Advertisement

World Cup Final; ವೀಕ್ಷಕರು ಮೌನಕ್ಕೆ ಶರಣು:ಕ್ಯಾಪ್ಟನ್‌ ಪ್ಯಾಟ್‌ ಕಮಿನ್ಸ್‌  ಫುಲ್‌ ಖುಷ್‌

12:03 AM Nov 21, 2023 | Team Udayavani |

ಅಹ್ಮದಾಬಾದ್‌: ಫೈನಲ್‌ ಪಂದ್ಯಕ್ಕೂ ಮೊದಲು ಆಸ್ಟ್ರೇಲಿಯದ ಪ್ಯಾಟ್‌ ಕಮಿನ್ಸ್‌ ಹೇಳಿದ್ದಿಷ್ಟು: “ಅಹ್ಮದಾಬಾದ್‌ನ ಒಂದು ಲಕ್ಷದ ಮೂವತ್ತು ಸಾವಿರದಷ್ಟು ವೀಕ್ಷಕರನ್ನು ಮೌನಕ್ಕೆ ಶರಣಾಗಿಸುವುದಕ್ಕಿಂತ ಮಿಗಿಲಾದ ಸಾಧನೆ ಬೇರೊಂದಿಲ್ಲ. ನಮ್ಮ ಪ್ರಯತ್ನ ಈ ನಿಟ್ಟಿನಲ್ಲಿ ಸಾಗುತ್ತದೆ…’
ಅರ್ಥಾತ್‌, ಭಾರತವನ್ನು ಮಣಿಸಿ ವಿಶ್ವಕಪ್‌ ಗೆಲ್ಲುವುದೇ ತಮ್ಮ ಗುರಿ ಎಂಬುದನ್ನು ಕಮಿನ್ಸ್‌ ಪರೋಕ್ಷವಾಗಿ ಹೇಳಿದ್ದರು. ಆದರೆ ಇದನ್ನು ಯಾರೂ ಗಂಭೀರವಾಗಿ ಸ್ವೀಕರಿಸಲಿಲ್ಲ. ಬಹುತೇಕ ಮಂದಿ ಜೋಕ್‌ ಆಗಿ ತೆಗೆದುಕೊಂಡರು. ಆದರೆ ರವಿವಾರ ರಾತ್ರಿ ಅಹ್ಮದಾಬಾದ್‌ ಸ್ಟೇಡಿಯಂನಲ್ಲಿ ವಾತಾವರಣ ಹೇಗಿತ್ತು ಎಂಬುದು ಈಗ ಇತಿಹಾಸ.

Advertisement

ಕೊಹ್ಲಿ ಔಟ್‌ ಆದ ಕ್ಷಣ
ಆಸ್ಟ್ರೇಲಿಯಕ್ಕೆ 6ನೇ ವಿಶ್ವಕಪ್‌ ತಂದಿತ್ತ ಬಳಿಕ ನಾಯಕ ಪ್ಯಾಟ್‌ ಕಮಿನ್ಸ್‌ ತಮ್ಮ “ಸೈಲೆನ್ಸ್‌ ಆಫ್ ಕ್ರೌಡ್‌’ ಹೇಳಿಕೆಯನ್ನೇ ಪ್ರಸ್ತಾವಿಸಿದ್ದಾರೆ. “ಕ್ರೀಸ್‌ ಆಕ್ರಮಿಸಿಕೊಂಡು ಇನ್ನಿಂಗ್ಸ್‌ ಬೆಳೆಸುತ್ತಿದ್ದ ವಿರಾಟ್‌ ಕೊಹ್ಲಿ ಔಟ್‌ ಆದೊಡನೆಯೇ ಇಡೀ ಸ್ಟೇಡಿಯಂನಲ್ಲಿ ಸಂಪೂರ್ಣ ಮೌನ ನೆಲೆಸಿದ್ದು ನನ್ನ ಪಾಲಿನ ಅತ್ಯಂತ ಸಂತೃಪ್ತಿಯ ಕ್ಷಣಗಳು’ ಎಂಬುದಾಗಿ ಕಮಿನ್ಸ್‌ ಹೇಳಿದರು.
“ಈ ವಿಶ್ವಕಪ್‌ ಗೆಲುವಿನ ಮೂಲಕ ನಮ್ಮೆಲ್ಲರ ಏಕದಿನ ಕ್ರಿಕೆಟ್‌ ಪ್ರೀತಿ ಮತ್ತೆ ಉತ್ಕಟಗೊಂಡಿದೆ. ಸುದೀರ್ಘ‌ ಚರಿತ್ರೆಯನ್ನು ಹೊಂದಿರುವ ವಿಶ್ವಕಪ್‌ ಕಳೆದೆರಡು ತಿಂಗಳಲ್ಲಿ ಅನೇಕ ರೋಮಾಂಚಕಾರಿ ಕತೆಗಳನ್ನು ತೆರೆದಿಟ್ಟಿತು. ನಾವಿಲ್ಲಿ ಕೆಲವು ಅಮೋಘ ಪಂದ್ಯಗಳನ್ನಾಡಿದೆವು’ ಎಂಬುದಾಗಿ ಕಮಿನ್ಸ್‌ ಹೇಳಿದರು.
ಕಳೆದ ಮಾರ್ಚ್‌ ತಿಂಗಳ ಭಾರತ ಪ್ರವಾಸದ ವೇಳೆ ತಾಯಿಯನ್ನು ಕಳೆದುಕೊಂಡ ಪ್ಯಾಟ್‌ ಕಮಿನ್ಸ್‌ ತುಸು ಅಧೀರರಾಗಿದ್ದರು. ಅನಂತರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌, ಆ್ಯಶಸ್‌ ಸರಣಿಯಲ್ಲಿ ತಂಡವನ್ನು ಮುನ್ನಡೆಸಿ ಯಶಸ್ಸಿನ ಮೆಟ್ಟಿಲೇರಿದರು. “ಕ್ಯಾಪ್ಟನ್‌ ಮಾರ್ವೆಲ್‌’ ಖ್ಯಾತಿಯ ಕಮಿನ್ಸ್‌ ಈಗ ಸಾಧನೆಯ ಉತ್ತುಂಗ ತಲುಪಿದ್ದಾರೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌
 ಆಸ್ಟ್ರೇಲಿಯ ಅತ್ಯಧಿಕ 23 ಸಲ ಐಸಿಸಿ ಟ್ರೋಫಿ ಪಂದ್ಯಾವಳಿಗಳಲ್ಲಿ ಚಾಂಪಿಯನ್‌ ಆಯಿತು. ಇದು ವನಿತಾ ತಂಡಗಳ ಸಾಧನೆಯನ್ನೂ ಒಳಗೊಂಡಿದೆ.
 ಆಸ್ಟ್ರೇಲಿಯ ತವರಿನ ತಂಡವನ್ನು ಮಣಿಸಿ ವಿಶ್ವಕಪ್‌ ಗೆದ್ದ ಕೇವಲ 2ನೇ ತಂಡವೆನಿಸಿತು. 1979ರಲ್ಲಿ ವೆಸ್ಟ್‌ ಇಂಡೀಸ್‌ ಆತಿಥೇಯ ಇಂಗ್ಲೆಂಡ್‌ಗೆ ಸೋಲುಣಿಸಿ ಚಾಂಪಿಯನ್‌ ಆಗಿತ್ತು.
 ರೋಹಿತ್‌ ಶರ್ಮ ವಿಶ್ವಕಪ್‌ ಒಂದರಲ್ಲಿ ಅತ್ಯಧಿಕ ರನ್‌ ಬಾರಿಸಿದ ನಾಯಕನೆನಿಸಿದರು (597). ಕಳೆದ ವಿಶ್ವಕಪ್‌ನಲ್ಲಿ ಕೇನ್‌ ವಿಲಿಯಮ್ಸನ್‌ 578 ರನ್‌ ಹೊಡೆದ ದಾಖಲೆ ಪತನಗೊಂಡಿತು.
 ಭಾರತ 11ನೇ ಹಾಗೂ 40ನೇ ಓವರ್‌ ನಡುವೆ ಕೇವಲ 2 ಬೌಂಡರಿ ಹೊಡೆಯಿತು. ಇದು ಈ ಪಂದ್ಯಾವಳಿಯ 11-40ನೇ ಓವರ್‌ ಅವಧಿಯಲ್ಲಿ ದಾಖಲಾದ ಅತೀ ಕಡಿಮೆ ಬೌಂಡರಿ. ಹಾಗೆಯೇ ಈ ಓವರ್‌ಗಳಲ್ಲಿ, ಈ ಟೂರ್ನಿಯಲ್ಲಿ ಭಾರತ ಮೊದಲ ಸಲ ಸಿಕ್ಸರ್‌ ಬಾರಿಸಲು ವಿಫ‌ಲವಾಯಿತು.
 ವಿರಾಟ್‌ ಕೊಹ್ಲಿ ವಿಶ್ವಕಪ್‌ನಲ್ಲಿ 2ನೇ ಅತ್ಯಧಿಕ ಅರ್ಧ ಶತಕ ಬಾರಿಸಿದರು (12). ಶಕಿಬ್‌ ಅಲ್‌ ಹಸನ್‌ 3ನೇ ಸ್ಥಾನಕ್ಕೆ ಇಳಿದರು (11). ದಾಖಲೆ ಸಚಿನ್‌ ಹೆಸರಲ್ಲಿದೆ (15).

Advertisement

Udayavani is now on Telegram. Click here to join our channel and stay updated with the latest news.

Next