Advertisement

ಅಭಿವೃದ್ಧಿಗೆ ಪ್ರಯತ್ನಿಸಿದ ತೃಪ್ತಿ ಇದೆ

12:08 PM Jun 16, 2018 | |

ಶಿವಮೊಗ್ಗ: ವಿಧಾನ ಪರಿಷತ್‌  ಸದಸ್ಯರಾಗಿ ಕೈಗೊಂಡ ಕಾರ್ಯ ಸಂಪೂರ್ಣ ತೃಪ್ತಿ ತರದಿದ್ದರೂ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಪ್ರಯತ್ನ ನಡೆಸಿರುವ ಅಲ್ಪ ತೃಪ್ತಿ ಇದೆ ಎಂದು ವಿಧಾನಪರಿಷತ್‌ ಸದಸ್ಯ ಎಂ.ಬಿ. ಭಾನುಪ್ರಕಾಶ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿದ್ದ ತಮ್ಮನ್ನು ಗುರುತಿಸಿ ಪಕ್ಷ ಹಲವು ಜವಾಬ್ದಾರಿ ನೀಡಿದೆ. ಅದಕ್ಕೆ ಅಭಾರಿಯಾಗಿದ್ದೇನೆ. 2012ರಲ್ಲಿ ತಮ್ಮನ್ನು ವಿಧಾನ ಪರಿಷತ್‌ಗೆ ನೇಮಕ ಮಾಡಿತು. 6 ವರ್ಷದ ಅವಧಿಯಲ್ಲಿ ತಮ್ಮ ಅಧಿಕಾರದ ಇತಿಮಿತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇನೆ. 

ಜನತೆಗೆ ಸೌಕರ್ಯ ದೊರಕಿಸಿಕೊಡುವಲ್ಲಿ ಪ್ರಯತ್ನಪಟ್ಟಿದ್ದೇನೆ. ಅದರಲ್ಲಿ ಸಾಕಷ್ಟು ಸಫಲನಾಗಿದ್ದೇನೆ ಎಂದರು. ಕಳೆದ 6 ವರ್ಷ ಅವಧಿಯಲ್ಲಿ ಸುಮಾರು 10.5 ಕೋಟಿ ರೂ. ಅನುದಾನ ಸರ್ಕಾರದಿಂದ ಬಂದಿದೆ. ಬಂದಂತಹ ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿದ್ದೇನೆ. ಕೈಗೊಂಡ ಬಹುತೇಕ ಎಲ್ಲ ಕಾಮಗಾರಿಗಳು
ಪೂರ್ಣಗೊಂಡಿವೆ ಎಂದು ತಿಳಿಸಿದರು.

ಕುಡಿಯುವ ನೀರಿಗೆ 1 ಕೋಟಿ ರೂ., ಸಮುದಾಯ ಭವನಕ್ಕೆ 2.5 ಕೋಟಿ ರೂ., ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ 1 ಕೋಟಿ ರೂ., ಶಾಲಾ ಕೊಠಡಿಗೆ 2 ಕೋಟಿ ರೂ., ಶಾಸಕರ ಅನುದಾನದಲ್ಲಿ ನೀಡಲಾಗಿದೆ. ಸುಮಾರು 40 ಲಕ್ಷ
ರೂ. ವೆಚ್ಚದಲ್ಲಿ ಉಂಬ್ಲೆಬೈಲು ಗ್ರಾಮಕ್ಕೆ ಕುಡಿಯುವ ನೀರಿನ ಸೌಕರ್ಯ ದೊರಕಿಸಿಕೊಟ್ಟಿದ್ದು, ತಮಗೆ ಸಮಾಧಾನ ತಂದಂತಹ ಕಾಮಗಾರಿಗಳಲ್ಲೊಂದಾಗಿದೆ. ಜೊತೆಗೆ ಮಂಡೇನಕೊಪ್ಪ ಗ್ರಾಮಕ್ಕೂ ಕುಡಿಯುವ ನೀರಿನ ಸೌಕರ್ಯ
ದೊರಕಿಸಿಕೊಟ್ಟಿದ್ದೇನೆ ಎಂದರು.

ತಮ್ಮ ಅವಧಿಯಲ್ಲಿ ಶ್ರೀರಾಮನಗರದಲ್ಲಿ ಮಾದರಿ ಅಂಗನವಾಡಿ ನಿರ್ಮಿಸಿಕೊಡಲು ಸಾಧ್ಯವಾಗಿದೆ. ಬೈಪಾಸ್‌ ಸಮೀಪದ ಹಕ್ಕಿಪಿಕ್ಕಿ ಜನಾಂಗ ವಾಸಿಸುತ್ತಿರುವ ಸ್ಥಳಕ್ಕೆ ಹೈಮಾಸ್ಕ್ ದೀಪ, ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಕೊಡಲಾಗಿದೆ.

Advertisement

ಹೊಸಹಳ್ಳಿಯಲ್ಲಿ ಸುಮಾರು 30 ಲಕ್ಷ ರೂ.ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣಗೊಂಡಿದೆ. ಇನ್ನು 15 ದಿನದಲ್ಲಿ ಅದರ ಉದ್ಘಾಟನೆ  ನೆರವೇರಲಿದೆ.  ವಿಕಲಚೇತನರಿಗೆ ಸೌಕರ್ಯ ದೊರಕಿಸಿಕೊಟ್ಟಿದ್ದೇನೆ. ಅಗಸವಳ್ಳಿ ಗ್ರಾಪಂ ವ್ಯಾಪ್ತಿಯ ರಾಮೇನಕೊಪ್ಪ ಅತ್ಯಂತ ಹಿಂದುಳಿದ ಗ್ರಾಮವಾಗಿತ್ತು. ಅಲ್ಲಿ ಮೂಲಸೌಕರ್ಯ ಕಲ್ಪಿಸಲು 1 ಕೋಟಿ ರೂ. ಅನುದಾನದಲ್ಲಿ ವಿವಿಧ ಕಾಮಗಾರಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಗಿರೀಶ್‌ ಪಟೇಲ್‌, ಎಸ್‌. ದತ್ತಾತ್ರಿ, ಬಿಳಕಿ ಕೃಷ್ಣಮೂರ್ತಿ, ಡಿ.ಎಸ್‌. ಅರುಣ್‌, ಎಸ್‌.ಎನ್‌. ಚನ್ನಬಸಪ್ಪ, ಎನ್‌.ಜೆ. ರಾಜಶೇಖರ್‌, ಎಸ್‌. ಜ್ಞಾನೇಶ್ವರ್‌ ಹಿರಣ್ಣಯ್ಯ ಮತ್ತಿತರರು ಇದ್ದರು.

‌ಕಳೆದ ಹಲವು ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ತಮ್ಮ ಜೀವನದಲ್ಲಿ ಯಾವುದೇ ಸ್ಥಾನಮಾನಕ್ಕೆ ಅರ್ಜಿ ಸಲ್ಲಿಸಿಲ್ಲ. ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಆದರೆ ಕಳೆದ ಒಂದೂವರೆ ವರ್ಷದಿಂದ ಈಚೆಗೆ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ನೀಡದಿರುವುದು ತಮ್ಮ ಮನಸ್ಸಿಗೆ ನೋವುಂಟು ಮಾಡಿದೆ. ತಮಗೆ ಸೂಕ್ತ ಜವಾಬ್ದಾರಿ ನೀಡಿದರೆ ನಿಭಾಯಿಸುತ್ತೇನೆ. ಇಲ್ಲವಾದಲ್ಲಿ ಹಿಂದಿನಂತೆ ಸಂಘದ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತೇನೆ.

ಎಂ.ಬಿ. ಭಾನುಪ್ರಕಾಶ್‌, ವಿಧಾನಸಭಾ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next