Advertisement

ಸದನದಲ್ಲಿ ಮತ್ತೂಂದು ಬಾರಿ ಅಕ್ಕಿ ಗದ್ದಲ

10:20 PM Jul 13, 2023 | Team Udayavani |

ಬೆಂಗಳೂರು: ಉಗ್ರಾಣದಲ್ಲಿ ಸಾಕಷ್ಟು ಅಕ್ಕಿ ಇದ್ದರೂ ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಅಕ್ಕಿ ಕೊಟ್ಟಿಲ್ಲ. ಮುಂದೆ ಇದನ್ನು ದೊಡ್ಡ ವಿಚಾರ ಮಾಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ನಿಮ್ಮನ್ನು ಹಾಕಿಕ್ಕೊಂಡು ಅರೆಯುತ್ತೇವೆ ಎಂದು ಕಾಂಗ್ರೆಸ್‌ ಶಾಸಕ ಕೆ.ಎಂ.ಶಿವಲಿಂಗೇಗೌಡ ನೀಡಿದ ಹೇಳಿಕೆ ಆಡಳಿತ-ವಿಪಕ್ಷ ನಾಯಕರ ಮಧ್ಯೆ ತೀವ್ರ ವಿವಾದ ಸೃಷ್ಟಿಸಿದೆ.

Advertisement

ವಂದನಾ ನಿರ್ಣಯದ ಬಗ್ಗೆ ಮಾತನಾಡುವುದಕ್ಕೆ ಅವಕಾಶ ಕೊಡಿ ಎಂದು ಶಿವಲಿಂಗೇಗೌಡ ಬುಧವಾರವೇ ಮನವಿ ಸಲ್ಲಿಸಿದ್ದರು. ಆದರೆ 10.30ರ ಬದಲು ತಡವಾಗಿ ಬಂದಿದ್ದರಿಂದ ಸ್ಪೀಕರ್‌ ಖಾದರ್‌ ಬೇರೆಯವರಿಗೆ ಅವಕಾಶ ಮಾಡಿಕೊಟ್ಟರು. ನೀವೇನು ನನಗೆ ಮಾತನಾಡುವುದಕ್ಕೆ ಕೊಡುತ್ತೀರೋ, ಇಲ್ಲವೋ ಎಂದು ಶಿವಲಿಂಗೇಗೌಡರು ಸ್ಪೀಕರ್‌ ಜತೆ ವಾಗ್ವಾದ ನಡೆಸಿದರು.

ನೀವು ನಿಮಗೆ ಬೇಕಾದವರನ್ನು ಕರೆದು ಕರೆದು ಮಾತನಾಡಿಸುತ್ತೀರಿ. ಅವರಷ್ಟೇ ಹಕ್ಕು ನನಗೂ ಇಲ್ಲವೇ ಎಂದು ಪ್ರಶ್ನಿಸಿದರು. ಎಲ್ಲರಿಗೂ ಹಕ್ಕಿದೆ. ಆದರೆ ನೀವು 11.45ಕ್ಕೆ ಬಂದು ಮಾತನಾಡಲು ಬಿಡಿ ಎಂದರೆ ಮೊದಲು ಬಂದವರು ಕಾಯುತ್ತಾ ಕುಳಿತುಕೊಳ್ಳಬೇಕಾ ಎಂದು ಸ್ಪೀಕರ್‌ ಕೋಪಗೊಂಡರು. ಆಗ ಅವರಿಗೆ ಮಾತನಾಡಲು ಅವಕಾಶ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಭಾಷಣದ ಆರಂಭದಲ್ಲಿ ಶಿವಲಿಂಗೇಗೌಡ, ಕೇಂದ್ರದ ವಿರುದ್ಧ ವಾಗ್ಧಾಳಿ ನಡೆಸಿದ್ದು, ಬಿಜೆಪಿ ಶಾಸಕರ ಕೋಪಕ್ಕೆ ಕಾರಣವಾಯಿತು. ಶಿವಲಿಂಗೇಗೌಡರ ಪ್ರತಿ ಮಾತಿಗೂ ಬಿಜೆಪಿಯವರು ಎದ್ದು ನಿಂತು ತಿರುಗೇಟು ನೀಡಲಾರಂಭಿಸಿದಾಗ ಕಾಂಗ್ರೆಸ್‌ನ ಕೆಲವು ಶಾಸಕರು ಅವರ ಬೆಂಬಲಕ್ಕೆ ನಿಂತರು. ಅಕ್ಕಿ ಕೊಡದೇ ಗೋಡೌನ್‌ನಲ್ಲಿ ಇಟ್ಟುಕೊಂಡಿದ್ದೀರಿ. ಅದೇನು ಇಲಿ ತಿನ್ನುವುದಕ್ಕಾ? ಈ ರೀತಿ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ನೀವು ಪ್ರತಿಫ‌ಲ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಏನೂ ಮಾಡುವುದಿಲ್ಲ
ಈ ಹಂತದಲ್ಲಿ ಮಧ್ಯ ಪ್ರವೇಶಿಸಿ ಶಿವಲಿಂಗೇಗೌಡರ ನೆರವಿಗೆ ಧಾವಿಸಿದ ಲಕ್ಷ್ಮಣ ಸವದಿ ಈ ರೀತಿ ಎದ್ದೆದ್ದು ಗಲಾಟೆ ಮಾಡುವುದು ದಿಲ್ಲಿಯಲ್ಲಿ ರೆಕಾರ್ಡ್‌ ಆಗುತ್ತಿದೆ. ಅವರೆಲ್ಲರೂ ವಿಪಕ್ಷ ನಾಯಕನ ಸ್ಥಾನಕ್ಕೆ ಕ್ಯೂ ನಿಂತಿದ್ದಾರೆ. ಪ್ರತಿ ಮಾತಿಗೂ ಮಾರ್ಕ್ಸ್ ಬರುತ್ತದೆ ಎಂದು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದರಿಂದ ಸಿಟ್ಟಿಗೆದ್ದ ಅಶ್ವತ್ಥನಾರಾಯಣ, ಆರ್‌.ಅಶೋಕ್‌, ಸಿ.ಸಿ.ಪಾಟೀಲ್‌, ಸುರೇಶ್‌ ಕುಮಾರ್‌ ಅವರು ಸವದಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

Advertisement

ನೀವು ಇಲ್ಲಿದ್ದಾಗ ಹೇಗೆ ನೋಡಿಕೊಂಡಿದ್ದೇವೆ ಎಂಬುದನ್ನು ಮರೆತುಬಿಟ್ಟಿರಾ? ನಿಮ್ಮನ್ನು ಉಪಮುಖ್ಯಮಂತ್ರಿ ಮಾಡಿರಲಿಲ್ಲವೇ? ಅಲ್ಲಿ ಯಾವ ಬಹುಮಾನವನ್ನೂ ಕೊಡುವುದಿಲ್ಲ. ಯಾವ ಸ್ಥಾನಮಾನವನ್ನೂ ಕೊಡುವುದಿಲ್ಲ. ನಿಮ್ಮ ಹಣೆಬರಹಕ್ಕೆ ಹಿಂದೆ ಕುಳ್ಳಿರಿಸಿದ್ದಾರೆ. ಆರಾಮವಾಗಿ ಕುಳಿತುಕೊಳ್ಳಿ ಎಂದು ಅಶ್ವತ್ಥನಾರಾಯಣ ವಾಗ್ಧಾಳಿ ನಡೆಸಿದರು.

ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ನಾನು ಸುಮ್ಮನೆ ಕುಳಿತುಕೊಳ್ಳಬೇಕಿತ್ತಾ? ನಿಮ್ಮ ಹಾಗೆ ತೋಳು ಮಡಚಿ ಕುಳಿತುಕೊಳ್ಳಬೇಕಿತ್ತಾ ಎಂದು ಸವದಿ ತಿರುಗೇಟು ಕೊಟ್ಟರು. “ರೀ ಅಶ್ವತ್ಥನಾರಾಯಣ ಅವರೇ, ನಿಮಗೆ ತಾಕತ್ತಿದ್ದರೆ ಮಲ್ಲೇಶ್ವರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ನಿಂತು ಗೆದ್ದು ತೋರಿಸಿ’ ಎಂದು ಶಿವಲಿಂಗೇಗೌಡ ಸವಾಲು ಹಾಕಿದರು. ತಾಕತ್‌ ತೋರಿಸಬೇಕಾ? ನಾವೇನು ಕೈ ಕಟ್ಟಿ ಕುಳಿತಿಲ್ಲ ಗೌಡರೇ ಎಂದು ಅಶ್ವತ್ಥನಾರಾಯಣ ತಿರುಗೇಟು ಕೊಟ್ಟರು.

ಡೋಂಟ್‌ ಅಲೋ ಹಿಮ್‌
ಆಗ ಮಧ್ಯ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ ಅಶ್ವತ್ಥ ನಾರಾಯಣಗೆ ದಯವಿಟ್ಟು ಮಾತನಾಡಲು ಅವಕಾಶ ಕೊಡಬೇಡಿ (ಪ್ಲೀಜ್‌ ಡೋಂಟ್‌ ಅಲೋ ಹಿಮ್‌) ಎಂದು ಸ್ಪೀಕರ್‌ಗೆ ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿ.ಸಿ.ಪಾಟೀಲ್‌, ನೀವು ಸದನವನ್ನು ಈ ರೀತಿ ನಿರ್ದೇಶಿಸುವುದು ತಪ್ಪು. ದಯಮಾಡಿ ಆ ಪದವನ್ನು ಕಡತದಿಂದ ತೆಗೆದು ಹಾಕಿ ಎಂದು ಸ್ಪೀಕರ್‌ಗೆ ಮನವಿ ಮಾಡಿದರು. ಇದು ಅಸಂಸದೀಯ ಶಬ್ದವಲ್ಲ, ನಾನು ಪ್ಲೀಸ್‌ ಎಂದು ಹೇಳಿದ್ದೇನೆ ಎಂದು ಸಿಎಂ ಸಮರ್ಥಿಸಿಕೊಂಡರು. ಹಾಗಾದರೆ ಪ್ಲೀಸ್‌ ಎಂದು ಹೇಳಿ ಏನು ಬೇಕಾದರೂ ಸೇರಿಸಬಹುದೇ ? ಪ್ಲೀಸ್‌, ಕಿಲ್‌ ಹಿಮ್‌ ಎನ್ನಬಹುದೇ ಎಂದು ಸುರೇಶ್‌ ಕುಮಾರ್‌ ಪ್ರಶ್ನಿಸಿದರು.

ಲೋಕಸಭಾ ಚುನಾವಣೆಯಲ್ಲಿ ಅರೆಯುತ್ತೇವೆ
ವಾಗ್ವಾದದ ಮಧ್ಯೆ ಕಾಂಗ್ರೆಸ್‌ನ ಕೆ.ಎಂ.ಶಿವಲಿಂಗೇಗೌಡರಿಗೆ ಮತ್ತೆ ಮಾತನಾಡುವುದಕ್ಕೆ ಅವಕಾಶ ಕಲ್ಪಿಸಿದಾಗ, ಅಕ್ಕಿ ಕೊಡದಿರುವ ಮೂಲಕ ಕೇಂದ್ರ ರಾಜ್ಯಕ್ಕೆ ಅವಮಾನ ಮಾಡಿದೆ. ಇದು ಒಕ್ಕೂಟ ವ್ಯವಸ್ಥೆಯ ಲಕ್ಷಣವಾ? ಈ ಕಾರಣಕ್ಕಾಗಿ ನಾವು ಒಕ್ಕೂಟ ವ್ಯವಸ್ಥೆಗೆ, ಭಾರತ ಮಾತೆಗೆ ಜೈ ಎನ್ನಬೇಕಾ? ಇದನ್ನು ನೋಡಿ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ನಿಮ್ಮನ್ನು ಹಾಕ್ಕೊಂಡು ಅರಿತೇವೆ. ಎನ್‌ಡಿಎ ಸರಕಾರವನ್ನು ಕಿತ್ತು ಹಾಕುತ್ತೇವೆ ಎಂದು ಅಬ್ಬರಿಸಿದರು. ಇದರಿಂದ ಸದನದಲ್ಲಿ ತೀವ್ರ ವಾಗ್ವಾದ ಸೃಷ್ಟಿಯಾಯಿತು. “ಇಷ್ಟು ವರ್ಷ ಜೆಡಿಎಸ್‌ನಲ್ಲಿ ಏನು ಅರೆದಿರಿ, ಈಗ ಕಾಂಗ್ರೆಸ್‌ನಲ್ಲಿ ಏನನ್ನು ಅರೆಯುತ್ತೀರಿ’ ಎಂದು ಸದನಕ್ಕೆ ಮೊದಲು ಹೇಳಿ ಎಂದು ಸುನಿಲ್‌ ಕುಮಾರ್‌ ವ್ಯಂಗ್ಯವಾಡಿದರು. ಅಂತಿಮವಾಗಿ ಕಾಂಗ್ರೆಸ್‌ನ ಎಲ್ಲ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾವಿಸಿಯೇ ಶಿವಲಿಂಗೇಗೌಡ ಮಾತು ಮುಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next