ತೀರ್ಥಹಳ್ಳಿ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಪಟ್ಟಣದ ಎಂ. ಪುರುಷೋತ್ತಮ ರಾವ್ ಮುಖ್ಯ ಬಸ್ ನಿಲ್ದಾಣ ಮಾತ್ರ ಸೋರುವ ಮೂಲಕ ಎಲ್ಲರ ಗಮನ ಸೆಳೆಯತೊಡಗಿದೆ.
ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮುಖ್ಯ ಬಸ್ ನಿಲ್ದಾಣದಲ್ಲಿ ಶಿಟ್ ನಲ್ಲಿ ನೀರು ಸೋರುತ್ತಿದ್ದು, ಒಳಗಡೆ ಛತ್ರಿ ಬಿಡಿಸಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆ ಬಂತೆಂದರೆ ಸಂಚಾರಿ ನಿಯಂತ್ರಕರ ಕೊಠಡಿಯಲ್ಲಂತೂ ನೀರು ತುಂಬಿಕೊಂಡಿರುತ್ತದೆ. ನಿಲ್ದಾಣದಲ್ಲಿರುವ ವಿಶ್ರಾಂತಿ ಕೊಠಡಿಯಲ್ಲೂ ನೀರು ನಿಂತಿರುವುದರಿಂದ ವಿಶ್ರಾಂತಿ ಮಾಡಲು ಹೋದವರಿಗೆ ವಾಂತಿ ಬರುವಂತಹ ಸ್ಥಿತಿಯಿದೆ.
ಮುಖ್ಯ ಬಸ್ ನಿಲ್ದಾಣದ ಪಿಲ್ಲರ್ ಕಂಬ ಗೋಡೆಗಳು ನೀರು ಸೊರಿಕೆಯಿಂದ ಅಲ್ಲಲ್ಲಿ ಬಿರುಕು ಬಿಟ್ಟಿವೆ. ಪ್ರಯಾಣಿಕರು ಮಾತ್ರವಲ್ಲದೆ ಸಿಬ್ಬಂದಿಗಳು, ಬಸ್ ಕಂಡಕ್ಟರ್, ಡ್ರೈವರ್ ಕೂಡ ಭಯಪಟ್ಟುಕೊಂಡೆ ನಿತ್ಯ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲಿದೆ.
ರಾತ್ರಿ ಈ ಸ್ಥಳದಲ್ಲಿ ಹಿಂಡು-ಹಿಂಡು ನಾಯಿಗಳ ಮತ್ತು ಬಿಡಾಡಿ ದನಗಳ ಕಾಟ ಕಂಡು ಬಂದಿದೆ. ಯಾವ ಸಮಯದಲ್ಲಿ ಯಾವುದೇ ಅನಾಹುತ ಆದಲ್ಲಿ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಸೋರುತ್ತಿರುವ ಈ ಬಸ್ ನಿಲ್ದಾಣವನ್ನು ದುರಸ್ತಿಗೊಳಿಸಿ ಹೊಸ ಕಾಯಕಲ್ಪವನ್ನು ನೀಡಬೇಕೆಂದು ಸಾರ್ವಜನಿಕರು ಈ ಮೂಲಕ ಮನವಿ ಮಾಡಿದ್ದಾರೆ.