Advertisement

ಶಿರಸಿ ಟು ಮಾಯಾನಗರಿ…ಈ ಗೃಹಿಣಿ ಸಾಧನೆ ನಿಜಕ್ಕೂ ಸ್ಫೂರ್ತಿಯ ಸೆಲೆ

05:08 PM Aug 22, 2018 | Sharanya Alva |

ಮಲೆನಾಡಿನ ಶಿರಸಿ ಎಂಬ ಪಕ್ಕಾ ದೇಸಿ ಸೊಗಡಿನ ಊರಿನಿಂದ ಮುಂಬಯಿ ಎಂಬ ಮಾಯಾನಗರಿಗೆ ಹೋಗಿ ಅಲ್ಲಿ ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ನಿತ್ಯ ತರಗತಿಗಳಿಗೆ ಹಾಜರಾಗಿ ಎಂ.ಎ. ಪದವಿಯನ್ನು ಪಡೆದ ಗೃಹಿಣಿಯೊಬ್ಬರ ಸಾಧನೆಯ ಕಥೆಯಿದು. ಸಂಸಾರದ ನೊಗಕ್ಕೆ ಹೆಗಲನ್ನು ಕೊಟ್ಟ ಬಳಿಕ ಹೆಚ್ಚಿನ ಗೃಹಿಣಿಯರು ಗಂಡ-ಮನೆ-ಮಕ್ಕಳ ಜವಾಬ್ದಾರಿ ನಿಭಾಯಿಸುವುದರಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡುಬಿಟ್ಟಿರುತ್ತಾರೆ ಮತ್ತು ತಮ್ಮ ಆಸಕ್ತಿಯ ಕಡೆಗೆ ಗಮನವನ್ನೇ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಅಂತಹ ಅನೇಕ ಗೃಹಿಣಿಯರಿಗೆ ಸ್ಪೂರ್ತಿಯ ಸೆಲೆಯಾಗಬಲ್ಲ ವಿಷಯವೊಂದನ್ನು ಈ ಬಾರಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

Advertisement

ಇವರ ಹೆಸರು ಶೈಲಜಾ ಶಾಂತಾರಾಮ ಹೆಗ್ಡೆ, ಯಕ್ಷಗಾನ ತಾಳಮದ್ದಳೆಯಲ್ಲಿ ಬಹುದೊಡ್ಡ ಹೆಸರನ್ನು ಮಾಡಿದ್ದ ಕೆರೇಕೈ ಕೃಷ್ಣ ಭಟ್ಟರ ಮಗಳು ಮತ್ತು ಪ್ರಸ್ತುತ ತಾಳಮದ್ದಳೆ ಕ್ಷೇತ್ರದಲ್ಲಿ ಮಿಂಚುತ್ತಿರುವ ಕೆರೇಕೈ ಉಮಾಕಾಂತ ಭಟ್ಟ ಅವರ ಸಹೋದರಿ ಈಕೆ. ಯಡಹಳ್ಳಿಯಲ್ಲಿ ಪಿ.ಯು.ಸಿ. ಮುಗಿಸಿ ಶಿರಸಿಯಲ್ಲಿ ಡಿಗ್ರಿ ಮುಗಿಸಿ ಬಳಿಕ ಶಾಂತರಾಮ ಹೆಗಡೆಯವರೊಂದಿಗೆ ವಿವಾಹವಾಗಿ ಮಹಾನಗರಿ ಮುಂಬಯಿಗೆ ಹೋಗುವ ಅನಿವಾರ್ಯತೆ ಬಂದಿತು. ನಂತರ ಸಂಸಾರದ ಒತ್ತಡದಲ್ಲಿ ಮುಂದಕ್ಕೆ ಓದಬೇಕೆನ್ನುವ ಆಸೆ ಹಾಗೆಯೇ ಉಳಿಯಿತು.

ಉನ್ನತ ವ್ಯಾಸಂಗದ ಹಂಬಲ ಕರಗಲಿಲ್ಲ…


ಹೀಗಿದ್ದರೂ ಶೈಲಜಾ ಅವರಿಗೆ ಉನ್ನತ ವ್ಯಾಸಂಗವನ್ನು ಮಾಡಬೇಕೆನ್ನುವ ಹಂಬಲ ಮನದ ಮೂಲೆಯಲ್ಲಿ ಹಾಗೆಯೇ ಕುಳಿತುಬಿಟ್ಟಿತ್ತು. ಹೀಗಿರುತ್ತಾ ಅದೊಂದು ದಿನ ದೃಢ ನಿರ್ಧಾರಕ್ಕೆ ಬಂದವರಂತೆ ಶೈಲಜಾ ಅವರು ಸ್ನಾತಕೋತ್ತರ ಪದವಿ ಪಡೆದುಕೊಳ್ಳುವ ನಿರ್ಧಾರ ಮಾಡಿಯೇ ಬಿಟ್ಟರು, ಅದೂ ಅಂಚೆ ತೆರಪಿನ (Distance course) ಮೂಲಕವಲ್ಲ, ಬದಲಾಗಿ ಇವರ ಮನೆಯಿಂದ 20 ಕಿಲೋಮೀಟರ್ ದೂರದಲ್ಲಿದ್ದ ವಿಶ್ವವಿದ್ಯಾನಿಲಯಕ್ಕೆ ಪ್ರತೀದಿನ ರೈಲಿನಲ್ಲಿ ಸಾಗಿ ನೇರ ತರಗತಿಗಳಿಗೆ ಪ್ರವೇಶ ಪಡೆದು ನಿತ್ಯ ತರಗತಿಗಳಿಗೆ ಹಾಜರಾಗುವ ಮೂಲಕ.

ಮುಂಬಯಿಗೆ ಬಂದ ಬಳಿಕ ಇವರಿದ್ದಿದ್ದು ಮರಾಠಿಗರು ಮತ್ತು ಹಿಂದಿ ಭಾಷಿಕರ ಮಧ್ಯದಲ್ಲಿ. ಆದರೆ ಅಲ್ಲಿದ್ದ ಕನ್ನಡ ಸಂಘಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಶೈಲಜಾ ಅವರು ತನ್ನ ಮಾತೃಭಾಷೆಯ ಸಂಪರ್ಕವನ್ನು ಉಳಿಸಿ ಬೆಳೆಸಿಕೊಳ್ಳುತ್ತಾ ಸಾಗಿದರು. ಮುಂಬಯಿ ಮಹಾನಗರಕ್ಕೆ ಬಂದ ಹದಿನೈದು ವರ್ಷಗಳ ಬಳಿಕ ಇವರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಯನ್ನು ಬರೆದರು. ಈ ಸಂದರ್ಭದಲ್ಲಿ ಇವರ ಮಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದ. ಮಕ್ಕಳನ್ನು ಓದಿಸಿ ಅವರು ಮಲಗಿದ ಬಳಿಕ ಇವರು ರಾತ್ರಿಯಿಡೀ ಕುಳಿತು ಓದುತ್ತಿದ್ದರು. ಹೀಗೆ ಈ ಸಂದರ್ಭದಲ್ಲಿ ಶೈಲಜಾ ಅವರಿಗೆ ಹಗಲು-ರಾತ್ರಿ ಒಂದೇ ಆಗಿತ್ತು. ಅಲ್ಲಿಗೇ ಸುಮ್ಮನಾಗದ ಶೈಲಜಾ ಅವರು ಕರ್ನಾಟಕ ಸರಕಾರ ಹೊರನಾಡಿನ ಕನ್ನಡಿಗರಿಗೆ ಉನ್ನತ ವ್ಯಾಸಂಗಕ್ಕೆ ನೀಡುವ 25 ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ಪಡೆದು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಈ ಸಂದರ್ಭದಲ್ಲಿ ಅವರ ಮಗಳು ಎಸ್ಸೆಸ್ಸೆಲ್ಸಿಯಲ್ಲಿದ್ದಳು.


ಡಬಲ್ ಪಿ.ಜಿ. ಬಳಿಕ ಪಡೆದರು ಡಿ.ಲಿಟ್ ಪದವಿ

ಸಂಸ್ಕೃತ ಮತ್ತು ಕನ್ನಡದಲ್ಲಿ ಎಂ.ಎ.ಪದವಿಯನ್ನು ಪಡೆದ ಬಳಿಕ ಶೈಲಜಾ ಅವರಿಗೆ ಡಿ.ಲಿಟ್ ಪದವಿಯನ್ನು ಮಾಡಬೇಕು ಎಂದೆಣಿಸಿತು. ಅದಕ್ಕಾಗಿ ಅವರು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ‘ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳ ಕುರಿತು ಹಾಗೂ ತುಲನಾತ್ಮಕ ಅಧ್ಯಯನ’ ಎಂಬ ವಿಷಯದಲ್ಲಿ ಡಿ.ಲಿಟ್ ಪದವಿಯನ್ನು ಪಡೆದರು. ಇನ್ನು ಮುಂದೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಅಧ್ಯಯನಕ್ಕೆ ಇದೀಗ ಅವಕಾಶ ಕೋರಿದ್ದಾರೆ ಶೈಲಜಾ ಅವರು. ಬಹುಮುಖ ಪ್ರತಿಭೆಯ ಶೈಲಜಾ ಅವರು ತಾಳಮದ್ದಳೆ ಕಲಾವಿದೆಯೂ ಹೌದು.

Advertisement

ಮಾಹಿತಿ ಕೃಪೆ : ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next