Advertisement
ಡಿ.ಕೆ.ಶಿವಕುಮಾರ್ ವಿರುದ್ಧ ತೊಡೆತಟ್ಟಿ ಸಚಿವ ಸ್ಥಾನ ಕಳೆದುಕೊಂಡು ಹಿನ್ನೆಡೆ ಅನುಭವಿಸಿ, ಸಮ್ಮಿಶ್ರ ಸರ್ಕಾರ ಕೆಡವಿ ಯಶಸ್ವಿಯಾದ ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹೊಸ ರಾಜಕೀಯ ಶಕೆ ಪ್ರಾರಂಭಿಸಿದ್ದಾರೆ. ಎಲ್ಲವೂ ಅಂದುಕೊಂಡಿದ್ದೇ ಆಗಿದ್ದರೆ ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಸಹ ಬಿಜೆಪಿ ಸೇರ್ಪಡೆಯಾಗಿ ಚುನಾವಣೆ ಎದುರಿಸಿ ಸಚಿವ ಸ್ಥಾನ ಪಡೆಯಬೇಕಿತ್ತು. ಆದರೆ, ಪುತ್ರಿಯ ಒತ್ತಡ, ನಾನಾ ಕಾರಣಗಳಿಂದ ಕಾಂಗ್ರೆಸ್ ಬಿಡಲು ರೆಡ್ಡಿ ಒಪ್ಪಿರಲಿಲ್ಲ.
Related Articles
Advertisement
ಮೂಲತಃ ಕಾಂಗ್ರೆಸ್‌ನವರಾದ ಎಚ್.ವಿಶ್ವನಾಥ್ ಅವರು ಕಾಂಗ್ರೆಸ್‌ನಲ್ಲಿ ಬೇಸರಗೊಂಡಿದ್ದ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಮುನಿರತ್ನ ಅವರನ್ನು ಒಟ್ಟುಗೂಡಿಸಿ ಜತೆಗೆ ಗೋಪಾಲಯ್ಯ, ನಾರಾಯಣಗೌಡ ಅವರನ್ನು ಸೆಟ್ ಮಾಡಿಕೊಂಡರು. ಅದೇ ವೇಳೆ ರಮೇಶ್ ಜಾರಕಿಹೊಳಿ ಸಹ ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ಜತೆಗೂಡಿ ಸರ್ಕಾರ ಪತನಕ್ಕೆ ಸಿದ್ಧಗೊಂಡರು.
ಇದರ ನಡುವೆಯೇ ಆನಂದ್‌ಸಿಂಗ್, ಬಿ.ಸಿ.ಪಾಟೀಲ್, ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್ ಸಹ ತಮ್ಮ ಕೆಲಸ ಆಗುತ್ತಿಲ್ಲ ಎಂದು ಮೈತ್ರಿ ಕೆಡವಲು ಸಿದ್ಧರಾದರು. ರೋಷನ್‌ಬೇಗ್ ತಮ್ಮದೇ ಆದ ಕಾರಣಕ್ಕೆ ಕಾಂಗ್ರೆಸ್‌ನಿಂದ ಮುನಿಸಿ ಕೊಂಡು ಆಪರೇಷನ್‌ಗೆ ಸಹಕರಿಸಿದರು. ಒಮ್ಮೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸಂಬಂಧಿಕರನ್ನು ನೋಡುವ ನೆಪದಲ್ಲಿ ಎಚ್.ವಿಶ್ವನಾಥ್ ರಾಮಲಿಂಗಾರೆಡ್ಡಿ ನಿವಾಸಕ್ಕೆ ಹೋಗಿ ಪ್ರಸ್ತಾಪ ಮಾಡಿದ್ದರು.
ಆ ನಂತರ ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜ್ ಜತೆಗೂಡಿ ರಾಮಲಿಂಗಾರೆಡ್ಡಿಯವರ ಜತೆ ಮಾತುಕತೆ ನಡೆಸಿದರು. ಯುಬಿ ಸಿಟಿಯ ಕಚೇರಿ ಯೊಂದ ರಲ್ಲಿ 3 ಹಂತದ ಮಾತುಕತೆಗಳು ನಡೆದಿದ್ದವು. ಇದಾದ ನಂತರ ಹೈಕಮಾಂಡ್ ಮನೆ ಬಾಗಿಲಿಗೆ ಬಂದಿ ದ್ದರಿಂದ ರಾಮಲಿಂಗಾರೆಡ್ಡಿ ಹಿಂದೇಟು ಹಾಕಿದರು. ಆದರೆ, ಉಳಿದವರು ಮುಂಬೈ ತಲುಪಿ ವಾಸ್ತವ್ಯ ಹೂಡಿದ್ದರು.
ಮುಂದೇನಾಗುತ್ತೋ: ಈ ಮಧ್ಯೆ, ಆಪರೇಷನ್ ಕಮಲ ಕಾರ್ಯಾಚರಣೆ ಭಾಗವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ ಎಂದು ಬರೆದುಕೊಟ್ಟ ತಪ್ಪಿಗೆ ಪಕ್ಷೇತರ ಶಾಸಕನಾದರೂ ಅನರ್ಹತೆಗೊಳಗಾಗಿ ಟಿಕೆಟ್ ಪಡೆಯದೆ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿದ ಆರ್.ಶಂಕರ್‌ಗೂ ಸದ್ಯಕ್ಕೆ ಸಚಿವಗಿರಿ ಸಿಕ್ಕಿಲ್ಲ. ಜೂನ್‌ನಲ್ಲಿ ನಡೆಯಲಿರುವ ವಿಧಾನಪರಿಷತ್ ಚುನಾವಣೆವರೆಗೂ ಕಾಯಬೇಕು. ಆಗಿನ ರಾಜಕೀಯ ಸ್ಥಿತಿಗತಿ ಏನಾಗುವುದೋ ನೋಡಬೇಕು.
“ಹಳ್ಳಿಹಕ್ಕಿ’ ಪುಸ್ತಕದಲ್ಲೇನಿರಲಿದೆ?: ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದ ಘಟನಾ ವಳಿಗಳೂ ಹಾಗೂ ಅದರ ಹಿಂದಿನ ಕಸರತ್ತುಗಳ ಬಗ್ಗೆ ಮಾಜಿ ಸಚಿವ ಎಚ್.ವಿಶ್ವ ನಾಥ್ ಪುಸ್ತಕ ಬರೆಯುತ್ತಿದ್ದು, ಅದರಲ್ಲಿ ಎಚ್.ವಿಶ್ವನಾಥ್ ಅವರು ಕಾಂಗ್ರೆಸ್ ಶಾಸಕರ ಮನವೊಲಿಸಿದ್ದು, ರಾಮಲಿಂಗಾರೆಡ್ಡಿ ಅವರ ನಿವಾಸದಲ್ಲಿ ಮಾತುಕತೆ ನಡೆಸಿದ್ದು, ಮುಂಬೈ ಹೋಟೆಲ್‌ನಲ್ಲಿ ಸಂವಿಧಾನ,
ಪಕ್ಷಾಂತರ ನಿಷೇಧ ಕಾಯ್ದೆ ಮತ್ತಿತರ ವಿಚಾರ ಗಳ ಬಗ್ಗೆ ಉಪನ್ಯಾಸ ನೀಡಿ ಒಪ್ಪಿಸಿದ್ದು, ಬಿಜೆಪಿ ನಾಯಕರ ಜತೆ ರಹಸ್ಯ ಸ್ಥಳದಲ್ಲಿ ಕುಳಿತು ಕಾರ್ಯತಂತ್ರ ರೂಪಿಸಿದ್ದ ವಿವರಗಳು ಇರಲಿವೆ. ಕಾಂಗ್ರೆಸ್‌ನಲ್ಲಿದ್ದರೆ ಸಚಿವ ಸ್ಥಾನ ಅಸಾಧ್ಯ ಎಂದು ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜ್, ಡಾ.ಕೆ.ಸುಧಾಕರ್ ಪದೇಪದೆ ಹೇಳುತ್ತಿದ್ದರು. ಜೆಡಿಎಸ್‌ನಲ್ಲಿದ್ದರೆ ನಮ್ಮ ಕಥೆ ಇಷ್ಟೇ ಎಂದು ಗೋಪಾಲಯ್ಯ, ನಾರಾಯಣಗೌಡ ಹೇಳುತ್ತಿದ್ದರು.
* ಎಸ್. ಲಕ್ಷ್ಮಿನಾರಾಯಣ