Advertisement
ಶುಕ್ರವಾರದ ಅಹ್ಮದಾಬಾದ್ ಮುಖಾಮುಖೀ ಯಲ್ಲಿ ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ಥಾನ ಸರಿಯಾಗಿ 50 ಓವರ್‌ಗಳಲ್ಲಿ 244ಕ್ಕೆ ಆಲೌಟ್ ಆಯಿತು ಹಾಗೂ ಕೂಟದಿಂದ ಅಧಿಕೃತವಾಗಿ ಹೊರಗೆ ಬಿತ್ತು. -0.338 ರನ್‌ರೇಟ್‌ನೊಂದಿಗೆ ಈ ಪಂದ್ಯ ಆರಂಭಿಸಿದ್ದ ಅಫ್ಘಾನ್, ಕನಿಷ್ಠ 438 ರನ್ನುಗಳ ಗೆಲುವು ಸಾಧಿಸಬೇಕಿತ್ತು. ದಕ್ಷಿಣ ಆಫ್ರಿಕಾ ಇದನ್ನು ಬೆನ್ನಟ್ಟಲು 47.3 ಓವರ್ ತೆಗೆದುಕೊಂಡಿತು. 5 ವಿಕೆಟಿಗೆ 247 ರನ್ ಗಳಿಸಿ, 7ನೇ ಗೆಲುವನ್ನು ಸಾಧಿಸಿ ಲೀಗ್ ಹಂತವನ್ನು ಮುಗಿಸಿತು.
ವನ್‌ಡೌನ್ ಬ್ಯಾಟರ್ ರಸ್ಸಿ ವಾನ್ ಡರ್ ಡುಸೆನ್ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು ಗುರಿಯನ್ನು ಬೆನ್ನಟ್ಟುತ್ತ ಮುನ್ನಡೆದರು. ಇವರಿಗೆ ಡೇವಿಡ್ ಮಿಲ್ಲರ್ (24) ಅವರಿಂದ ಒಂದಿಷ್ಟು ಬೆಂಬಲ ಸಿಕ್ಕಿತು. ಬಳಿಕ ಆ್ಯಂಡಿಲ್ ಫೆಲುಕ್ವಾವೊ (ಅಜೇಯ 39) ಸ್ಟಾಂಡ್ ಕೊಟ್ಟರು. ಡುಸೆನ್ ಕೊಡುಗೆ ಅಜೇಯ 76 ರನ್ (95 ಎಸೆತ, 6 ಬೌಂಡರಿ, 1 ಸಿಕ್ಸರ್). ಒಮರ್‌ಜಾಯ್… ಎಂಜಾಯ್…
ಯುವ ಆಲ್‌ರೌಂಡರ್ ಆಜ್ಮತುಲ್ಲ ಓಮರ್‌ಜಾಯ್ ಅವರ ದಿಟ್ಟ ಬ್ಯಾಟಿಂಗ್ ಸಾಹಸದಿಂದ ಅಫ್ಘಾನಿಸ್ಥಾನದ ಮೊತ್ತಕ್ಕೊಂದು ಗೌರವ ಪ್ರಾಪ್ತವಾಯಿತು. 5ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಒಮರ್‌ಜಾಯ್ ಕೇವಲ 3 ರನ್ನಿನಿಂದ ಚೊಚ್ಚಲ ಶತಕ ಸಂಭ್ರಮದಿಂದ ವಂಚಿತರಾದರು. ಕೊನೆಯ ಎಸೆತದಲ್ಲಿ ನವೀನ್ ಉಲ್ ಹಕ್ ರನೌಟ್ ಆಗುವಾಗ ಒಮರ್‌ಜಾಯ್ 97ರಲ್ಲಿ ಅಜೇಯರಾಗಿದ್ದರು. 107 ಎಸೆತಗಳ ಈ ಸೊಗಸಾದ ಆಟದಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿತ್ತು.
Related Articles
Advertisement
ಟಾಸ್ ಗೆದ್ದ ಅಫ್ಘಾನಿಸ್ಥಾನ ತಂಡದ ನಾಯಕ ಹಶ್ಮತುಲ್ಲ ಶಾಹಿದಿ ಬ್ಯಾಟಿಂಗ್ ಆಯ್ದುಕೊಂಡರೂ ಲಾಭವೇನೂ ಆಗಲಿಲ್ಲ. ಸ್ಕೋರ್ 41 ರನ್ ಆಗುವ ತನಕ ನೋಲಾಸ್ ಆಗಿತ್ತಾದರೂ 4 ರನ್ ಅಂತರದಲ್ಲಿ 3 ವಿಕೆಟ್ ಉರುಳಿತು. ಗುರ್ಬಜ್ (25), ಇಬ್ರಾಹಿಂ ಜದ್ರಾನ್ (15) ಮತ್ತು ನಾಯಕ ಶಾಹಿದಿ (2) ಪೆವಿಲಿಯನ್ ಸೇರಿಕೊಂಡರು.
ಈ ಹಂತದಲ್ಲಿ ರೆಹಮತ್ ಶಾ (26) ಮತ್ತು ಅಜ್ಮತುಲ್ಲ ಸೇರಿಕೊಂಡು 49 ರನ್ ಜತೆಯಾಟ ನಡೆಸಿ ತಂಡಕ್ಕೆ ಎದುರಾದ ದೊಡ್ಡ ಮಟ್ಟದ ಹಾನಿಯನ್ನು ತಪ್ಪಿಸಿದರು. ಆದರೆ ಸ್ಕೋರ್ 116ಕ್ಕೆ ಏರುವಷ್ಟರಲ್ಲಿ 6 ವಿಕೆಟ್ ಬಿತ್ತು. ಅಫ್ಘಾನ್ ನೂರೈವತ್ತರ ಆಸುಪಾಸಲ್ಲಿ ಆಲೌಟ್ ಆಗುವ ಆತಂಕಕ್ಕೆ ಸಿಲುಕಿತು. ಆದರೆ ಅಜ್ಮತುಲ್ಲ ಒಮರ್‌ಜಾಯ್ ಒಂದು ಕಡೆ ಬಂಡೆಯಂತೆ ನಿಂತ ಪರಿಣಾಮ ಸ್ಕೋರ್ ಏರುತ್ತ ಹೋಯಿತು. ಅಜ್ಮತುಲ್ಲ-ರಶೀದ್ ಖಾನ್ ಸೇರಿಕೊಂಡು 45 ರನ್ ಜತೆಯಾಟ ನಿಭಾಯಿಸಿದರು. ಮೊತ್ತ 160ಕ್ಕೆ ಏರಿತು. ಆದರೆ ಇದರಲ್ಲಿ ರಶೀದ್ ಪಾಲು ಕೇವಲ 14 ರನ್. 30 ಎಸೆತ ಎದುರಿಸಿದ ಅವರು ಒಂದೂ ಬೌಂಡರಿ ಬಾರಿಸಲಿಲ್ಲ.
ಒಮರ್‌ಜಾಯ್‌ಗೆ ನೂರ್ ಅಹ್ಮದ್ (26) ಉತ್ತಮ ಬೆಂಬಲ ನೀಡಿದರು. 8ನೇ ವಿಕೆಟಿಗೆ 44 ರನ್ ಹರಿದು ಬಂತು. ಸ್ಕೋರ್ ಇನ್ನೂರರ ಗಡಿ ದಾಟಿತು. ಕೊನೆಯ ಇಬ್ಬರು ಆಟಗಾರರ ನೆರವಿನಿಂದ 40 ರನ್ ಒಟ್ಟುಗೂಡಿಸುವಲ್ಲಿ ಅಜ್ಮತುಲ್ಲ ಯಶಸ್ವಿಯಾದರು.
ದಕ್ಷಿಣ ಆಫ್ರಿಕಾ ಪರ ವೇಗಿ ಗೆರಾಲ್ಡ್ 44ಕ್ಕೆ 4 ವಿಕೆಟ್ ಉರುಳಿಸಿ ಹೆಚ್ಚಿನ ಯಶಸ್ಸು ಕಂಡರು. ಲುಂಗಿ ಎನ್‌ಗಿಡಿ ಮತ್ತು ಕೇಶವ್ ಮಹಾರಾಜ್ ತಲಾ 2 ವಿಕೆಟ್ ಕೆಡವಿದರು. ಕೀಪರ್ ಡಿ ಕಾಕ್ 6 ಕ್ಯಾಚ್ ಮಾಡಿದರು. ಇದು ವಿಶ್ವಕಪ್ ಪಂದ್ಯದಲ್ಲಿ ಕೀಪರ್ ಪಡೆದ ಗರಿಷ್ಠ ಕ್ಯಾಚ್‌ಗಳ ಜಂಟಿ ದಾಖಲೆ. ಆ್ಯಡಂ ಗಿಲ್‌ಕ್ರಿಸ್ಟ್ ಮತ್ತು ಸಫìರಾಜ್ ಅಹ್ಮದ್ ಕೂಡ 6 ಕ್ಯಾಚ್ ಮಾಡಿದ್ದಾರೆ.