ಬೆಂಗಳೂರು ನಗರ ಅಂದರೆ ಹಾಗೆ. ಅದು ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತದೆ. ಇಲ್ಲಿನ ಆಕರ್ಷಣೆಗೆ ಮಾರು ಹೋಗಿ ಪ್ರತಿದಿನ ಈ ಮಹಾನಗರ ಸೇರುವ ಜನರಿಗೇನೂ ಕಮ್ಮಿ ಇಲ್ಲ. ಓದು, ಉದ್ಯೋಗ, ಪ್ರವಾಸ ಹೀಗೆ ಅನೇಕ ಉದ್ದೇಶಗಳಿಗಾಗಿ, ಬೇರೆ ಬೇರೆ ರಾಜ್ಯಗಳಿಂದ ಲಕ್ಷಾಂತರ ಜನ ಇಲ್ಲಿಗೆ ಬರುತ್ತಾರೆ. ಹೀಗೆ ವಿದ್ಯಾರ್ಥಿಗಳಾಗಿ ಬಂದು ಬಿಇಎಸ್ ಕಾಲೇಜ್ ಸೇರುವ ಹುಡುಗರ ಜೀವನ ಬೆಂಗಳೂರಿನಲ್ಲಿ ಹೇಗಿರುತ್ತದೆ ಎಂಬುದು ಇದೀಗ ಸಿನಿಮಾ ರೂಪದಲ್ಲಿ ತೆರೆಮೇಲೆ ಬರುತ್ತಿದೆ.
ಅಂದಹಾಗೆ, ಆ ಸಿನಿಮಾದ ಹೆಸರು “ಇದು ಬೆಂಗಳೂರು ನಗರ, ಯಾರು ಮಾಡಬೇಡಿ ನಕರ’. 1987ರಿಂದ ಚಿತ್ರರಂಗದಲ್ಲಿ ಕ್ಲಾಪ್‌ಬಾಯ್, ಸಹಾಯಕ, ತಂತ್ರಜ್ಞನಾಗಿ ಹಲವು ವಿಭಾಗಗಳಲ್ಲಿ ಸಾಕಷ್ಟು ಕೆಲಸ ಮಾಡಿದ ಅನುಭವವಿರುವ ಕೆ.ಪಿ.ಸೆಲ್ವರಾಜ್ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಗೀತ, ಸಂಭಾಷಣೆ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಜವಬ್ದಾರಿಯನ್ನೂ ಕೆ.ಪಿ.ಸೆಲ್ವರಾಜ್ ಅವರೇ ಹೊತ್ತುಕೊಂಡಿದ್ದಾರೆ.
“ಕಳೆದ ಮೂವತ್ತು ವರ್ಷಗಳಿಂದ ಕನ್ನಡ ಚಿತ್ರರಂಗದ ಆಳ-ಅಗಲ ಎಲ್ಲವನ್ನೂ ಹತ್ತಿರದಿಂದ ಅರಿತಿದ್ದೇನೆ. ಹಾಗಾಗಿ ನಾನು ಸಮರ್ಥವಾಗಿ ನಿರ್ವಹಿಸಬಲ್ಲೆ ಎಂಬ ವಿಶ್ವಾಸವಿರುವ ಎಲ್ಲಾ ವಿಭಾಗಗಳನ್ನು ನಾನೇ ನಿರ್ವಹಿಸುತ್ತಿದ್ದೇನೆ’ ಎನ್ನುವ ಕೆ.ಪಿ.ಸೆಲ್ವರಾಜ್, “ಕಾಡು ಅಂದ್ರೆ ಅಲ್ಲಿ ಜಿಂಕೆ ಇರಬೇಕು. ಹಾಗೆ, ಕಾಲೇಜು ಅಂದ್ರೆ ಅಲ್ಲೊಂದು ಮುದ್ದಾದ ಲವ್‌ಸ್ಟೋರಿ ಇರಬೇಕು. ಆದರೆ, ಈಗಿನ ಸಿನಿಮಾಗಳಲ್ಲಿ ಲಾಂಗು-ಮಚ್ಚುಗಳ ಅಬ್ಬರವೇ ಜಾಸ್ತಿಯಾಗಿದೆ.
ಇವುಗಳ ನಡುವೆ ನವಿರಾದ ಪ್ರೇಮಕಥೆ ಇರುವ ಚಿತ್ರವನ್ನು ನಾವು ಪ್ರೇಕ್ಷಕರಿಗೆ ಕೊಡುತ್ತಿದ್ದೇವೆ. ಚಿತ್ರದಲ್ಲಿ ಗನ್ ತೋರಿಸಿಲ್ಲ. ಪೆನ್ನು ತೋರಿಸಿ ಒಳ್ಳೆಯ ಚಿತ್ರ ಮಾಡಿದ್ದೇವೆ’ ಎಂಬುದು ನಿರ್ದೇಶಕರ ಮಾತು. ಈ ಚಿತ್ರದಲ್ಲಿ ನಾಯಕನಾಗಿ ಅಂಜನ್, ನಾಯಕಿಯಾಗಿ ಅಂಜಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳಿಗೆ ಓಂ ಪ್ರಕಾಶ್ ನಾಯ್ಕ ಸಂಗೀತ ನೀಡಿದ್ದಾರೆ.
ಚಿತ್ರಕ್ಕೆ ಎ.ಎಸ್.ರಾಜ್ ಮತ್ತು ಕೆ.ಪಿ.ಎಸ್.ಜಯ್‌ರಾಜ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಜಯ್‌ಅರಸ್, ರಮೇಶ್‌ಚಂದ್ರ, ಜಾನಕಿ, ಅಜಯ್‌ವಾರಿಯರ್ ಹಾಡಿದ್ದಾರೆ. “ಜಯ್ ಮ್ಯೂಸಿಕ್’ ಆಡಿಯೋ ಸಂಸ್ಥೆಯ ಮೂಲಕ ಚಿತ್ರದ ಹಾಡುಗಳು ಹೊರಬಂದಿವೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಅಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಟೇಗೌಡ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸೇರಿದಂತೆ ಇತರರು ಹಾಡುಗಳನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.