Advertisement

ಪುತ್ತೂರಲ್ಲಿ  ಸಾಲುಮರ ತಿಮ್ಮಕ್ಕ  ಸಸ್ಯೋದ್ಯಾನ

08:15 AM Nov 02, 2017 | Team Udayavani |

ಮಂಗಳೂರು: ಪುತ್ತೂರು ತಾಲೂಕು ಕಲ್ಲಗುಡ್ಡೆಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನವನ ನಿರ್ಮಾಣ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ದ.ಕ. ಜಿಲ್ಲಾಡಳಿತದ ವತಿಯಿಂದ ಬುಧವಾರ ನಗರದ ನೆಹರೂ ಮೈದಾನ  ದಲ್ಲಿ ನಡೆದ ರಾಜ್ಯೋತ್ಸವ ಸಮಾ ರಂಭ ದಲ್ಲಿ ಅವರು ರಾಷ್ಟ್ರ ಧ್ವಜಾರೋಹಣ ನೇರವೇರಿಸಿ ಸಂದೇಶ ನೀಡಿದರು. ಬಂಟ್ವಾಳದಲ್ಲಿ ಈಗಾಗಲೇ 35 ಲಕ್ಷ ರೂ. ವೆಚ್ಚದಲ್ಲಿ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಪುತ್ತೂರಿನ ಕಲ್ಲಗುಡ್ಡೆಯಲ್ಲಿ ಕೆಎಫ್‌ ಡಿಎಫ್‌ ಯೋಜನೆಯಡಿ ಸಸ್ಯೋದ್ಯಾನ ವನ ನಿರ್ಮಿಸಲಾಗುತ್ತಿದೆ ಎಂದವರು ವಿವರಿಸಿದರು.

ರಾಜ್ಯ ಸರಕಾರವು ದ.ಕ. ಜಿಲ್ಲೆ ಯಲ್ಲಿ ಕಾರ್ಯಗತಗೊಳಿಸಿದ ಹಾಗೂ ಹಮ್ಮಿ ಕೊಂಡಿರುವ ವಿವಿಧ ಯೋಜನೆಗಳನ್ನು ವಿವರಿಸಿದ ಸಚಿವರು ನಾಡು- ನುಡಿಯ ಅಭಿವೃದ್ಧಿಯಾಗಬೇಕಾದರೆ ಈ ನೆಲದ ಜನರ ಅಭಿವೃದ್ಧಿಯಾಗಬೇಕು; ಅವರ ಬದುಕು ಶ್ರೀಮಂತವಾಗಬೇಕು. ಭಾಷೆ, ಸಂಸ್ಕೃತಿ, ಪರಂಪರೆಗಳು ನಿರಂತರ ವಾಗಿ ಉಳಿಯಬೇಕಾದರೆ ಇಲ್ಲಿನ ಬದುಕು ಹಸನಾಗಬೇಕು. ಈ ದಿಶೆಯಲ್ಲಿ ಸರಕಾರವು ಹಲವಾರು ಜನಪರ ಕಾರ್ಯ ಕ್ರಮಗಳನ್ನು ಹಮ್ಮಿ ಕೊಂಡಿದೆ ಎಂದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಸಂಸದ ನಳಿನ್‌ ಕುಮಾರ್‌ ಕಟೀಲು, ಮೇಯರ್‌ ಕವಿತಾ ಸನಿಲ್‌, ಮುಡಾ ಅಧ್ಯಕ್ಷ ಕೆ. ಸುರೇಶ್‌ ಬಲ್ಲಾಳ್‌, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಉಪ ಮೇಯರ್‌ ರಜನೀಶ್‌, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ತಾ.ಪಂ. ಅಧ್ಯಕ್ಷ ಮಹಮದ್‌ ಮೋನು, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪಥ ಸಂಚಲನ
ಈ ಸಂದರ್ಭದಲ್ಲಿ ನಡೆದ ಪಥ ಸಂಚಲನ ದಲ್ಲಿ ಪೊಲೀಸ್‌, ಗೃಹರಕ್ಷಕ ದಳ, ಅಗ್ನಿ ಶಾಮಕ ದಳ, ಎನ್‌ಸಿಸಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ , ಅರಣ್ಯ ಪಡೆ, ಭಾರತ್‌ ಸೇವಾದಳ, ಬಾಲಕಿಯರ ರಸ್ತೆ ಸುರಕ್ಷತಾ ದಳ ಸಹಿತ 14 ತಂಡಗಳು ಭಾಗವಹಿಸಿದ್ದವು.

Advertisement

ಅತ್ಯುತ್ತಮ ಪಥ ಸಂಚಲನಕ್ಕಾಗಿ ಬಾಲಕಿಯರ ರಸ್ತೆ ಸುರಕ್ಷತಾ ಮತ್ತು ಗಸ್ತು ದಳ (ಆರ್‌.ಎಸ್‌.ಪಿ) ಪ್ರಥಮ ಹಾಗೂ ಭಾರತ್‌ ಸೇವಾ ದಳದ ಸೀನಿಯರ್‌ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಉದಯವಾಣಿಯ ಮಂಗಳೂರಿನ ಹಿರಿಯ ವರದಿಗಾರ ಕೇಶವ ಕುಂದರ್‌ ಸಹಿತ 15 ಮಂದಿ ಸಾಧಕರಿಗೆ ಮತ್ತು ನಾಲ್ಕು ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರತಿಭಾ ಪುರಸ್ಕಾರ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 12 ಮಂದಿ ಮಕ್ಕಳಿಗೆ ಅಸಾಧಾರಣ ಪ್ರತಿಭಾ ಪುರಸ್ಕಾರ ಹಾಗೂ 2017 ಎಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಜಿಲ್ಲೆಯ 11 ಮಂದಿ ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಮತ್ತು ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನಾಡಗೀತೆ ಗಾಯನ, ಸಾಮೂಹಿಕ ನೃತ್ಯ/ ಕವಾ ಯತು ಪ್ರದರ್ಶನ ನಡೆಯಿತು.

ಸಚಿವ ರೈ ಹೇಳಿದ್ದು
    ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಬಂಟ್ವಾಳದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಪಂಜೆ ಮಂಗೇಶ ರಾವ್‌ ಸ್ಮಾರಕ ಭವನದ ಶಿಲಾನ್ಯಾಸ ಇತ್ತೀಚೆಗೆ ಮುಖ್ಯಮಂತ್ರಿಗಳಿಂದ ನೆರವೇರಿದ್ದು, ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ.

      94 ಸಿ ಯೋಜನೆಯಡಿ ಜಿಲ್ಲೆಯಲ್ಲಿ 82,844 ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 75,455 ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ.

      ನಗರ ಪ್ರದೇಶದಲ್ಲಿ  ಸರಕಾರಿ ಜಮೀನಿನಲ್ಲಿ  ಮನೆ ಕಟ್ಟಿ ವಾಸ್ತವ್ಯ ಇರುವವರ ಅಕ್ರಮ ಸಕ್ರಮ ಮಾಡಲು 94ಸಿಸಿ ಯೋಜನೆ ರೂಪಿಸಿದ್ದು, ಇದುವರೆಗೆ 31,350 ಅರ್ಜಿಗಳು ಸ್ವೀಕೃತವಾಗಿವೆ ಹಾಗೂ 13,518 ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next