Advertisement

ರಾಜ್ಯಕ್ಕೊಂದೇ ಶೈಕ್ಷಣಿಕ ಕ್ಯಾಲೆಂಡರ್‌ಗೆ ಚಿಂತನೆ

08:28 AM May 08, 2020 | Sriram |

ಬೆಂಗಳೂರು: ರಾಜ್ಯದ ಎಲ್ಲ ವಿಶ್ವ ವಿದ್ಯಾನಿಲಯಗಳಲ್ಲಿ ಏಕರೂಪ ಶೈಕ್ಷಣಿಕ ಕ್ಯಾಲೆಂಡರ್‌ ರೂಪಿಸಲು ಸರಕಾರ ಮುಂದಾಗಿದೆ.

Advertisement

ಕೋವಿಡ್- 19 ಭೀತಿಯಿಂದಾಗಿ ರಾಜ್ಯದ ವಿ.ವಿ. ಮತ್ತು ಪದವಿ, ಸ್ನಾತಕೋತ್ತರ ತರಗತಿಗಳು ಆನ್‌ಲೈನ್‌ ಮೂಲಕ ನಡೆಯುತ್ತಿವೆ. ಯಾವುದೇ ವಿ.ವಿ. ಈವರೆಗೂ ಪರೀಕ್ಷೆ ನಡೆಸಿಲ್ಲ. ಈ ಮಧ್ಯೆ ಯುಜಿಸಿಯು ಮುಂದಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಸಲಹೆಯ ರೂಪದಲ್ಲಿ ನೀಡಿದೆ.

ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಪ್ರಸಕ್ತ ಸಾಲಿನ ಪರೀಕ್ಷೆ, ಮುಂದಿನ ಶೈಕ್ಷಣಿಕ ವರ್ಷದ ಆರಂಭ ಮತ್ತು ಶೈಕ್ಷಣಿಕ ವೇಳಾಪಟ್ಟಿ ಕುರಿತಾಗಿ ತಜ್ಞರಿಂದ ವರದಿ ಪಡೆದಿದೆ.ಯುಜಿಸಿ ಸೂಚಿಸಿರುವ ನಿಯಮಾವಳಿ ಅಳವಡಿಸಿ ಮುಂದಿನ ವರ್ಷದಿಂದ ಏಕ ರೂಪದ ಶೈಕ್ಷಣಿಕ ಕ್ಯಾಲೆಂಡರ್‌ ಜಾರಿಗೆ ತರುವ ಬಗ್ಗೆ ಸರಕಾರದ ಗಮನ ಸೆಳೆಯಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಪ್ರಸ್ತುತ ಒಂದೊಂದು ವಿ.ವಿ. ಒಂದೊಂದು ರೀತಿಯ ಶೈಕ್ಷಣಿಕ ಕ್ಯಾಲೆಂಡರ್‌ ಹೊಂದಿವೆ. ಖಾಸಗಿ ಮತ್ತುಡೀಮ್ಡ್ ವಿ.ವಿ.ಗಳ ಕ್ಯಾಲೆಂಡರ್‌ ಪ್ರತ್ಯೇಕ ವಾಗಿದೆ. ರಾಜ್ಯದಲ್ಲಿ ಏಕರೂಪ ಶೈಕ್ಷಣಿಕ ಕ್ಯಾಲೆಂಡರ್‌ ಜಾರಿಗೆ ತರುವ ಬಗ್ಗೆ ಅನೇಕ ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಆದರೆ ಈವರೆಗೂ ಅದು ಜಾರಿಗೆ ಬಂದಿಲ್ಲ. ಏಕರೂಪ ಶೈಕ್ಷಣಿಕ ಕ್ಯಾಲೆಂಡರ್‌ ಜಾರಿಗೆ ಇದು ಸಕಾಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್‌ ವ್ಯವಸ್ಥೆಗೆ ಒತ್ತು
ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಆನ್‌ಲೈನ್‌ ಬೋಧನೆಗೆ ಕೋವಿಡ್- 19 ರಜೆ ವೇಗ ನೀಡಿದೆ. ಇದನ್ನೇ ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಬದಲಾವಣೆ ತರಲು ಸಾಧ್ಯವಿದೆ. ಸರಕಾರವೂ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಜತೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿದೆ ಮತ್ತು ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆಯಾಗಲಿದೆ ಎಂದು ವಿ.ವಿ.ಯ ಉಪಕುಲಪತಿಯೊಬ್ಬರು ಹೇಳಿದ್ದಾರೆ.

Advertisement

ಎಲ್ಲ ವಿ.ವಿ.ಗಳಿಗೆ ಏಕರೂಪ ಶೈಕ್ಷಣಿಕ ಕ್ಯಾಲೆಂಡರ್‌ ರೂಪಿಸುವ ಚಿಂತನೆ ನಡೆದಿದೆ. ಉನ್ನತ ಶಿಕ್ಷಣ ಪರಿಷತ್‌ ಮೂಲಕ ತಜ್ಞರ ವರದಿ ಪಡೆಯುವ ಕಾರ್ಯ ನಡೆಯುತ್ತಿದೆ. ಲಾಕ್‌ಡೌನ್‌ ಸಡಿಲವಾದ ಅನಂತರ ಈ ಬಗ್ಗೆ ಸ್ಪಷ್ಟವಾದ ನಿರ್ದೇಶನ ಹೊರಡಿಸಲಿದ್ದೇವೆ.
-ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next