ಕೆ.ಆರ್.ಪುರ: ವ್ಹೀಲಿಂಗ್ ಹಾಗೂ ಡ್ರಾಗ್ ರೇಸ್ ಮಾಡುವ ಯುವಕರು, ಒಂದು ಕ್ಷಣ, ಹೆತ್ತವರ ಬಗ್ಗೆ ಯೋಚಿಸಬೇಕು ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಹೇಳಿದರು.
ಇಲ್ಲಿನ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಕೆ.ಆರ್.ಪುರ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ವ್ಹೀಲಿಂಗ್ ಮಾಡುವವರ ಮನಪರಿವರ್ತನಾ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಮ್ಮ ಶೋಕಿಗಾಗಿ ತಂದೆ-ತಾಯಿಯನ್ನು ಬೀದಿಗೆ ತರುವುದು ಸರಿಯೇ ಎಂದು ಪ್ರಶ್ನಿಸಿದರು. ಅಲ್ಲದೆ, ಬೆಂಗಳೂರಲ್ಲಿ ಕಳೆದ ವರ್ಷ 685 ಮಂದಿ ದ್ವಿಚಕ್ರ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಪೈಕಿ 150 ಜನ ವ್ಹೀಲಿಂಗ್‌ನಿಂದ ಸಾವನ್ನಪ್ಪಿದ್ದಾರೆ ಎಂದರು.
ವ್ಹೀಲಿಂಗ್ ಮಾಡುವುದರಿಂದ ಯಾರೂ ಹೀರೋಗಳಾಗಬಹುದು ಎಂದು ತಿಳಿದಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ನಿಜವಾದ ಹೀರೋಗಳಾಗಬೇಕೆಂದರೆ ಪೊಲೀಸ್, ಸೇನೆ, ಎನ್‌ಸಿಸಿಗೆ ಸೇರಿ. ದ್ವಿಚಕ್ರ ವಾಹನ ಚಾಲನೆಯಲ್ಲೇ ಖ್ಯಾತಿ ಗಳಿಸಬೇಕೆಂಬ ಹಂಬಲವಿದ್ದರೆ, ವೃತ್ತಿಪರ ರೇಸಿಂಗ್ ಆಯ್ಕೆ ಮಾಡಿಕೊಳ್ಳಿ. ಅಲ್ಲಿ ಸುರಕ್ಷತೆ ಇರುತ್ತದೆ ಎಂದು ತಿಳಿಸಿದರು.
ಮುಸ್ಲಿಂ ಯುವಕರೇ ಹೆಚ್ಚು: ವ್ಹೀಲಿಂಗ್ ವಿರುದ್ಧ ನಾವು ನಡೆಸಿದ ಕಾರ್ಯಾಚರಣೆಯಲ್ಲಿ ಬಹುತೇಕ ಮುಸ್ಲಿಂ ಯುವಕರೇ ಸಿಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಮುದಾಯದ ಯುವಕರಲ್ಲಿ ಜಾಗೃತಿ ಮೂಡಿಸಲು ಸುತ್ತಮುತ್ತಲಿನ ಎಲ್ಲ ಮಸೀದಿಗಳ ಆಡಳಿತ ಮಂಡಳಿ ಸದಸ್ಯರು, ಸ್ವಯಂ ಸೇವಕರು ಸಹಕಾರ ನೀಡಬೇಕು. ನಾವು ಈ ಹಿಂದೆ ಡ್ರಗ್ಸ್ ಹಾವಳಿ ವಿರುದ್ಧ ನಡೆಸಿದ್ದ ಚಳವಳಿ ಮಾದರಿಯಲ್ಲೆ ವ್ಹೀಲಿಂಗ್ ವಿರುದ್ಧವೂ ಚಳವಳಿ ನಡೆಸಬೇಕಿದೆ ಎಂದು ಡಿಸಿಪಿ ಅಬ್ದುಲ್ ಅಹದ್ ಹೇಳಿದರು.
ಮಕ್ಕಳ ಸಹಾಯವಾಣಿಯ ಹಿರಿಯ ಸಮಾಲೋಚಕಿ ಪ್ರೀತಿ ಬಾಳಿಗಾ, ಯುವಕರೊಂದಿಗೆ ಸಂವಾದ ನಡೆಸಿದರು. ಜಮೀಯತ್ ಉಲೇಮಾ ಬೆಂಗಳೂರು ನಗರ ಜಿಲ್ಲೆಯ ಅಧ್ಯಕ್ಷ ಮೌಲಾನ ಮುಫ್ತಿ ಮುಹಮ್ಮದ್ ಹುಸೇನ್, ಕೆ.ಆರ್.ಪುರ ಠಾಣೆ ಇನ್‌ಸ್ಪೆಕ್ಟರ್ ಜಯರಾಜ್, ವೈಟ್‌ಫೀಲ್ಡ್ ಉಪ ವಿಭಾಗದ ಎಸಿಪಿ ರವಿಶಂಕರ್, ಸಿಲಿಕಾನ್ ಸಿಟಿ ಕಾಲೇಜು ಪ್ರಾಂಶುಪಾಲ ಜ್ಞಾನೇಶ್ ಇತರರು ಉಪಸ್ಥಿತರಿದ್ದರು.
9 ತಿಂಗಳು ತನ್ನ ಗರ್ಭದಲ್ಲಿರಿಸಿಕೊಂಡು, ನಿಮಗೆ ಯಾವುದೇ ತೊಂದರೆ ಆಗದಂತೆ ಕಾಪಾಡುವ ತಾಯಿಯನ್ನು ರಸ್ತೆ ಪಕ್ಕದಲ್ಲಿ ಕೂರಿಸಿ ಆಕೆಯ ಮುಂದೆ ಒಂದು ಬಾರಿ ವ್ಹೀಲಿಂಗ್ ಮಾಡಿ. ಆಕೆಯ ಕರುಳು ಕಿತ್ತು ಬರುತ್ತದೆ.
-ಅಬ್ದುಲ್ ಅಹದ್, ವೈಟ್‌ಫೀಲ್ಡ್ ವಿಭಾಗದ ಡಿಸಿಪಿ