Advertisement
ಅರಬ್ಬೀ ಸಮುದ್ರದ ಮೂಡು ದಡದ ಮಟ್ಟದಲ್ಲಿ ಇರುವ ಕಾರಣಕ್ಕಾಗಿಯೇ ಈ ಹೆಸರು ಬಂದಿದೆ. 547 ಮನೆಗಳಿದ್ದು, 2,509 ಜನಸಂಖ್ಯೆ. 602 ಹೆಕ್ಟೇರ್ ಇದರ ವಿಸ್ತೀರ್ಣ. 2 ದೇವಾಲಯ, 4 ಅಂಗನವಾಡಿ ಗಳು, ಮಟ್ಟು ಕೊಪ್ಲದಲ್ಲಿ 1ಅನುದಾನಿತ ಹಿ.ಪ್ರಾ. ಶಾಲೆ ಹೊಂದಿದೆ. ಪ್ರಗತಿಪರ ಕೃಷಿಕರು, ಕೃಷಿಯತ್ತ ಹೊರಳುತ್ತಿರುವ ಯುವ ಪೀಳಿಗೆ, ಆಧುನಿಕ ಸ್ಪರ್ಧಾತ್ಮಕ ಕೃಷಿ-ಹೀಗೆ ಮಿಶ್ರಭಾವದ ಗ್ರಾಮವಿದು.
Related Articles
Advertisement
ಪ್ರವಾಸಿಗರ ಕಣ್ಮನ ಸೆಳೆಯುವ ಮಟ್ಟು ಬೀಚ್, ಪಿನಾಕಿನಿ ಹೊಳೆಯ ವಿಹಂಗಮ ನೋಟ, ಪಕ್ಷಿಗಳ ಸಂಕುಲ ಪ್ರವಾಸಿಗರನ್ನು ಅತೀ ಹೆಚ್ಚು ಆಕರ್ಷಿಸುತ್ತದೆ. ಪ್ರವಾಸೋದ್ಯಮಕ್ಕೆ ಪೂರಕವೆಂಬಂತೆ ಈಗಾಗಲೇ ಹಲವು ರೆಸಾರ್ಟ್‌ಗಳೂ ತಲೆ ಎತ್ತಿವೆ.
ಉಪ್ಪು ನೀರು ಬಾಧೆ-ಅಣೆಕಟ್ಟು ಸಮಸ್ಯೆ
ಮಟ್ಟು ಗ್ರಾಮದ ಸುತ್ತಲೂ ನೀರಿದ್ದರೂ ಕುಡಿಯುವ ನೀರಿಗೆ ತತ್ವಾರ ಅನುಭವಿಸುತ್ತಿದೆ. ಇಲ್ಲಿ ಸುಭದ್ರ ಅಣೆಕಟ್ಟು ಅವಶ್ಯಕ. ಹಳೆಯ ಅಣೆಕಟ್ಟು ಸಮರ್ಪಕವಾಗಿಲ್ಲದೆ ಸಮುದ್ರದ ಉಬ್ಬರದ ಸಂದರ್ಭ ಉಪ್ಪು ನೀರು ನುಗ್ಗಿ ಬರುವುದರಿಂದ ಸ್ಥಳೀಯರ ಬಾವಿಯಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ. ವರ್ಷಪೂರ್ತಿ ಕುಡಿಯುವ ನೀರು ಸರಬರಾಜು ಪೂರೈಸುವ ಯೋಜನೆಯನ್ನು ಗ್ರಾ.ಪಂ ಜಾರಿಗೊಳಿಸಬೇಕಿದೆ. ಆ ನಿಟ್ಟಿನಲ್ಲಿ ಮಟ್ಟುವಿನಲ್ಲಿ ಪಿನಾಕಿನಿ ಹೊಳೆಗೆ ಹೊಸ ಅಣೆಕಟ್ಟು ನಿರ್ಮಿಸಿ, ಹಳೆಯ ಅಣೆಕಟ್ಟು ಕೆಡವಲ್ಪಟ್ಟಲ್ಲಿ ಸಿಹಿ ನೀರು ಲಭ್ಯವಾಗಲಿದೆ. ಇದು ಐದು ದಶಕಗಳ ಸಮಸ್ಯೆಗೂ ಪರಿಹಾರವಾಗಲಿದೆ.
ನದಿ ದಂಡೆಯ ಅವಶ್ಯಕತೆ
ಹೊಳೆಯ ಹೂಳೆತ್ತದ ಪರಿಣಾಮ ನದಿ ತಿರುವು ಪಡೆದುಕೊಳ್ಳುತ್ತಿದ್ದು, ಭೂಭಾಗವನ್ನು ಅತಿಕ್ರಮಿಸು ತ್ತಿದೆ. ಇವೆಲ್ಲದರಿಂದ ನದಿ ನೀರು ಕೃಷಿ ಭೂಮಿಗೂ ನುಗ್ಗುತ್ತಿದೆ. ಇದನ್ನು ತಡೆಯಲು ಹೂಳೆತ್ತುವುದರ ಜತೆಗೆ ನದಿ ದಂಡೆ ನಿರ್ಮಿಸಬೇಕಿದೆ. ಆಗ ಕೃಷಿ ಭೂಮಿ ಉಳಿಸಲು ಸಾಧ್ಯ. ಕಳೆದ ಕೆಲ ವರ್ಷಗಳಲ್ಲಿ ಹಲವು ಬಾರಿ ಅತಿವೃಷ್ಟಿಯಿಂದಾಗಿ ನೆರೆಬಾಧಿತವಾಗಿರುತ್ತದೆ. ಬೆಳೆ ಹಾನಿ, ಮನೆ ಹಾನಿ ಸಹಿತ ಅಪಾರವಾದ ನಷ್ಟವನ್ನು ಗ್ರಾಮಸ್ಥರು ಅನುಭವಿಸುವಂತಾಗಿದೆ.
ಪೇಟೆಂಟ್ ಹೊಂದಿರುವ ಮಟ್ಟುಗುಳ್ಳ
ಇಲ್ಲಿನ ಗುಳ್ಳ ದೇಶವಿದೇಶಗಳಲ್ಲೂ ಪರಿಚಿತ. ಈ ಬೆಳೆಗೆ ವಿಶೇಷವಾದ ಇತಿಹಾಸವು ಇದೆ. ಹಿಂದೆ ಉಡುಪಿ ಶ್ರೀ ಕೃಷ್ಣ ಮಠದ ಸ್ವಾಮಿ ಶ್ರೀ ವಾದಿರಾಜ ಸ್ವಾಮಿ ಅವರು ಮಟ್ಟು ಗ್ರಾಮಕ್ಕೆ ಭೇಟಿ ನೀಡಿದರಂತೆ. ಆಗ ಅಲ್ಲಿನ ಮೊಗವೀರ ಕುಟುಂಬಗಳು ಮೀನುಗಾರಿಕೆಯನ್ನೇ ಕಸುಬು ಮಾಡಿಕೊಂಡಿದ್ದರು. ಇದನ್ನು ಕಂಡು ಶ್ರೀ ವಾದಿರಾಜರು ಮೊಗವೀರ ಬಂಧುಗಳಿಗೆ ಒಂದು ಹಿಡಿ ಮಣ್ಣನ್ನು ಎತ್ತಿ ಕೈಯಲ್ಲಿ ನೀಡಿದಾಗ ಅದು ಗುಳ್ಳದ ಬೀಜವಾಗಿ ಪರಿವರ್ತನೆಗೊಂಡಿತು ಎಂಬ ಪ್ರತೀತಿ ಇದೆ. ಈ ಗ್ರಾಮದ ಗುಳ್ಳಕ್ಕೆ ವಿಶೇಷ ರುಚಿ. ಮಟ್ಟುಗುಳ್ಳ ಬೆಳೆಗಾರರ ಸಂಘವು ಬೆಳೆಗಾರರಿಂದ ಮಟ್ಟುಗುಳ್ಳವನ್ನು ಖರೀದಿಸಿ ಗ್ರೇಡಿಂಗ್ ನಡೆಸಿ ನೇರ ಮಾರುಕಟ್ಟೆಯ ಮೂಲಕ ಮಾರಾಟ ನಡೆಸಿ ಬೆಳೆಗಾರರಿಗೆ ಬೆನ್ನೆಲುಬಾಗಿ ನಿಂತಿದೆ.
ವೆಂಟೆಡ್ ಡ್ಯಾಂ ಆಗಲಿ: ಪಿನಾಕಿನಿ ಹೊಳೆಗೆ ವೆಂಟೆಡ್ ಡ್ಯಾಂ ನಿರ್ಮಾಣಗೊಂಡಲ್ಲಿ ಮಟ್ಟು, ಕೋಟೆ, ಮೂಡಬೆಟ್ಟು, ಕಟಪಾಡಿ, ಕಾಪು, ಪಾಂಗಾಳ, ಇನ್ನಂಜೆ, ಪೊಲಿಪು ಪ್ರದೇಶಗಳ ಸಾವಿರಾರು ಎಕರೆಗೆ ಸಿಹಿ ನೀರು ಲಭ್ಯವಾಗಲಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯಾದಿಯಾಗಿ ನೀರಾವರಿ ಇಲಾಖೆ, ತೋಟಗಾರಿಕೆ ಇಲಾಖೆ, ನಬಾರ್ಡ್ ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ. –ಲಕ್ಷ್ಮಣ್ ಮಟ್ಟು,, ಪ್ರಗತಿಪರ ಕೃಷಿಕರು
ಚರಂಡಿ ನಿರ್ಮಿಸಿ: ಗ್ರಾಮ ಸಂಪರ್ಕದ ಪ್ರಮುಖ ದ್ವಿಪಥ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣದ ಆವಶ್ಯಕತೆ ಇದೆ. ನೂತನ ಸೇತುವೆಯಿಂದ ಬೀಚ್ ವರೆಗೂ ಘನವಾಹನ ಸಂಚಾರಕ್ಕೆ ರಸ್ತೆಯೂ ನಿರ್ಮಾಣಗೊಂಡಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ನದಿ ಕೊರೆತ, ಕಡಲ್ಕೊರೆತ, ಕುಡಿಯುವ ನೀರಿನ ಶಾಶ್ವತ ಯೋಜನೆಗಳು ಅನುಷ್ಠಾನಗೊಳ್ಳಬೇಕಿದೆ. –ಕಿಶೋರ್ ಕುಮಾರ್ ಅಂಬಾಡಿ, ಅಧ್ಯಕ್ಷರು, ಕೋಟೆ ಗ್ರಾ.ಪಂ.
-ವಿಜಯ ಆಚಾರ್ಯ ಉಚ್ಚಿಲ