳಿಸಿದ್ದಾರೆ.
ಕೆನರಾ ಬ್ಯಾಂಕ್‌ನ ತರಬೇತಿ ಕೇಂದ್ರದ ನಿರ್ದೇಶಕರಾಗಿ 3 ವರ್ಷ ಸೇವೆ ಸಲ್ಲಿಸಿದ್ದಾರೆ. ಈ ಕಾಲಾವಧಿಯಲ್ಲಿ ಅನೇಕ ಯುವಕ, ಯುವತಿಯರಿಗೆ ಬದುಕು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡಿದ್ದಾರೆ. ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ 4 ವರ್ಷ ಸೇವೆ ಸಲ್ಲಿಸಿದ್ದಾರೆ. ಬ್ಯಾಂಕಿಂಗ್ ವಲಯದ ಸಾಧನೆ ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಇತರರಿಗೆ ಮಾದರಿಯಾಗಲಿ.