ಉಡುಪಿ: ಪರ್ಯಾಯ ಹಿಂದೂ ರಾಜಕೀಯ ಶಕ್ತಿಯ ಚಿಂತನೆ ಆರಂಭವಾಗಿದೆ. ಈ ಬಗ್ಗೆ ಎಲ್ಲ ಸ್ವಾಮೀಜಿ ಗಳ ಒಪ್ಪಿಗೆ ಇದ್ದು, ಶೀಘ್ರವೇ ಬೆಂಗಳೂರಿನಲ್ಲಿ ಹಿಂದೂಗಳ ಸಭೆ ಕರೆದು ನಿರ್ಧರಿಸಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದು ಅನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಣಿಪಾಲದಲ್ಲೂ ಸುದ್ದಿ ಗಾರರ ಜತೆ ಮಾತನಾಡಿದರು.
ಎಸ್‌ಡಿಪಿಐ, ಪಿಎಫ್ಐ ಬ್ಯಾನ್ ಮಾಡುವ ಬಗ್ಗೆ ಆ. 5ರಂದು ಮುಖ್ಯಮಂತ್ರಿಗಳು ಸಹಿತ ಎಲ್ಲ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಲಾಗುವುದು. ಆಡಳಿತ ಪಕ್ಷವಾದ ಬಿಜೆಪಿ ಯವರೇ ರಾಜೀನಾಮೆ ನೀಡುತ್ತಿರುವುದು ದೊಡ್ಡ ಅವಮಾನ. ಯೋಗ್ಯ ಕ್ರಮ ಕೈಕೊಂಡರೆ 2023ರಲ್ಲಿ ಬಿಜೆಪಿಗೆ ಒಳ್ಳೆಯ ಫಲಿತಾಂಶ ಸಿಕ್ಕೀತು ಎಂದರು.
ಶ್ರೀರಾಮ ಸೇನೆಗೆ ಯಾಕೆ ನಿರ್ಬಂಧ
ಕಾಪು: ಬೆಳ್ಳಾರೆಗೆ ಹೋಗಲು ಬಿಜೆಪಿ ನಾಯಕರ ಸಹಿತ ಇತರ ಹಿಂದೂ ನಾಯಕರಿಗೆ ಅವಕಾಶ ಕೊಡುತ್ತಿದ್ದು, ಶ್ರೀರಾಮ ಸೇನೆ ಸಂಘಟನೆಗೆ ಮಾತ್ರ ನಿರ್ಬಂಧ ಯಾಕೆ ? ನಾವು ಮಾಡಿರುವ ಅಪರಾಧವಾದರೂ ಏನು ಎನ್ನುವುದನ್ನು ಸರಕಾರ ಬಹಿರಂಗ ಪಡಿಸಬೇಕಿದೆ ಎಂದು ಮುತಾಲಿಕ್ ಅವರು ಕಾಪುವಿನಲ್ಲಿ ಸಂಘಟನೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ವೇಳೆ ಹೇಳಿದ್ದಾರೆ.
ನನ್ನ ಮೇಲೆ 109 ಪ್ರಕರಣಗಳಿದ್ದವು. ಈಗ 11 ಪ್ರಕರಣಗಳಿವೆ. 10 ಜಿಲ್ಲೆಗಳಲ್ಲಿ ಗಡಿಪಾರು ಮಾಡಲಾಗಿದೆ. ದ. ಕ. 20ನೇ ಜಿಲ್ಲೆ. ಇಲ್ಲಿಯೂ ನಿರ್ಬಂಧ ಹೇರಲಾಗಿದೆ. ಈ ಮೂಲಕ ಹಿಂದುತ್ವವನ್ನು ನಿರ್ಬಂಧಿಸಲಾಗಿದೆ ಎಂದರು.