Advertisement

Congress ಸರಕಾರದ ವಿಶ್ವಾಸ ಅವರಿಗೇ ಇಲ್ಲ! ಸಿ.ಟಿ. ರವಿ ವ್ಯಂಗ್ಯ

11:45 PM Dec 06, 2023 | Team Udayavani |

ಮಂಗಳೂರು: ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಸರಕಾರ ಆಡಳಿತದಲ್ಲಿ ಇರುತ್ತದೆ ಎನ್ನುವ ವಿಶ್ವಾಸ ಕಾಂಗ್ರೆಸ್‌ನವರಿಗೇ ಇಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದ್ದಾರೆ.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಈಗಾಗಲೇ ಬಸವರಾಜ ರಾಯರೆಡ್ಡಿ, ಬಿ.ಆರ್‌. ಪಾಟೀಲ ಬಂಡಾಯ ಎದ್ದಿದ್ದಾರೆ. ಪಾಟೀಲ ಪತ್ರ ಚಳವಳಿ ಮಾಡುತ್ತಿದ್ದಾರೆ. ಅದನ್ನೇನು ನಾವು ಹೇಳಿಕೊಟ್ಟಿಲ್ಲ, ಸರಕಾರ ಉರುಳಿಸಲು ನಾವೇನು ಕಸರತ್ತು ಮಾಡುತ್ತಿಲ್ಲ ಎಂದರು.

ಬಿಜೆಪಿ ಸರಕಾರ ಇದ್ದಾಗಲೇ ಚೆನ್ನಾಗಿತ್ತು ಎಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ಒಂದು ರೂಪಾಯಿ ಕೆಲಸವೂ ಆಗುತ್ತಿಲ್ಲ ಎಂಬ ಬೈಗುಳ ಕೇಳಿ ಬರುತ್ತಿದೆ. ಹಾಗಾಗಿ ಈ ಸರಕಾರ ಮುಂದುವರಿಯುವ ಬಗ್ಗೆ ಅವರಿಗೇ ವಿಶ್ವಾಸವಿಲ್ಲ ಎಂದರು.

ಸಿಎಂ ಹೇಳಿಕೆ ಅಪಾಯಕಾರಿ
ದೇಶದ ಸಂಪತ್ತು ಅಲ್ಪಸಂಖ್ಯಾಕರಿಗೆ ಸೇರಿದ್ದು ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಅಪಾಯಕಾರಿ. ಇದು ಓಲೈಕೆ ರಾಜಕಾರಣ ಹಾಗೂ ಕಾಂಗ್ರೆಸ್‌ನ ಕೋಮುವಾದಿ ನೀತಿಯ ನಿದರ್ಶನ. ಅವರ ಇಂತಹ ಹೇಳಿಕೆಗಳೇ ದೇಶದ ವಿಭಜನೆಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಭಾಗವಹಿಸಿದ್ದ ಹುಬ್ಬಳ್ಳಿಯ ಸಭೆಯಲ್ಲಿ ಐಸಿಸ್‌ ನಂಟಿದ್ದ ವ್ಯಕ್ತಿ ವೇದಿಕೆಯಲ್ಲಿ ಇದ್ದ ಎಂಬ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್‌ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ರವಿ, ಯತ್ನಾಳ್‌ ಅವರು ಸುಮ್ಮನೆ ಆರೋಪ ಮಾಡಿದ್ದಾರೆ ಎಂದು ಅನಿಸುವುದಿಲ್ಲ. ಈ ವಿಷಯದ ಬಗ್ಗೆ ಸಿಬಿಐ ಅಥವಾ ಎನ್‌ಐಎ ತನಿಖೆ ನಡೆಸುವ ಆವಶ್ಯಕತೆ ಇದೆ. ಆ ಕಾರ್ಯಕ್ರಮದಲ್ಲಿ ಯಾರ್ಯಾರು ಇದ್ದರು?, ಅವರ ಹಿನ್ನೆಲೆ ಏನು ಎನ್ನುವ ಬಗ್ಗೆ ಗಂಭೀರ ತನಿಖೆಯಾಗಬೇಕು ಎಂದರು.

Advertisement

ಮಾಜಿ ಸಚಿವ ಸೋಮಣ್ಣ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ರವಿ, ಸಿದ್ಧಗಂಗಾ ಮಠದಲ್ಲಿ ಬುಧವಾರ ಗುರುಭವನದ ಉದ್ಘಾಟನೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ನವರನ್ನು ಆಹ್ವಾನಿಸಲಾಗಿದೆ. ಕೇವಲ ಕಾಂಗ್ರೆಸ್‌ನವರನ್ನೇ ಕರೆದಿದ್ದಾರೆ. ಎನ್ನುವುದು ತಪ್ಪು ಮಾಹಿತಿ. ನನಗೂ ಕಾರ್ಯಕ್ರಮದ ಆಮಂತ್ರಣ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್‌, ಅದೇ ಜಿಲ್ಲೆಯವರಾದ ಸಚಿವ ರಾಜಣ್ಣ ಅವರನ್ನು ಕರೆದಿದ್ದಾರೆ ಎಂದರು.

ಸೋಮಣ್ಣ ಅವರು ಬಿಜೆಪಿ ತ್ಯಜಿಸುವುದಿಲ್ಲ, ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷ ಹೇಳಿದ್ದಕ್ಕೆ ಸೋಮಣ್ಣ ಎರಡು ಕಡೆ ಸ್ಪರ್ಧೆ ಮಾಡಿದ್ದಾರೆ. ಅವರು ಬಿಜೆಪಿ ಬಿಡುತ್ತಾರೆ ಎನ್ನುವುದು ಉಹಾಪೋಹ. ದಿಲ್ಲಿಗೆ ಯಾವಾಗ ಹೋಗುತ್ತಾರೆ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next