Advertisement

ಮೊದಲೇ ಇತ್ತು ಸೇರ್ಪಡೆ ಸುಳಿವು!

12:09 PM May 11, 2018 | |

ಬೆಂಗಳೂರು: ಮತದಾರರ ಗುರುತಿನಚೀಟಿ ಅಕ್ರಮ ಸಂಗ್ರಹ ಪ್ರಕರಣದ ಕೇಂದ್ರಬಿಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆ ಮೀರಿ ಮತದಾರರ ಸೇರ್ಪಡೆಯಾಗುತ್ತಿರುವ ಬಗ್ಗೆ ಫೆಬ್ರವರಿ ಅಂತ್ಯದಲ್ಲೇ ಸುಳಿವು ಸಿಕ್ಕಿತ್ತು.

Advertisement

ಹೌದು, ಫೆ.28ರಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿ ಪ್ರಕಾರ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ರಾಜರಾಜೇಶ್ವರಿ ನಗರವು ಎರಡನೇ ಅತಿ ಹೆಚ್ಚು (25,825 ಸೇರ್ಪಡೆ) ಮತದಾರರು ಸೇರ್ಪಡೆಗೊಂಡ ಕ್ಷೇತ್ರ. ಅಲ್ಲದೆ, ಜನಸಂಖ್ಯೆಗೆ ಅನುಗುಣವಾಗಿ ಮತದಾರರ ಪ್ರಮಾಣ (ಇಪಿ ರೇಷಿಯೊ)ದಲ್ಲೂ ಒಟ್ಟಾರೆ ನಗರದ ಸರಾಸರಿಗಿಂತ ಆ ಕ್ಷೇತ್ರದಲ್ಲಿ ಸಾಕಷ್ಟು ಏರಿಕೆ ಕಂಡುಬಂದಿತ್ತು. ಇದು ನಂತರದಲ್ಲಿಯೂ ಮತ್ತಷ್ಟು ಏರಿಕೆ ಆಗಿರುವುದು ಕಂಡುಬಂದಿದೆ.  

ನಗರ ಜಿಲ್ಲಾ ವ್ಯಾಪ್ತಿಯ ಜನಸಂಖ್ಯೆಗೆ ಅನುಗುಣವಾಗಿ ಮತದಾರರ ಪ್ರಮಾಣ ಫೆ. ಅಂತ್ಯಕ್ಕೆ ಸರಾಸರಿ ಶೇ. 66.84ರಷ್ಟಿದೆ. ಆದರೆ, ಆರ್‌.ಆರ್‌. ನಗರದಲ್ಲಿ ಈ ಪ್ರಮಾಣ ಶೇ. 72.78 ಇದೆ. ಈ ಮಧ್ಯೆ ಮಾರ್ಚ್‌ನಿಂದ ಇದುವರೆಗೆ ಮತ್ತೆ 44 ಸಾವಿರ ಮತದಾರರು ಸೇರ್ಪಡೆಯಾಗಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

ಕೇವಲ ಆರ್‌.ಆರ್‌. ನಗರವಲ್ಲದೆ ಮಹದೇವಪುರ, ಯಶವಂತಪುರ, ಯಲಹಂಕ ಸೇರಿದಂತೆ ಮತ್ತಿತರ ಕಡೆಗಳಲ್ಲೂ ಅಸ್ವಾಭಾವಿಕವಾಗಿ ಮತದಾರರ ಸಂಖ್ಯೆ ಏರಿಕೆಯಾಗಿದೆ. ಈ ಬಗ್ಗೆ ಮೂರು ತಿಂಗಳ ಹಿಂದೆಯೇ ಚುನಾವಣಾ ಆಯೋಗಕ್ಕೆ ನಾನು ದೂರು ಸಲ್ಲಿಸಿದ್ದೇನೆ.

ನಿಯಮದ ಪ್ರಕಾರ ಶೇ. 4ಕ್ಕಿಂತ ಹೆಚ್ಚು ಮತದಾರರ ಸಂಖ್ಯೆ ಏರಿಕೆಯಾದರೆ ಅಥವಾ ಶೇ. 2ಕ್ಕಿಂತ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿದ್ದು ಕಂಡುಬಂದರೆ, ಅದೊಂದು ಎಚ್ಚರಿಕೆ ಗಂಟೆಯಾಗುತ್ತದೆ. ಆ ಬಗ್ಗೆ ತನಿಖೆ ನಡೆಸಬೇಕು ಎಂದು ನಿಯಮವೇ ಹೇಳುತ್ತದೆ. ಆದರೆ, ಇಲ್ಲಿ ಅಂತಹ ಯಾವುದೇ ಪ್ರಯತ್ನಗಳು ನಡೆದಂತೆ ಕಂಡುಬರುತ್ತಿಲ್ಲ ಎಂದು ಚುನಾವಣಾ ಪ್ರಕ್ರಿಯೆಗಳ ವಿಶ್ಲೇಷಕ ಟಿ.ಜಿ. ಭಟ್‌ ಆರೋಪಿಸುತ್ತಾರೆ.
 
ಗೊಂದಲ ಸೂಚನೆ: ನವೆಂಬರ್‌ನಿಂದ ಫೆಬ್ರವರಿ 28ರವರೆಗೆ ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ 25,825 ಮತದಾರರು ಸೇರ್ಪಡೆಯಾಗಿದ್ದರೆ, ಪರಿಷ್ಕರಣೆ (ಮಾರ್ಚ್‌-ಮೇ) ಅವಧಿಯಲ್ಲಿ 16,558 ಜನ ಸೇರ್ಪಡೆಯಾಗಿದ್ದಾರೆ. ಇದರಿಂದ ಇಪಿ ರೇಷಿಯೊ ಶೇ. 72.78ರಿಂದ ಶೇ. 75ಕ್ಕೆ ಏರಿಕೆ ಆಗುತ್ತದೆ. ಇದರರ್ಥ ಆ ಕ್ಷೇತ್ರದಲ್ಲಿ ಮತದಾರರ ಸೇರ್ಪಡೆಯಲ್ಲಿ ಗೊಂದಲ ಇರುವುದರ ಸೂಚನೆಯೇ ಆಗಿದೆ ಎಂದು ಯುವ ಮತದಾರ ನೋಂದಣಿ ಮತ್ತು ಜಾಗೃತಿ ಅಭಿಯಾನ ಕಾರ್ಯಕರ್ತ ಆನಂದ್‌ ತೀರ್ಥ ತಿಳಿಸುತ್ತಾರೆ. 

Advertisement

ಸ್ವತಃ ಚುನಾವಣಾ ಆಯೋಗ ತಿಳಿಸಿದಂತೆ ಬೂತ್‌ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ತೆರಳಿ ಮತದಾರರ ನೋಂದಣಿ ಮಾಡಿಸಿದ್ದಾರೆ. ಹಾಗಾಗಿ, ಇಷ್ಟೊಂದು ಪ್ರಮಾಣ ಮತದಾರರ ಏರಿಕೆ ಹಿನ್ನೆಲೆಯಲ್ಲಿ ಬೂತ್‌ ಮಟ್ಟದ ಅಧಿಕಾರಿಗಳ ನೋಂದಣಿ ಪ್ರಕ್ರಿಯೆ ಪ್ರಶ್ನಾರ್ಹವಾಗಿದೆ. ಅದೇನೇ ಇರಲಿ, ಈಗ ಕಾಲ ಮಿಂಚಿದೆ. ಆದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಾದರೂ ಈ ಗೊಂದಲ ಪುನರಾವರ್ತನೆ ಆಗದಂತೆ ಎಚ್ಚರ ವಹಿಸುವ ಅವಶ್ಯಕತೆ ಇದೆ ಎಂದೂ ಅವರು ಹೇಳುತ್ತಾರೆ. 

ನಗರದಲ್ಲಿ ಮತದಾರರ ಸೇರ್ಪಡೆ ಪ್ರಮಾಣ ಸರಾಸರಿ ಶೇ. 6ರಷ್ಟಿದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಶೇ. 10ರಷ್ಟಿದೆ. ಆದರೆ, ಮತದಾರರ ಗುರುತಿನಚೀಟಿ ಅಕ್ರಮ ಸಂಗ್ರಹ ಪ್ರಕರಣಕ್ಕೂ ಮತ್ತು ರಾಜರಾಜೇಶ್ವರಿ ನಗರದಲ್ಲಿನ ಮತದಾರರ ಪ್ರಮಾಣ ಏರಿಕೆಗೂ ಯಾವುದೇ ಸಂಬಂಧ ಇಲ್ಲ.
-ಸಂಜೀವ್‌ ಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ. 

ಅತಿ ಹೆಚ್ಚು ಇಪಿ ರೇಷಿಯೊ ಕ್ಷೇತ್ರಗಳು
-ಯಶವಂತಪುರ    ಶೇ.74.54
-ಯಲಹಂಕ    ಶೇ.73.10
-ಆರ್‌.ಆರ್‌.ನಗರ    ಶೇ.72.78
-ಕೆ.ಆರ್‌. ಪುರ    ಶೇ.71.81
ಒಟ್ಟಾರೆ ನಗರ ಜಿಲ್ಲೆಯ ಸರಾಸರಿ    ಶೆ.66.84

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next