Advertisement

ಬ್ರಿಟಿಷ್‌ ಆಡಳಿತ ಪದ್ಧತಿ ಇನ್ನೂ ಇದೆ

01:15 AM Jun 09, 2019 | Team Udayavani |

ಬೆಂಗಳೂರು: ಕಡತ ವಿಲೇವಾರಿ ವ್ಯವಸ್ಥೆ ನೋಡಿದಾಗ ಸರ್ಕಾರಿ ಕಚೇರಿಗಳಲ್ಲಿ ಬ್ರಿಟಿಷರ ಭಾರತೀಯ ಪ್ರತಿನಿಧಿಗಳು ಕೆಲಸ ಮಾಡುತ್ತಿರುವಂತೆ ಕಾಣುತ್ತದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ವಿಷಾದ ವ್ಯಕ್ತಪಡಿಸಿದ್ದಾರೆ.

Advertisement

ರಂಗಪಂಚಮಿ ಸಂಸ್ಥೆ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ “ಜನಪರ ಸಂಸ್ಕೃತಿ ಉತ್ಸವ’ದಲ್ಲಿ “ವೈದ್ಯ ರತ್ನ’ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, “ನಮ್ಮಲ್ಲಿ ಇನ್ನೂ ಬ್ರಿಟಿಷ್‌ ಮಾದರಿ ಆಡಳಿತ ಪದ್ಧತಿ ಇದ್ದು, ಅದರ ಬದಲಿಗೆ ಆಮೆರಿಕನ್‌ ಮಾದರಿ ಆಡಳಿತ ಪದ್ಧತಿ ಬರಬೇಕು ಎಂದರು.

ಸರ್ಕಾರಿ ಕಚೇರಿಗಳಲ್ಲಿನ ಕಡತ ವಿಲೇವಾರಿ ದೊಡ್ಡ ಸಮಸ್ಯೆ. ಒಂದು ದಿನದಲ್ಲಿ ಆಗುವ ಕೆಲಸಕ್ಕೆ ಒಂದು ವರ್ಷ ತೆಗೆದುಕೊಳ್ಳುತ್ತಾರೆ. ನಮಗೆ ಸಂಪನ್ಮೂಲಗಳ ಕೊರತೆ ಇಲ್ಲ, ಹಣದ ಅಥವಾ ಬುದ್ಧಿವಂತಿಕೆಯ ಕೊರತೆಯೂ ಇಲ್ಲ. ಪ್ರತಿಯೊಂದು ಕಡತವನ್ನು ಸಮಾಜದ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ನೋಡಬೇಕು.

ಭಾರತೀಯರಿಗೆ ತೊಂದರೆ ಕೊಡಬೇಕು ಅನ್ನುವುದೇ ನಮ್ಮನ್ನು ಆಳಿದ ಬ್ರಿಟಿಷರ ಮುಖ್ಯ ಉದ್ದೇಶವಾಗಿತ್ತು. ಅದರಂತೆ ನೋಡಿದರೆ ಸರ್ಕಾರಿ ಕಚೇರಿಗಳಲ್ಲಿ ಇಂದಿಗೂ ಬ್ರಿಟಿಷರ ಪ್ರತಿನಿಧಿ ಭಾರತೀಯರು ಕೆಲಸ ಮಾಡುತ್ತಿರುವಂತೆ ಕಾಣುತ್ತದೆ ಎಂದರು.

ಮನುಷ್ಯ ಹುಟ್ಟು-ಸಾವಿನ ನಡುವಿನ ಬದುಕನ್ನು ವಿಶ್ವಮಾನವನಾಗಿ ಬಾಳಬೇಕು. ಮಾತು ಸಾಧನೆ ಆಗದೇ ಸಾಧನೆಯೇ ಮಾತಾಗಬೇಕು. ಸಾಧನೆ ನಮಗೆ ದೊಡ್ಡತನ ತಂದು ಕೊಡುತ್ತದೆ. ಸಾಧನೆಯೇ ನಮಗೆ ಆಭರಣವಾಗಬೇಕು. ಕೆಸರಲ್ಲಿರುವ ಕಮಲ ದೇವರ ಪಾದದಲ್ಲಿ ಇಡಲಾಗುತ್ತದೆ. ಆದರೆ, ಬೆಟ್ಟದಲ್ಲಿರುವ ದೇವಸ್ಥಾನದ ಸ್ವಚ್ಛ ಜಾಗದಲ್ಲಿ ಬೆಳೆದ ಪಾಪಸಕಳ್ಳಿಯನ್ನು ದೇವರ ಪಾದದಲ್ಲಿ ಇಡಲಾಗುವುದಿಲ್ಲ.

Advertisement

ಬೇರೆಯವರ ನೋವು ಅರ್ಥ ಮಾಡಿಕೊಂಡು, ಇನ್ನೊಬ್ಬರ ಕಣ್ಣೀರು ಒರೆಸುವ ಕೆಲಸ ಮಾಡಿದರೆ ನಮ್ಮ ಬದುಕು ಸಾರ್ಥಕ ಎನಿಸುತ್ತದೆ. ಹುಟ್ಟುವಾಗಿನ ಜಾತಕ ಮತ್ತು ಸತ್ತಾಗಿನ ಸೂತಕದ ನಡುವಿನ ಬದುಕು ನಾಟಕ ಇದ್ದಂತೆ. ಆದರೆ, ಈ ನಾಟಕ ಸಮಾಜಮುಖೀ ಆಗಿರಬೇಕು ಎಂದು ಡಾ. ಮಂಜುನಾಥ್‌ ಹೇಳಿದರು.

ದತ್ತಿ ನಿಧಿ ಪ್ರಶಸ್ತಿ ಪ್ರದಾನ: ಈ ವೇಳೆ ಹೈಕೋರ್ಟ್‌ ವಿಶ್ರಾಂಶ ನ್ಯಾ.ಸುಭಾಷ್‌ ಬಿ. ಅಡಿ ಅವರಿಗೆ “ನ್ಯಾಯರತ್ನ’ ಪ್ರಶಸ್ತಿ, ಹಿರಿಯ ಚಲನಚಿತ್ರ ನಿರ್ದೇಶಕ ಸಿ.ವಿ.ಶಿವಶಂಕರ್‌ರವರಿಗೆ “ಚಿತ್ರರತ್ನ’ ಪ್ರಶಸ್ತಿ, ರಂಗಭೂಮಿಯ ಬೆಳಕು ತಜ್ಞ ಮುದ್ದಣ್ಣ ಶಿರಹಟ್ಟಿಗೆ “ಸಿ.ಜಿ.ಕೆ.’ ಪ್ರಶಸ್ತಿ, ಹಿರಿಯ ಪತ್ರಕರ್ತೆ ಡಾ.ವಿಜಯ ಅವರಿಗೆ “ಮಾಧ್ಯಮ ರತ್ನ’ ಪ್ರಶಸ್ತಿ ಹಾಗೂ ಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣಗೆ “ರಂಗಚೇತನ ರತ್ನ’, ಸಾಹಿತಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರಿಗೆ “ಸಾಹಿತ್ಯ ರತ್ನ’ ಮತ್ತು ಹೃದ್ರೋಗ ತಜ್ಞ ಡಾ.ರವಿ ಶಿವರಾಜಯ್ಯ ಮs… ಅವರಿಗೆ “ವೈದ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಣೆಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಡಾ. ಶಿವರಾಜ್‌ ವಿ. ಪಾಟೀಲ್‌, ರಂಗಪಂಚಮಿ ಸಂಸ್ಥಾಪಕ ಕಾರ್ಯದರ್ಶಿ ನಂಜುಂಡಸ್ವಾಮಿ ತೊಟ್ಟವಾಡಿ ಮತ್ತಿತರರು ಇದ್ದರು.

ವೈದ್ಯರು ಸುಲಿಗೆ ಮಾಡುತ್ತಾರೆ ಎಂಬ ಭಾವನೆ ಸರಿಯಲ್ಲ. ಜನರಿಗಾಗಿ ಅವರು ಹಗಲಿರುಳು ಕೆಲಸ ಮಾಡುತ್ತಾರೆ. ವೈದ್ಯಕೀಯ ಸೇವೆಯಲ್ಲಿ ಮಾನವೀಯತೆ ಮುಖ್ಯ. ವೈದ್ಯರ ಮೇಲಿನ ಹಲ್ಲೆ ಮಾಡುವ ಮತ್ತು ಆಸ್ಪತ್ರೆಗಳ ಆಸ್ತಿ-ಪಾಸ್ತಿ ನಾಶ ಮಾಡುವ ಮನೋಭಾವ ಸಮಾಜದಿಂದ ಹೋಗಬೇಕು.
-ಡಾ.ಸಿ.ಎನ್‌.ಮಂಜುನಾಥ್‌, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next