ಗುವಾಹಟಿ : “ನಾನು ವಿಶ್ವಕಪ್ ತಂಡದಲ್ಲಿರುವ ಬಗ್ಗೆ ಯೋಚಿಸುತ್ತಿರಲಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಆಟವನ್ನು ಆನಂದಿಸುವುದು ನನ್ನ ಪ್ರಧಾನ ಧ್ಯೇಯವಾಗಿತ್ತು, ಪಂದ್ಯಾವಳಿಯಲ್ಲಿ ಅದನ್ನು ಮತ್ತೆ ಮಾಡಲು ಬಯಸುತ್ತೇನೆ” ಎಂದು ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಶನಿವಾರ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮೊದಲು,ದಿನೇಶ್ ಕಾರ್ತಿಕ್ ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಿದ 37ರ ಹರೆಯದ ಅಶ್ವಿನ್ ಅವರು, ”ನನ್ನ ಕೊನೆಯ ವಿಶ್ವಕಪ್ ಆಗಿರಬಹುದು. ನಾನು ಇದನ್ನು ಹೇಳುತ್ತಲೇ ಇದ್ದೆ, ಇದು ಭಾರತಕ್ಕಾಗಿ ನನ್ನ ಕೊನೆಯ ವಿಶ್ವಕಪ್ ಆಗಿರಬಹುದು” ಎಂದರು. ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಗಿದೆ.
”ಈ ಪಂದ್ಯಾವಳಿಯಲ್ಲಿ ಹೆಚ್ಚಿನ ಆಟಗಾರರಿಗೆ ಒತ್ತಡ ನಿಯಂತ್ರಣವು ಅತ್ಯಂತ ಮಹತ್ವದ್ದಾಗಿದೆ. ಉತ್ತಮ ಸ್ಥಳದಲ್ಲಿರುವುದು ಮತ್ತು ಆಟವನ್ನು ಆನಂದಿಸಲು ತರಬೇತಿಯು ನನ್ನನ್ನು ಉತ್ತಮ ಸ್ಥಾನದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಪಂದ್ಯಾವಳಿಯನ್ನು ಆನಂದಿಸಲು ಬಯಸುತ್ತೇನೆ. ಅದು ನನಗೆ ಮುಖ್ಯವಾಗಿದೆ” ಎಂದು ಅಶ್ವಿನ್ ಹೇಳಿದರು.
ಅಕ್ಷರ್ ಪಟೇಲ್ ಅವರು ಗಾಯಗೊಂಡ ಕಾರಣದಿಂದ ವಿಶ್ವಕಪ್ ತಂಡಕ್ಕೆ ಅಶ್ವಿನ್ ಅವರು ಕೊನೆ ಕ್ಷಣದಲ್ಲಿ ಆಯ್ಕೆಗೊಂಡಿದ್ದಾರೆ. ಸ್ಪಿನ್ನರ್‌ಗಳಿಗೆ ನೆರವಾಗುವ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮೊದಲ ಪಂದ್ಯವನ್ನು ಅ. 8 ರಂದು ಆಸ್ಟ್ರೇಲಿಯ ವಿರುದ್ಧ ಆಡಲಿದ್ದು, ಅಶ್ವಿನ್‌ಗೆ ತವರು ನೆಲದಲ್ಲಿ ಮಿಂಚುವ ಅವಕಾಶ ಸಿಗಬಹುದು.
ಅಶ್ವಿನ್ ಅವರು 2011 ಮತ್ತು 2015ರ ನಂತರ ಮೂರನೇ 50 ಓವರ್‌ಗಳ ವಿಶ್ವಕಪ್ ಆಡುತ್ತಿದ್ದಾರೆ.