Advertisement

Thiruvananthapuram ಇಂದು 2ನೇ ಟಿ20: ಭಾರತದ ಬೌಲರ್ಸ್  ಮುಂದೆ ಭಾರೀ ಸವಾಲು

12:02 AM Nov 26, 2023 | Team Udayavani |

ತಿರುವನಂತಪುರ: ರೋಚಕ ಹೋರಾಟ ಕಂಡ ವಿಶಾಖಪಟ್ಟಣ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ “ಸೂರ್ಯ’ನ ಶಾಖ ತಟ್ಟಿದ್ದು, ಯಂಗ್‌ ಇಂಡಿಯಾ ಇದೇ ಹುಮ್ಮಸ್ಸಿನಲ್ಲಿ ರವಿವಾರ ದ್ವಿತೀಯ ಪಂದ್ಯಕ್ಕೆ ಅಣಿಯಾಗಿದೆ. ಕೇರಳದ ರಾಜಧಾನಿ ತಿರುವನಂತಪುರದ “ಗ್ರೀನ್‌ಫೀಲ್ಡ್‌ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ನಲ್ಲಿ ಈ ಮುಖಾಮುಖಿ ಸಾಗಲಿದೆ. 2-0 ಮುನ್ನಡೆ ಸಾಧಿಸುವ ಗುರಿಯೊಂದಿಗೆ ಭಾರತ ಹೋರಾಟಕ್ಕಿಳಿದರೆ, ಆಸೀಸ್‌ ಮುಂದೆ ಸರಣಿ ಸಮಬಲದ ಒತ್ತಡವಿದೆ.

Advertisement

ವಿಶಾಖಪಟ್ಟಣದಂತೆ ತಿರುವನಂತ ಪುರ ಟ್ರ್ಯಾಕ್‌ನಲ್ಲೂ ರನ್‌ ಪ್ರವಾಹ ಹರಿಯುವ ಸಾಧ್ಯತೆ ಹೆಚ್ಚು. ಹೀಗಾಗಿ ಇದು ಕೂಡ ಬೌಲರ್‌ಗಳ ಪಾಲಿಗೆ ಕಂಟಕವಾದೀತೆಂದೇ ಭಾವಿಸಬೇಕಾ ಗುತ್ತದೆ. ಮುಖ್ಯವಾಗಿ, ಬರೀ ಯುವ ಹಾಗೂ ಅನನುಭವಿ ಬೌಲರ್‌ಗಳನ್ನೇ ಹೊಂದಿರುವ ಭಾರತದ ಪಾಲಿಗೆ ಭಾರೀ ಸವಾಲು ಎದುರಾಗುವುದರಲ್ಲಿ ಅನುಮಾನವಿಲ್ಲ.

ಆದರೆ ತಿರುವನಂತಪುರದಲ್ಲಿ ಸತತ ಮಳೆಯಾಗುತ್ತಿದೆ. ಶನಿವಾರ ಆಸ್ಟ್ರೇಲಿಯದ ಕ್ರಿಕೆಟಿಗರು ಒಂದು ಹಂತದ ಅಭ್ಯಾಸ ನಡೆಸಿದರೂ ಸಂಜೆ ಭಾರೀ ಮಳೆಯಾಗಿದೆ. ರವಿವಾರವೂ ಮಳೆಯ ಮುನ್ಸೂಚನೆ ಇದ್ದು, ಆಟಕ್ಕೆ ಅಡಚಣೆ ಆಗುವುದು ಖಚಿತ ಎನ್ನಲಾಗಿದೆ.

ಬೇಕಿದೆ ಬೌಲಿಂಗ್‌ ವೆರೈಟಿ
ವಿಶಾಖಪಟ್ಟಣ ಟ್ರ್ಯಾಕ್‌ನಲ್ಲಿ ಬೌಲರ್‌ಗಳು ಪರದಾಡಿದ್ದು ಇನ್ನೂ ಕಣ್ಮುಂದೆ ಇದೆ. ಇಲ್ಲಿ ಭಾರತದ ಬೌಲರ್‌ಗಳಷ್ಟೇ ಅಲ್ಲ, ಆಸ್ಟ್ರೇಲಿಯದ ಬೌಲರ್‌ಗಳೂ ಚೆನ್ನಾಗಿ ದಂಡಿಸಲ್ಪಟ್ಟರು. ಎರಡೂ ತಂಡಗಳು ಸೇರಿದಂತೆ 8 ಬೌಲರ್‌ಗಳಿಂದ ಹತ್ತಕ್ಕೂ ಹೆಚ್ಚಿನ ಸರಾಸರಿಯಲ್ಲಿ ರನ್‌ ಸೋರಿ ಹೋದುದೇ ಇದಕ್ಕೆ ಸಾಕ್ಷಿ. ಪ್ರವಾಸಿ ಕಡೆಯಿಂದ ಜೇಸನ್‌ ಬೆಹ್ರೆಂಡಾರ್ಫ್ ಭಾರತದ ಅಕ್ಷರ್‌ ಪಟೇಲ್‌ ಮತ್ತು ಮುಕೇಶ್‌ ಕುಮಾರ್‌ ಹೊರತುಪಡಿಸಿ ಉಳಿದವರಿಗೆ ರನ್‌ ನಿಯಂತ್ರಣ ಸಾಧ್ಯವಾಗಲಿಲ್ಲ. ಬೆಹ್ರೆಂಡಾರ್ಫ್ ಒಂದು ಮೇಡನ್‌ ಓವರ್‌ ಕೂಡ ಎಸೆದದ್ದು ಈ ಪಂದ್ಯದ ಹೈಲೈಟ್‌ ಎನ್ನಲಡ್ಡಿಯಿಲ್ಲ.

ಮೊದಲ ಟಿ20 ಪಂದ್ಯದ ಭಾರತದ ಪ್ರಧಾನ ಪೇಸ್‌ ಬೌಲರ್‌ಗಳಾದ ಅರ್ಷದೀಪ್‌ ಸಿಂಗ್‌ ಮತ್ತು ಪ್ರಸಿದ್ಧ್ ಕೃಷ್ಣ ಭಾರೀ ಧಾರಾಳಿಯಾದರು. ಕ್ರಮವಾಗಿ 10.25 ಮತ್ತು 12.50 ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟರು. ಲೆಗ್‌ಸ್ಪಿನ್ನರ್‌ ರವಿ ಬಿಷ್ಣೋಯಿ ಇನ್ನಷ್ಟು ದುಬಾರಿಯಾಗಿ ಗೋಚರಿಸಿದರು. ಇವರ ಓವರ್‌ಗೆ 13.50 ರನ್‌ ಸೋರಿ ಹೋಯಿತು.

Advertisement

ಟಿ20ಯಂಥ ಸ್ಫೋಟಕ ಕ್ರಿಕೆಟ್‌ನಲ್ಲಿ, ಅದೂ ಅಪ್ಪಟ ಬ್ಯಾಟಿಂಗ್‌ ಟ್ರ್ಯಾಕ್‌ ಮೇಲೆ ಬೌಲರ್‌ಗಳು ದಂಡಿಸಲ್ಪಡು ವುದು ಮಾಮೂಲು. ಆದರೆ ಇಂಥ ಸಂದರ್ಭದಲ್ಲಿ ಫ್ರಂಟ್‌ಲೆçನ್‌ ಬೌಲರ್ ತುಸು ವೆರೈಟಿ ತೋರುವುದು ಜಾಣತನ ಎನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಮುಕೇಶ್‌ ಕುಮಾರ್‌ ಶಾಬಾಸ್‌ ಎನಿಸಿಕೊಳ್ಳುತ್ತಾರೆ. ಇವರ ಬೌಲಿಂಗ್‌ನಲ್ಲಿ ಯಾರ್ಕರ್‌, ಬೌನ್ಸರ್‌, ಸ್ವಲ್ಪ ಮಟ್ಟಿಗೆ ಸ್ವಿಂಗ್‌… ಎಲ್ಲವನ್ನೂ ಕಾಣಬಹುದಿತ್ತು. ಮುಕೇಶ್‌ 4 ಓವರ್‌ಗಳಲ್ಲಿ ನೀಡಿದ್ದು 29 ರನ್‌ ಮಾತ್ರ. ಆದರೆ ಸ್ಟ್ರೈಕ್‌ ಬೌಲರ್‌ ಮುಕೇಶ್‌ ಕುಮಾರ್‌ ಅವರನ್ನು 5ನೇ ಬೌಲರ್‌ ರೂಪದಲ್ಲಿ ದಾಳಿಗೆ ಇಳಿಸಲಾಗಿತ್ತು. 2ನೇ ಟಿ20 ಪಂದ್ಯದಲ್ಲಿ ಇವರಿಗೆ ಭಡ್ತಿ ಸಿಗಬಹುದೇ ಎಂಬುದನ್ನು ಕಾದು ನೋಡಬೇಕು.

ಭಾರತದ ಚೇಸಿಂಗ್‌ ದಾಖಲೆ
ವಿಶಾಖಪಟ್ಟಣ ಪಂದ್ಯ ಬ್ಯಾಟ್ಸ್‌ ಮನ್‌ಗಳ ಪಾಲಿಗೆ ಹಬ್ಬವಾಗಿತ್ತು. ಯುವ ಆಟಗಾರರನ್ನೇ ಹೊಂದಿದ್ದ ಭಾರತವಿಲ್ಲಿ ಚೇಸಿಂಗ್‌ ದಾಖಲೆ ನಿರ್ಮಿಸಿದ್ದೇ ಇದಕ್ಕೆ ಸಾಕ್ಷಿ. 8ಕ್ಕೆ 209 ರನ್‌ ಎನ್ನುವುದು ಟೀಮ್‌ ಇಂಡಿಯಾದ ಅತ್ಯಧಿಕ ಮೊತ್ತದ ಯಶಸ್ವಿ ಚೇಸಿಂಗ್‌ ಆಗಿದೆ. ಹಾಗೆಯೇ ಅತ್ಯಧಿಕ 5 ಸಲ 200 ಪ್ಲಸ್‌ ಮೊತ್ತವನ್ನು ಬೆನ್ನಟ್ಟಿ ಗೆದ್ದ ದಾಖಲೆಯನ್ನೂ ಭಾರತ ಬರೆಯಿತು.

ವಿಶ್ವಕಪ್‌ನಲ್ಲಿ ಘೋರ ವೈಫ‌ಲ್ಯ ಅನುಭವಿಸಿದ ಸೂರ್ಯಕುಮಾರ್‌ ಯಾದವ್‌ ಇಲ್ಲಿ ಮ್ಯಾಚ್‌ ವಿನ್ನರ್‌ ಆದದ್ದು, ನಾಯಕನಾಗಿ ಮೊದಲ ಪಂದ್ಯ ಗೆದ್ದದ್ದೆಲ್ಲ ಭಾರತದ ಪಾಲಿನ ಖುಷಿಯ ಸಂಗತಿ. ಫೈನಲ್‌ನಲ್ಲಿ ಸೂರ್ಯ ಇದೇ ಆಟವನ್ನು ಆಡಿದ್ದೇ ಆದರೆ ಫ‌ಲಿತಾಂಶವೇ ಬದಲಾಗುತ್ತಿತ್ತು ಎಂಬುದು ಬಹುತೇಕ ಮಂದಿಯ ಅಭಿಪ್ರಾಯ. ಸದ್ಯದ ಮಟ್ಟಿಗೆ ಸೂರ್ಯ “ಕೇವಲ ಟಿ20 ಆಟಗಾರ’ ಎಂಬುದನ್ನು ಸಾಬೀತುಪಡಿಸಿದ ಪಂದ್ಯವಿದು.

ಇಶಾನ್‌ ಕಿಶನ್‌ ಕೂಡ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶಿಸಿದರು. ಸೂರ್ಯ-ಇಶಾನ್‌ ಜೋಡಿ ಭರ್ತಿ 10 ಓವರ್‌ಗಳಲ್ಲಿ ದಾಖಲಿಸಿದ 112 ರನ್‌ ಜತೆಯಾಟ ಭಾರತದ ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಯಶಸ್ವಿ ಜೈಸ್ವಾಲ್‌ ಮತ್ತು ರಿಂಕು ಸಿಂಗ್‌ ಮತ್ತಿಬ್ಬರು ಬ್ಯಾಟಿಂಗ್‌ ಸಾಹಸಿಗರು. ಅಂತಿಮ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ರಿಂಕು ದೊಡ್ಡ ಹೀರೋ ಎನಿಸಿದರು.

ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಗಟ್ಟಿಮುಟ್ಟಾದ ಆಡಿಪಾಯ ನಿರ್ಮಿಸುವಲ್ಲಿ ಭಾರತ ವಿಫ‌ಲವಾದುದೊಂದು ಹಿನ್ನಡೆ. ರುತುರಾಜ್‌ ಗಾಯಕ್ವಾಡ್‌ ಒಂದೂ ಎಸೆತ ಎದುರಿಸದೆ ರನೌಟ್‌ ಆಗಿ ನಿರ್ಗಮಿಸಿದ್ದು ದುರದೃಷ್ಟ. ಹಾಗೆಯೇ ತಿಲಕ್‌ ವರ್ಮ ಮೇಲೂ ನಿರೀಕ್ಷೆಯ ಭಾರ ಇದೆ. ಒಟ್ಟಾರೆ 2024ರ ಟಿ20 ವಿಶ್ವಕಪ್‌ಗೆ ತಂಡವೊಂದನ್ನು ಕಟ್ಟಲು ಇಲ್ಲಿನ ಸಾಧನೆ ಮಹತ್ವದ್ದಾಗಲಿದೆ ಎಂಬುದನ್ನು “ಯಂಗ್‌ ಇಂಡಿಯಾ’ ಸವಾಲಾಗಿ ಪರಿಗಣಿಸಬೇಕಿದೆ.

ಆಸ್ಟ್ರೇಲಿಯದ ಬ್ಯಾಟಿಂಗ್‌ ಸಾಹಸ
ಆಸ್ಟ್ರೇಲಿಯ ಮೂರೇ ವಿಕೆಟಿಗೆ 208 ರನ್‌ ಬಾರಿಸಿ ತನ್ನ ಬ್ಯಾಟಿಂಗ್‌ ಸಾಮರ್ಥ್ಯವನ್ನು ತೆರೆದಿರಿಸಿತು. ವಿಶ್ವಕಪ್‌ನಲ್ಲಿ ಕೀಪಿಂಗ್‌ ನಡೆಸಿದ್ದ ಜೋಶ್‌ ಇಂಗ್ಲಿಸ್‌ ಇಲ್ಲಿ ಬ್ಯಾಟಿಂಗ್‌ ಜೋಶ್‌ ತೋರಿಸಿ ಶತಕದ ಆಟವಾಡಿದರು. ನಿಧಾನ ಗತಿಯ ಆಟಗಾರ ಸ್ಟೀವನ್‌ ಸ್ಮಿತ್‌ ಆರಂಭಿಕನಾಗಿ ಇಳಿದು ಅರ್ಧ ಶತಕದ ಕೊಡುಗೆ ಸಲ್ಲಿಸಿದರು. ಇವರಿಬ್ಬರ 130 ರನ್‌ ಜತೆಯಾಟ ಆಸೀಸ್‌ನ ಬೃಹತ್‌ ಮೊತ್ತಕ್ಕೆ ಕಾರಣವಾಯಿತು.
ವಿಶ್ವಕಪ್‌ ಹೀರೋಗಳಾದ ಟ್ರ್ಯಾವಿಸ್‌ ಹೆಡ್‌, ಆ್ಯಡಂ ಝಂಪ ಕೂಡ ಈ ತಂಡದಲ್ಲಿದ್ದಾರೆ. ಸರಣಿಯ ಒಂದು ಹಂತದಲ್ಲಿ ಇವರು ಕಣಕ್ಕಿಳಿಯಲಿದ್ದಾರೆ ಎಂಬ ಮುನ್ನೆಚ್ಚರಿಕೆ ನಮ್ಮದಾಗಿರ
ಬೇಕು. ಹಾಗೆಯೇ ಭಾರತದಂತೆ ಆಸ್ಟ್ರೇಲಿಯದ ಬೌಲಿಂಗ್‌ನಲ್ಲೂ ಬಹ ಳಷ್ಟು ಸುಧಾರಣೆ ಆಗಬೇಕಿದೆ.

 ಆರಂಭ: ರಾತ್ರಿ 7.00
 ಪ್ರಸಾರ: ಸ್ಪೋರ್ಟ್ಸ್ 18

ಸಂಭಾವ್ಯ ತಂಡಗಳು

ಭಾರತ: ರುತುರಾಜ್‌ ಗಾಯಕ್ವಾಡ್‌, ಯಶಸ್ವಿ ಜೈಸ್ವಾಲ್‌, ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌ (ನಾಯಕ), ತಿಲಕ್‌ ವರ್ಮ, ರಿಂಕು ಸಿಂಗ್‌, ಅಕ್ಷರ್‌ ಪಟೇಲ್‌, ರವಿ ಬಿಷ್ಣೋಯಿ, ಅರ್ಷದೀಪ್‌ ಸಿಂಗ್‌, ಮುಕೇಶ್‌ ಕುಮಾರ್‌, ಪ್ರಸಿದ್ಧ್ ಕೃಷ್ಣ.

ಆಸ್ಟ್ರೇಲಿಯ: ಮ್ಯಾಥ್ಯೂ ಶಾರ್ಟ್‌, ಸ್ಟೀವನ್‌ ಸ್ಮಿತ್‌, ಜೋಶ್‌ ಇಂಗ್ಲಿಸ್‌, ಆರನ್‌ ಹಾರ್ಡಿ, ಮಾರ್ಕಸ್‌ ಸ್ಟೋಯಿನಿಸ್‌, ಟಿಮ್‌ ಡೇವಿಡ್‌, ಮ್ಯಾಥ್ಯೂ ವೇಡ್‌ (ನಾಯಕ), ಸೀನ್‌ ಅಬೋಟ್‌, ನಥನ್‌ ಎಲ್ಲಿಸ್‌, ಜೇಸನ್‌ ಬೆಹ್ರೆಂಡಾರ್ಫ್, ತನ್ವೀರ್‌ ಸಂಘಾ.

Advertisement

Udayavani is now on Telegram. Click here to join our channel and stay updated with the latest news.

Next