Advertisement

ಐಷಾರಾಮಿ ಜೀವನಕ್ಕಾಗಿ ಇವು ವಿಶ್ವದ ಅತ್ಯಂತ ದುಬಾರಿ ನಗರಗಳು; ಇಲ್ಲಿದೆ ಪಟ್ಟಿ

07:06 PM Jun 20, 2023 | Team Udayavani |

ಐಷಾರಾಮದ ಜೀವನ ನಡೆಸುವುದು ಹಲವರ ಕನಸು. ದೊಡ್ಡ ದೊಡ್ಡ ನಗರಗಳಲ್ಲಿ ಮನೆ ಹೊಂದಿರಬೇಕು, ತಮ್ಮ ಸ್ಟೇಟಸ್ ಗೆ ಸರಿ ಹೊಂದುವ ನಗರದಲ್ಲಿ ವಾಸಿಸಬೇಕು ಎಂದು ಯೋಜನೆ ರೂಪಿಸುವರು ಇದ್ದಾರೆ. ಇದೀಗ ಸ್ವಿಸ್ ವೆಲ್ತ್ ಮ್ಯಾನೇಜರ್ ಜೂಲಿಯಸ್ ಬೇರ್ ಗ್ರೂಪ್ ಲಿಮಿಟೆಡ್‌ ಎಂಬ ಸಂಸ್ಥೆಯು ಐಷಾರಾಮದ ಜೀವನಕ್ಕಾಗಿ ಅತ್ಯಂತ ದುಬಾರಿ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisement

ಏಷ್ಯಾದ ಸಿಂಗಾಪುರವು ವಿಶ್ವದ ಅತ್ಯಂತ ದುಬಾರಿ ನಗರ ಎಂಬ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದೆ. 2022ರಲ್ಲಿ ಐದನೇ ಸ್ಥಾನದಲ್ಲಿದ್ದ ಶ್ರೀಮಂತರ ಪ್ರಮುಖ ಜಾಗತಿಕ ಕೇಂದ್ರವಾದ ಸಿಂಗಾಪುರ ಈ ಬಾರಿ ಮೊದಲ ಸ್ಥಾನಕ್ಕೇರಿದೆ. ಕೋವಿಡ್ ಸಮಯದಲ್ಲಿ ತನ್ನ ಗಡಿಗಳನ್ನು ತೆರೆದ ಮೊದಲ ದೇಶವಾದ ಸಿಂಗಾಪುರ ಶ್ರೀಮಂತರಿಗೆ ಆಕರ್ಷಣೀಯ ಸ್ಥಳವಾಗುತ್ತಿದೆ. 2022 ರ ಅಂತ್ಯದ ವೇಳೆಗೆ, ಸಿಂಗಾಪುರದಲ್ಲಿ ಅಂದಾಜು 1,500 ಕೌಟುಂಬಿಕ ಕಚೇರಿಗಳು ಆರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಎರಡು ಪಟ್ಟು ಹೆಚ್ಚು. ಅಲ್ಲದೆ ಕಾರುಗಳ ದರದಲ್ಲಿಯೂ ಇದು ವಿಶ್ವದ ಅತ್ಯಂತ ದುಬಾರಿ ನಗರ.

ಉನ್ನತ ಜೀವನಮಟ್ಟ ಮತ್ತು ಸ್ಥಳೀಯ ಮೂಲ ಸೌಕರ್ಯಗಳ ಮೇಲಿನ ಹೆಚ್ಚುತ್ತಿರುವ ಬೇಡಿಗೆ ಕಾರಣದಿಂದ ಇಲ್ಲಿನ ಜೀವನವು ಅತ್ಯಂತ ದುಬಾರಿಯಾಗಿದೆ ಎಂದು ಮಂಗಳವಾರ ಬಿಡುಗಡೆಯಾದ ವರದಿ ಹೇಳಿದೆ. ಇಲ್ಲಿ ವಸತಿ ಆಸ್ತಿಗೆ ಹೆಚ್ಚಿನ ಬೇಡಿಕೆಯಿದೆ. ಮತ್ತು ಅಗತ್ಯ ಆರೋಗ್ಯ ವಿಮೆಗಳು ಜಾಗತಿಕ ಸರಾಸರಿಗಿಂತ 109% ಹೆಚ್ಚು ದುಬಾರಿಯಾಗಿದೆ ಎಂದು ಮೊದಲ ಸ್ಥಾನದಲ್ಲಿರುವ ಸಿಂಗಾಪುರವನ್ನು ಉದ್ದೇಶಿಸಿ ವರದಿ ಹೇಳಿದೆ.

ಜೂಲಿಯಸ್ ಬೇರ್ ಸಂಸ್ಥೆಯು ವಿಶ್ವದ 25 ಅತ್ಯಂತ ದುಬಾರಿ ನಗರಗಳನ್ನು ಪಟ್ಟಿ ಮಾಡಿದೆ. ವಸತಿ ಸಮುಚ್ಛಯ, ಕಾರುಗಳು, ಬ್ಯುಸಿನೆಸ್ ಕ್ಲಾಸ್ ವಿಮಾನಗಳು, ಬ್ಯುಸಿನೆಸ್ ಸ್ಕೂಲ್ ಗಳು, ಆಹಾರ ಮತ್ತು ಇತರ ಐಷಾರಾಮಿ ವಿಚಾರಗಳನ್ನು ಪರಿಗಣನೆ ಮಾಡಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ಈ ವರದಿಯ ಪ್ರಕಾರ ಏಷ್ಯಾ ಖಂಡವು ಅತ್ಯಂತ ದುಬಾರಿ ಪ್ರದೇಶವಾಗಿದೆ. ಸತತ ನಾಲ್ಕು ವರ್ಷಗಳಿಂದ ಏಷ್ಯಾ ಮೊದಲ ಸ್ಥಾನದಲ್ಲಿದೆ.

ಕಳೆದ ವರ್ಷದ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದ ನ್ಯೂಯಾರ್ಕ್ ಈ ಬಾರಿ ಐದನೇ ಸ್ಥಾನಕ್ಕೇರಿದೆ. ಶಕ್ತಿ ಪಡೆದುಕೊಂಡ ಡಾಲರ್ ಮತ್ತು ಕೋವಿಡ್ ಬಳಿಕದ ಸುಧಾರಣೆಗಳು ಇದಕ್ಕೆ ಕಾರಣವಾಗಿದೆ.

Advertisement

ನ್ಯೂಯಾರ್ಕ್ ನಗರ

ಶಾಂಘಾಯ್ ಮತ್ತು ಹಾಂಗ್ ಕಾಂಗ್ ನಗರಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿದ್ದ ಲಂಡನ್ ಈ ಬಾರಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಬ್ರೆಕ್ಸಿಟ್ ಮತ್ತು ನಂತರದ ಪ್ರಕ್ಷುಬ್ದತೆಯ ಕಾರಣದಿಂದ ಲಂಡನ್ ನ ಖ್ಯಾತಿ ಕಡಿಮೆಯಾಗಿದೆ. ಅಲ್ಲದೆ ದುಬೈ ಮತ್ತು ಸಿಂಗಾಪುರದಂತಹ ನಗರಗಳು ಆರ್ಥಿಕ ಕೇಂದ್ರಗಳಾಗಿ ಬೆಳೆಯುತ್ತಿರುವುದು ಕೂಡಾ ಇದಕ್ಕೆ ಕಾರಣ ಎಂದು ಜೂಲಿಯಸ್ ಬೇರ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜೂಲಿಯಸ್ ಬೇರ್ ವರದಿ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಯೂರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ದೇಶಗಳು ಉತ್ತಮವಾಗಿ ಬದುಕಲು ಸೂಕ್ತ ಪ್ರದೇಶಗಳಾಗಿದೆ. ಯುರೋಪಿಯನ್ ನಗರಗಳು ಶ್ರೇಯಾಂಕದಲ್ಲಿ ಇಳಿಕೆ ಕಾಣುತ್ತಿವೆ.

ದುಬೈ ಇದೇ ಮೊದಲ ಬಾರಿಗೆ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದು ಏಳನೇ ಸ್ಥಾನಕ್ಕೆ ಏರಿದೆ. ಹೆಚ್ಚಿನ ಸಂಖ್ಯೆಯ ಶ್ರೀಮಂತ ವ್ಯಕ್ತಿಗಳ ಸ್ಥಳಾಂತರವು ಆಸ್ತಿ ಬೆಲೆಗಳು ಮತ್ತು ಬೇಡಿಕೆಯ ಮೇಲೆ ಪರಿಣಾಮ ಬೀರಿದೆ ಎಂದು ವರದಿ ಹೇಳಿದೆ.

ಸಾಂಕ್ರಾಮಿಕ ನಿರ್ಬಂಧಗಳನ್ನು ತೆಗೆದುಹಾಕಿದ್ದರಿಂದ ಪ್ರಯಾಣ ಮತ್ತು ಮನರಂಜನೆಗಾಗಿ ಬೇಡಿಕೆಗಳು ಹೆಚ್ಚುತ್ತಿದೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. ವೈನ್‌ ಮತ್ತು ವಿಸ್ಕಿಗಳ ಬೆಲೆಯು ಜಾಗತಿಕವಾಗಿ ಕ್ರಮವಾಗಿ 17.2% ಮತ್ತು 16.2% ರಷ್ಟು ಏರಿಕೆಯಾಗಿದೆ.

ಹೋಟೆಲ್ ಸೂಟ್‌ಗಳು ಮತ್ತು ಬ್ಯುಸಿನೆಸ್ ದರ್ಜೆಯ ವಿಮಾನಗಳು ದುಬಾರಿಯಾಗಿದೆ. ಆದರೆ ಸಾಂಕ್ರಾಮಿಕ ಸಮಯದಲ್ಲಿ “ಬಹಳ ದುಬಾರಿ” ಆಗಿದ್ದ ಬೈಸಿಕಲ್‌ ಗಳ ಬೆಲೆಗಳು 1.8% ರಷ್ಟು ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next