Advertisement

17ರ ಬಳಿಕ ಪರಿಸ್ಥಿತಿ ಏನು? : ಲಾಕ್ ಡೌನ್‌ ವಿಸ್ತರಣೆಗೂ ಒಲವು ವ್ಯಕ್ತ

08:19 AM May 17, 2020 | Hari Prasad |

ಹೊಸದಿಲ್ಲಿ: ಕೋವಿಡ್ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಮೂರನೇ ಹಂತದ ಲಾಕ್‌ಡೌನ್‌ ರವಿವಾರ (ಮೇ 17) ಸಮಾಪ್ತಿಯಾಗಲಿದೆ.

Advertisement

ಇದರ ನಡುವೆಯೇ, ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ, ಸೋಮವಾರದ ಅನಂತರ ಏನಾಗಬಹುದು? ನಿರ್ಬಂಧ ವಿಸ್ತರಣೆಯಾಗುತ್ತದೋ ಅಥವಾ ರವಿವಾರಕ್ಕೇ ಕೊನೆಯಾಗುತ್ತದೋ ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ.

ಇತ್ತೀಚೆಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಅವರು ನಡೆಸಿದ್ದ 6 ಗಂಟೆಗಳ ವೀಡಿಯೋ ಸಂವಾದದ ಬಳಿಕ ಲಾಕ್‌ಡೌನ್‌ ವಿಚಾರದಲ್ಲಿ ನಿರ್ಧಾರಗಳನ್ನು 15ರಂದು ತಿಳಿಸುವಂತೆ ಮೋದಿ ಸೂಚಿಸಿದ್ದರು. ಅದರಂತೆ, ಎಲ್ಲ ರಾಜ್ಯಗಳೂ ತಮ್ಮ ಅಭಿಪ್ರಾಯಗಳು, ಬೇಡಿಕೆಗಳನ್ನು ಶುಕ್ರವಾರ ಕೇಂದ್ರ ಸರಕಾರದ ಮುಂದಿಟ್ಟಿವೆ.

ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಗುಜರಾತ್‌, ದಿಲ್ಲಿ ಸಹಿತ ಕೆಲವು ರಾಜ್ಯಗಳು ನಿರ್ಬಂಧವನ್ನು ಬಹುತೇಕ ತೆರವುಗೊಳಿಸುವಂತೆ ಮನವಿ ಮಾಡಿವೆ. ಪಂಜಾಬ್‌, ಅಸ್ಸಾಂ, ಬಿಹಾರ, ಒಡಿಶಾದಂಥ ಕೆಲವು ರಾಜ್ಯಗಳು ಲಾಕ್‌ಡೌನ್‌ ವಿಸ್ತರಣೆ ಮಾಡುವುದೇ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿವೆ.

ಮಹಾರಾಷ್ಟ್ರ: ಇಡೀ ದೇಶದಲ್ಲೇ ಅತಿ ಹೆಚ್ಚು ಸೋಂಕಿತರಿರುವ ಹಾಗೂ ಅತಿ ಹೆಚ್ಚು ಸಾವು ಕಂಡ ರಾಜ್ಯವಾದ ಮಹಾರಾಷ್ಟ್ರವು ಸದ್ಯಕ್ಕೆ ಲಾಕ್‌ಡೌನ್‌ ತೆರವುಗೊಳಿಸದೇ ಇರುವುದೇ ಒಳಿತು ಎಂದು ಭಾವಿಸಿದೆ. ಮುಂಬಯಿಯೊಂದರಲ್ಲೇ 16 ಸಾವಿರ ಪ್ರಕರಣಗಳು ವರದಿಯಾಗಿರುವ ಕಾರಣ, ಮುಂಬಯಿ ಸಹಿತ ಹಲವು ಪ್ರದೇಶಗಳಲ್ಲಿ ನಿರ್ಬಂಧ ಮುಂದುವರಿಯಲಿದೆ ಎಂದು ರಾಜ್ಯ ಸರಕಾರ ಗುರುವಾರ ಘೋಷಿಸಿದೆ.

Advertisement

ಈ ಕುರಿತು ಮಾತನಾಡಿರುವ ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ, ಮುಂಬಯಿ, ಥಾಣೆ, ಪುಣೆ, ಮಾಲೇಗಾಂವ್‌, ಔರಂಗಾಬಾದ್‌ ಸಹಿತ ಪ್ರಮುಖ ನಗರಗಳಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದು, ಲಾಕ್‌ಡೌನ್‌ ವಿಸ್ತರಣೆ ಮಾಡದೇ ಬೇರೆ ದಾರಿಯಿಲ್ಲ. ಜನರ ಆರೋಗ್ಯವೇ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ. ಇನ್ನು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ಯಾಕೇಜ್‌ ಘೋಷಿಸುವ ಕುರಿತು ಚಿಂತನೆ ನಡೆದಿದೆ ಎಂದೂ ಹೇಳಿದ್ದಾರೆ.

ದಿಲ್ಲಿ: ನಿರ್ಬಂಧ ತೆರವು ಕುರಿತು ದಿಲ್ಲಿಯ ನಾಗರಿಕರಿಂದಲೇ ಪ್ರತಿಕ್ರಿಯೆ ಕೋರಿದ್ದ ಸಿಎಂ ಅರವಿಂದ ಕೇಜ್ರಿವಾಲ್, ಪ್ರತಿಕ್ರಿಯೆಗಳು ಬಂದ ಬಳಿಕ ಕಂಟೈನ್‌ಮೆಂಟ್‌ ವಲಯ ಹೊರತುಪಡಿಸಿ ಉಳಿದ ಕಡೆ ಕೆಲವು ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸುವ ಮಾತುಗಳನ್ನಾಡಿದ್ದಾರೆ.

ಕೇರಳ: ಆದಾಯಕ್ಕೆ ಹೆಚ್ಚಾಗಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಕೇರಳವು ಮೆಟ್ರೋ ಸೇವೆ, ಸ್ಥಳೀಯ ರೈಲು ಗಳು, ದೇಶೀಯ ವಿಮಾನಗಳು, ರೆಸ್ಟಾರೆಂಟ್‌ ಹಾಗೂ ಹೋಟೆಲ್‌ ಗಳು ತೆರೆಯಲು ಒಲವು ವ್ಯಕ್ತಪಡಿಸಿದೆ.
ದೇಶದ ಮೊದಲ 3 ಪ್ರಕರಣಗಳನ್ನು ಕಂಡ ರಾಜ್ಯವಾದ ಕೇರಳವು, ಸದ್ಯಕ್ಕೆ ಕೋವಿಡ್ ವೈರಸ್ ಗೆ ಕಡಿವಾಣ ಹಾಕುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಹೀಗಾಗಿ, ನಿರ್ಬಂಧ ತೆರವುಗೊಳಿಸುವುದು ರಾಜ್ಯದ ಆಗ್ರಹವಾಗಿದೆ.

ಕರ್ನಾಟಕ: ವೈರಸ್‌ ವ್ಯಾಪಿಸುವುದಕ್ಕೆ ಕಡಿವಾಣ ಹಾಕುವ ಸಲುವಾಗಿ ಸಾರ್ವಜನಿಕ ಸ್ಥಳಗಳು ಮುಚ್ಚಿಯೇ ಇದ್ದರೂ, ರೆಸ್ಟಾರೆಂಟ್‌, ಹೊಟೇಲ್‌, ಜಿಮ್‌ ನಂಥ ಚಟುವಟಿಕೆಗಳನ್ನು ಆರಂಭಿಸುವುದು ಉತ್ತಮ ಎಂಬ ಅಭಿಪ್ರಾಯವನ್ನು ಕರ್ನಾಟಕ ಸಿಎಂ ಬಿ.ಎಸ್‌. ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ಕಳೆದ ವಾರವಷ್ಟೇ ರಾಜ್ಯದಲ್ಲಿ ಪಬ್‌ ಹಾಗೂ ಬಾರ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ತಮಿಳುನಾಡು: ಈ ರಾಜ್ಯ ಕೂಡ ಕಂಟೈನ್‌ಮೆಂಟ್ ವಲಯ ಹೊರತುಪಡಿಸಿ ಉಳಿದೆಡೆ ಆರ್ಥಿಕ ಚಟುವಟಿಕೆ ಆರಂಭಿಸಬೇಕು ಎಂದು ಒತ್ತಾಯಿಸಿದೆ. ಆದರೆ, ಕಳೆದ ಕೆಲ ದಿನಗಳಿಂದೀಚೆಗೆ ಇಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಕಾರಣ ಸದ್ಯಕ್ಕೆ ನಿರ್ಬಂಧ ಸಡಿಲಿಸುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಯೂ ಮೂಡುತ್ತದೆ.

ಆದರೆ, ವೈರಸ್‌ ಯಾವ ಪ್ರದೇಶದಲ್ಲಿ ಹೆಚ್ಚು ವ್ಯಾಪಿಸುತ್ತಿದೆ ಎಂಬುದನ್ನು ಗುರುತಿಸುವಲ್ಲಿ ನಾವು ಯಶಸ್ವಿಯಾಗಿದ್ದು, ಸೋಮವಾರದಿಂದ ಅಂಗಡಿ – ಮುಂಗಟ್ಟುಗಳು, ಖಾಸಗಿ ಸಂಸ್ಥೆಗಳ ಕೆಲಸದ ಅವಧಿ ಹೆಚ್ಚಳದಂಥ ಪ್ರಮುಖ ಸಡಿಲಿಕೆ ಕ್ರಮ ಘೋಷಿಸಲಾಗುತ್ತದೆ ಎಂದು ಇಲ್ಲಿನ ಸರಕಾರ ಹೇಳಿದೆ.

ಗುಜರಾತ್‌: ಇಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ಸಮೀಪಿಸಿದ್ದರೂ, ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಪುನಾರಂಭಿಸುವ ಅನಿವಾರ್ಯತೆಯಿದೆ ಎಂದು ಸರಕಾರ ಹೇಳಿಕೊಂಡಿದೆ. ಹೀಗಾಗಿ ಕೆಲವೊಂದು ಸಡಿಲಿಕೆಗಳೊಂದಿಗೆ ಲಾಕ್‌ ಡೌನ್‌ ಮುಂದುವರಿಯಲಿದೆ. ಕಂಟೈನ್‌ಮೆಂಟ್‌ ವಲಯಗಳಲ್ಲಿ ಕಠಿನ ನಿರ್ಬಂಧ ಇರುತ್ತದೆ.

ಉತ್ತರಪ್ರದೇಶ: ಕೆಂಪು ವಲಯಗಳಲ್ಲಿ ಲಾಕ್‌ ಡೌನ್‌ ಮುಂದುವರಿಯಲಿದೆ. ಆದರೆ, ಸೀಲ್‌ ಡೌನ್‌ ಆದ ವಲಯ ಹೊರತುಪಡಿಸಿ ಕೆಂಪು ವಲಯದ ಇತರೆ ಪ್ರದೇಶಗಳಲ್ಲಿ ಮೂರನೇ ಒಂದರಷ್ಟು ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಕಿತ್ತಳೆ ಮತ್ತು ಹಸುರು ವಲಯಗಳಲ್ಲಿ ಎಲ್ಲ ಚಟುವಟಿಕೆಗಳಿಗೂ ಷರತ್ತುಬದ್ಧ ಅನುಮತಿಯಿರುತ್ತದೆ ಎಂದು ಸರಕಾರ ಹೇಳಿದೆ.

ಉಳಿದ ರಾಜ್ಯಗಳ ವಾದವೇನು?
ಬಿಹಾರ, ಝಾರ್ಖಂಡ್‌, ಒಡಿಶಾ ರಾಜ್ಯಗಳು ಲಾಕ್‌ಡೌನ್‌ ವಿಸ್ತರಣೆಯಾಗಬೇಕು ಎಂದಿವೆ. ಈ ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ವಲಸೆ ಕಾರ್ಮಿಕರ ಆಗಮನದಿಂದಾಗಿ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.

ಇಂಥ ಸ್ಥಿತಿಯಲ್ಲಿ ಲಾಕ್‌ ಡೌನ್‌ ತೆರವುಗೊಳಿಸುವುದು ಸಮಂಜಸವಲ್ಲ ಎನ್ನುವುದು ಈ ರಾಜ್ಯಗಳ ವಾದ.
ಪಂಜಾಬ್‌, ಹರಿಯಾಣ ಹಾಗೂ ಅಸ್ಸಾಂ ಕೂಡ ಇದೇ ರಾಜ್ಯಗಳ ಸಾಲಿಗೆ ಸೇರಿದ್ದು, ಮೇ 31ರವರೆಗೂ ನಿರ್ಬಂಧ ಮುಂದುವರಿಯಲಿ ಎಂದು ಕೇಂದ್ರಕ್ಕೆ ಮನವಿ ಮಾಡಿವೆ. ಇದೇ ವೇಳೆ ಮಿಜೋರಾಂ ಮಾಸಾಂತ್ಯದವರೆಗೆ ಲಾಕ್‌ ಡೌನ್‌ ವಿಸ್ತರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next